ಕುಡುಕರನ್ನು ಮನೆಗೆ ಒಯ್ಯಲು ಓಲಾ ರೀತಿ ಟ್ಯಾಕ್ಸಿ!
ಮದ್ಯಪ್ರಿಯರನ್ನು ಮನೆಗೆ ತಲುಪಿಸಲು ಓಲಾ ರೀತಿ ಟ್ಯಾಕ್ಸಿ!| 27ರ ಯುವಕನಿಂದ ಮಂಗಳೂರಿನಲ್ಲಿ ಪ್ರಾರಂಭ| 500 ರು. ಶುಲ್ಕ ಮೊದಲ ದಿನವೇ 30 ಮಂದಿ ಕರೆ
ಸಂದೀಪ್ ವಾಗ್ಲೆ
ಮಂಗಳೂರು[ಸೆ.15]: ಬಾರ್‌ನ ಮಬ್ಬುಗತ್ತಲಿನ ‘ಗುಂಡು ಮೇಜಿನ ಸಭೆ’ಯಲ್ಲಿ ಪಾನಮತ್ತರಾಗಿ ಹೊರಗೆ ಬಂದರೆ, ಪೊಲೀಸರ ‘ಡ್ರಿಂಕ್ ಆ್ಯಂಡ್ ಡ್ರೈವ್’ ದಂಡ ತಪ್ಪಿಸೋದು ಹೇಗಪ್ಪಾ ಎಂಬ ಚಿಂತೆಯೇ? ಇನ್ನು ಮುಂದೆ ಈ ಚಿಂತೆಯೇ ಬೇಕಿಲ್ಲ. ಕೇವಲ ಒಂದು ಕರೆ ಮಾಡಿ. ನೀವು ಹೇಳಿದ ಸಮಯಕ್ಕೆ ವಾಹನ ಬಂದು ಸುರಕ್ಷಿತವಾಗಿ ನಿಮ್ಮನ್ನು ಮನೆ ಸೇರಿಸುತ್ತದೆ!
ಹೌದು. ಪೊಲೀಸರ ದಂಡ ತಪ್ಪಿಸಲೆಂದೇ ಮಂಗಳೂರಿನಲ್ಲಿ ಉಬರ್, ಓಲಾದಂತೆ ಟ್ಯಾಕ್ಸಿ ವ್ಯವಸ್ಥೆ ಮಾಡಲಾಗಿದೆ. ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಜಾರಿ ಬಳಿಕ ನಗರದಲ್ಲೀಗ ಹೊಚ್ಚ ಹೊಸ ಬ್ಯುಸಿನೆಸ್‌ಗೆ ‘ಮೆಡಿಕಲ್ ರೆಪ್’ ಆಗಿರುವ 27ರ ಯುವಕ ರಾಮನಾಥ್ ಪ್ರಭು ಕೈಹಾಕಿದ್ದಾರೆ. ‘ಕುಡಿದ ಬಳಿಕ ಮನೆ ಸೇರಲು ಡ್ರಾಪ್ ಬೇಕೆ? ಕರೆ ಮಾಡಿ, ಪೊಲೀಸ್ ದಂಡದಿಂದ ತಪ್ಪಿಸಿಕೊಳ್ಳಿ’ ಎನ್ನುವುದೇ ಇವರ ಪ್ರಚಾರ ವಾಕ್ಯ.
ಇದೀಗ ರಾಜ್ಯ ಸರ್ಕಾರ ಹಳೆಯ ದಂಡ ಪದ್ಧತಿ ಮರು ಜಾರಿ ಮಾಡುವುದಾಗಿ ಹೇಳಿದ್ದರೂ ಏನಿಲ್ಲವೆಂದರೂ 2 ಸಾವಿರ ರುಪಾಯಿಯನ್ನಂತೂ ಕಟ್ಟಲೇಬೇಕು. ರಾಜ್ಯ ಸರ್ಕಾರದ ಈ ನಿರ್ಧಾರ ಕೂಡ ತಾತ್ಕಾಲಿಕ. ಮುಂದೆ ಇನ್ನಷ್ಟುದುಬಾರಿಯಾಗುವ ನಿರೀಕ್ಷೆಯಿದೆ. ಹೀಗಾಗಿ ಮದ್ಯ ಕುಡಿದ ಬಳಿಕ ಸ್ವಂತ ವಾಹನ ಏರದೆ ಈ ವಿಶೇಷ ಟ್ಯಾಕ್ಸಿ ಹತ್ತಿದರೆ ಅಲ್ಪ ಮೊತ್ತ ಪಾವತಿಸಿ ಮನೆ ಸೇರಬಹುದು.
.500 ಕೊಡಿ, ಮನೆ ಸೇರಿ: ಪ್ರಸ್ತುತ ಈ ವಾಹನ ವ್ಯವಸ್ಥೆ ಮಂಗಳೂರು ನಗರಕ್ಕಷ್ಟೇ ಸೀಮಿತ. ಉತ್ತರಕ್ಕೆ ಕೂಳೂರು- ಕಾವೂರುವರೆಗೆ, ಪೂರ್ವಕ್ಕೆ ಪಡೀಲ್‌ವರೆಗೆ, ದಕ್ಷಿಣಕ್ಕೆ ತೊಕ್ಕೊಟ್ಟುವರೆಗೆ ಮಾತ್ರ ಇವರ ‘ಸೇವೆ’ ಲಭ್ಯ. ಈ ಪರಿಮಿತಿಯೊಳಗೆ ಎಲ್ಲಿಂದ ಎಲ್ಲಿಗೇ ಹೋಗಿ, ಕೇವಲ .500 ಪಾವತಿಸಿದರೆ ಆಯ್ತು. ರಾತ್ರಿ 7ರಿಂದ ಮಧ್ಯರಾತ್ರಿ 1 ಗಂಟೆವರೆಗೂ ಡ್ರಾಪ್‌ಸೇವೆ ಲಭ್ಯ.
‘ಈಗ ಆರಂಭದಲ್ಲಿ ಮೂರು ಕಾರುಗಳನ್ನು ಇದಕ್ಕಾಗಿ ಮೀಸಲಿಟ್ಟಿದ್ದೇವೆ. ಡ್ರಾಪ್ ಬಯಸುವ ಗ್ರಾಹಕರು ಮೊದಲೇ ಮೊ. 8073922368 ಸಂಖ್ಯೆಗೆ ಕರೆ ಮಾಡಿ ಹೇಳಿದರೆ ಹೇಳಿದ ಸಮಯಕ್ಕೆ ಸರಿಯಾಗಿ ನಮ್ಮ ವಾಹನ ರೆಡಿಯಾಗಿರುತ್ತದೆ. ಇದನ್ನು ಹೊರತುಪಡಿಸಿ ಸ್ಥಳದಲ್ಲೇ ಕರೆ ಮಾಡಿ ಹೇಳಬಹುದು. ಗಾಡಿ ರೆಡಿ ಇದ್ದರೆ ಕೂಡಲೇ ಸ್ಥಳಕ್ಕೆ ತಲುಪುತ್ತೇವೆ. ಬೇರೆ ಡ್ರಾಪ್‌ಗೆ ಹೋಗಿದ್ದರೆ ಸ್ವಲ್ಪ ಸಮಯ ಕಾಯಬೇಕಾಗಬಹುದು’ ಎನ್ನುತ್ತಾರೆ ರಾಮನಾಥ್ ಪ್ರಭು.
ಮೊದಲ ದಿನವೇ 30 ಕರೆಗಳು
ರಾಮನಾಥ್ ಪ್ರಭು ಈ ಡ್ರಾಪ್ ಸೇವೆ ಆರಂಭಿಸಿದ್ದೇ ಶನಿವಾರ. ಇದಕ್ಕೂ 2 ದಿನಗಳ ಮೊದಲು ಪ್ರಚಾರ ರೂಪುರೇಷೆ ತಯಾರಿಸಿದ್ದು, ವಾಟ್ಸಪ್, ಫೇಸ್‌ಬುಕ್‌ಗಳಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರು. ಸೇವೆ ಆರಂಭಿಸಿದ ಮೊದಲ ದಿನವೇ 30ಕ್ಕೂ ಅಧಿಕ ಕರೆಗಳು ಬಂದಿವೆಯಂತೆ. ‘ಪಾನಮತ್ತರು ವಾಹನ ಏರಿ ಗಲಾಟೆ ಆರಂಭಿಸಿ ಹಣ ಕೊಡದಿದ್ದರೆ (?) ಎಂಬ ಪ್ರಶ್ನೆ ಈಗ ನಮ್ಮಲ್ಲಿ ಉದ್ಭವಿಸಿಲ್ಲ. ಈಗ ಧನಾತ್ಮಕ ಮನಸ್ಥಿತಿಯಿಂದ ಆರಂಭಿಸಿದ್ದೇವೆ. ಅಂತಹ ಪರಿಸ್ಥಿತಿ ಎದುರಾದರೆ ಏನು ಮಾಡಬೇಕು ಎಂಬ ಬಗ್ಗೆ ಅನುಭವಗಳಾದ ಬಳಿಕ ತೀರ್ಮಾನಿಸಲಾಗುವುದು’ ಎಂದು ರಾಮನಾಥ ಪ್ರಭು ಹೇಳಿದರು.
ಇತ್ತೀಚೆಗೊಮ್ಮೆ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ವಾಹನದಲ್ಲಿ ಹೋಗುವವರೆಲ್ಲರನ್ನೂ ನಿಲ್ಲಿಸಿ ಪೊಲೀಸರು ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ನಡೆಸುತ್ತಿದ್ದರು. ಮದ್ಯಪ್ರಿಯರಿಗೆ ಎಷ್ಟುಸಮಸ್ಯೆಗಳಲ್ವಾ ಎಂದೆನಿಸಿತು. ಜತೆಗೆ ದಂಡವನ್ನೂ ಕಟ್ಟಬೇಕು. ಅಂಥವರಿಗೆ ದಂಡ ತಪ್ಪಿಸಿ, ಸುರಕ್ಷಿತವಾಗಿ ಮನೆ ಸೇರಲು ವ್ಯವಸ್ಥೆ ಮಾಡಬೇಕು ಎಂದು ಹೊಳೆದಿದ್ದರಿಂದ ಈ ಬ್ಯುಸಿನೆಸ್‌ಗೆ ಕೈ ಹಾಕಿದ್ದೇನೆ.
- ರಾಮನಾಥ ಪ್ರಭು, ಟ್ಯಾಕ್ಸಿ ಕಂಪನಿ ಮಾಲೀಕ