Chikkamagaluru: ಕಾಫಿನಾಡಿನಲ್ಲಿ ಮಳೆ ಅಬ್ಬರ: ಸಿಡಿಲು ಬಡಿದು 18 ಕುರಿ ಸಾವು!
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೋಮವಾರ ಧಾರಾಕಾರವಾಗಿ ಮಳೆ ಸುರಿದಿದೆ. ಮಳೆಯಿಂದ ಬಯಲು ಭಾಗದಲ್ಲಿ ಕೆಲಕಾಲ ನೀರಿನಿಂದ ಜಲಾವೃತ್ತವಾಗಿ ಸಿಡಿಲು ಸಿಡಿಲು ಬಡಿದು 18 ಕುರಿಗಳು ಸಾವನ್ನಪ್ಪಿವೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಮೇ.17): ಕಾಫಿನಾಡು ಚಿಕ್ಕಮಗಳೂರು (Chikkamagaluru) ಜಿಲ್ಲೆಯಲ್ಲಿ ಸೋಮವಾರ ಧಾರಾಕಾರವಾಗಿ ಮಳೆ (Rain) ಸುರಿದಿದೆ. ಜಿಲ್ಲೆಯ ಬಯಲು, ಮಲೆನಾಡಿನ ಭಾಗದಲ್ಲಿ ಸಂಜೆ ನಂತರ ಮಳೆ ಸುರಿದಿದೆ. ಮಳೆಯಿಂದ ಬಯಲು ಭಾಗದಲ್ಲಿ ಕೆಲಕಾಲ ನೀರಿನಿಂದ ಜಲಾವೃತ್ತವಾಗಿ ಸಿಡಿಲು ಸಿಡಿಲು ಬಡಿದು 18 ಕುರಿಗಳು (Sheep) ಸಾವನ್ನಪ್ಪಿದ್ದರೆ ಮಲೆನಾಡಿನ ಭಾಗದಲ್ಲಿ ಬೃಹದಾಕಾರದ ಮರ (Huge Tree) ಬಿದ್ದು ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು.
ಸಿಡಿಲು ಬಡಿದು 18 ಕುರಿ ಸಾವು: ಸಿಡಿಲು ಬಡಿದು ರಸ್ತೆಯಲ್ಲಿ ನಡೆಯುತ್ತಿರುವಾಗ 18 ಕುರಿಗಳು ಸಾವನ್ನಪ್ಪಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಶಿವನಿ ಸಮೀಪದ ಶಂಭೈನೂರು ಗ್ರಾಮದಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಮಾರಿಕಣಿವೆ ಮೂಲದ ಕುರಿಗಾಯಿ ಮಾಲೀಕ ಸುಮಾರು 300ಕ್ಕೂ ಅಧಿಕ ಕುರಿಗಳೊಂದಿಗೆ ಚಿತ್ರದುರ್ಗ-ಚಿಕ್ಕಮಗಳೂರು ಜಿಲ್ಲೆಯ ಗಡಿ ತಾಲೂಕು ಅಜ್ಜಂಪುರಕ್ಕೆ ಬಂದಿದ್ದರು. ತೋಟದಲ್ಲಿ 1-2 ದಿನ ಕುರಿಗಳ ಮೇಯಿಸಿದರೆ ಕುರಿ ಗೊಬ್ಬರಕ್ಕಾಗಿ ಸಾವಿರಾರು ರೂಪಾಯಿ ಹಣ ನೀಡುತ್ತಾರೆ. ಹಾಗಾಗಿ, ತೋಟದಲ್ಲಿ ಕುರಿಗಳನ್ನ ಮೇಯಿಸಲು ಬಂದಿದ್ದರು.
Chikkamagaluru: ಸೂಕ್ತ ಸೂರಿನ ಸೌಲಭ್ಯಕ್ಕೆ ಆಗ್ರಹಿಸಿ ಧರಣಿ: ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನೆ!
ಈ ವೇಳೆ ಕುರಿಗಳು ರಸ್ತೆಯಲ್ಲಿ ನಡೆದುಕೊಂಡು ಬರುವಾಗ ಸಿಡಿಲು ಬಡಿದು ಸುಮಾರು 18 ಕುರಿಗಳು ಸಾವನ್ನಪ್ಪಿವೆ. ಸಿಡಿಲಿನ ಶಬ್ಧಕ್ಕೆ ಬೆದರಿದ ಹತ್ತಾರು ಕುರಿಗಳು ಮನಸ್ಸೋ ಇಚ್ಛೆ ಓಡಿ ಹೋಗಿ ತಪ್ಪಿಸಿಕೊಂಡಿವೆ. ಕುರಿಯ ಸ್ಥಿತಿಯನ್ನ ಕಂಡು ಮಾಲೀಕ ಕಣ್ಣೀರಿಟ್ಟಿದ್ದಾನೆ. ಒಂದೆಡೆ ಮಳೆ, ಮತ್ತೊಂದೆಡೆ ಕಗ್ಗತ್ತಲು. ಈ ಮಧ್ಯೆಯೂ ಕುರಿ ಮಾಲೀಕ ತಪ್ಪಿಸಿಕೊಂಡಿರೋ ಕುರಿಗಳಿಗಾಗಿ ಹುಡುಕಾಟ ಕೂಡ ಆರಂಭಿಸಿದ್ದಾನೆ. ಸಿಡಿಲಿಗೆ ಬಲಿಯಾದ 18 ಕುರಿಗಳ ಅಂದಾಜು ಬೆಲೆ 3-4 ಲಕ್ಷ ಬೆಲೆ ಬಾಳುತ್ತಿದ್ದವು. ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಸ್ತೆಗೆ ಬಿದ್ದ ಮರ ಎರಡು ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತ: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಭಾಗವಾದ ಮೂಡಿಗೆರೆ ಭಾಗದಲ್ಲಿ ಸೋಮವಾರ ಸುರಿದ ಗಾಳಿ ಮಳೆಗೆ ಗಾಂಧೀ ಘರ್ ಎಂಬಲ್ಲಿ ಬೃಹದಾಕಾರವಾದ ಮರವೊಂದು ರಸ್ತೆಗೆ ಬಿದ್ದು 2 ಗಂಟೆಗೂ ಅಧಿಕ ಕಾಲ ಸಂಚಾರ ವ್ಯತ್ಯಯ ಉಂಟಾಯಿತು. ಇದರಿಂದ ವಾಹನಗಳು ಕಿಮೀಗಟ್ಟಲೇ ಸಾಲುಗಟ್ಟಿ ನಿಂತಿದ್ದವು. ಮೂಡಿಗೆರೆ ಪೊಲೀಸರು, ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಮರವನ್ನು ತೆರವುಗೊಳಿಸಿದರು. ಸ್ಥಳೀಯರ ಶೀಘ್ರ ಕಾರ್ಯಚರಣೆಗೆ ಪ್ರಯಾಣಿಕರಿಂದ ಪ್ರಶಂಸೆ ವ್ಯಕ್ತವಾಯಿತು.
ಕರಾವಳಿ ಸೇರಿ ರಾಜ್ಯದ ಹಲವೆಡೆ ಭಾರಿ ಮಳೆ, ಕೆಲ ಜಿಲ್ಲೆಗಳಲ್ಲಿ ರೆಡ್ ಅಲರ್ಟ್: ಭಾರತಕ್ಕೆ ನಿಗದಿತ ಸಮಯಕ್ಕೂ ಮೊದಲೇ ಮುಂಗಾರು ಪ್ರವೇಶವಾಗಿದೆ. ಇದರ ಪರಿಣಾಮ ದೇಶದ ಬಹುತೇಕ ರಾಜ್ಯಗಳಲ್ಲಿ ಮಳೆ ಅಬ್ಬರ ಆರಂಭಗೊಂಡಿದೆ. ಇದೀಗ ದಕ್ಷಿಣ ಕರ್ನಾಟಕದ ಹಲವು ಭಾಗದಲ್ಲಿ ಭಾರಿ ಮಳೆಯಾಗಿದೆ. ಕರಾವಳಿಯಲ್ಲಿ ಸುರಿದ ಭಾರಿ ಮಳೆಗೆ ವಿಟ್ಲ ಮಂಗಳೂರು ರಸ್ತೆ ಮುಳುಗಡೆಯಾಗಿದೆ. ಬೊಬ್ಬೆಕೇರಿ ಭಾಗದಲ್ಲಿ ನೆರೆ ನೀರು ಏರಿದ ಪರಿಣಾಮ ತಾಸುಗಟ್ಟಲೆ ಜಲಾವೃತಗೊಂಡಿದೆ. ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ವಾಹನ ಸವಾರರು ಪರದಾಡಿದರು.
ಕಾಡಾನೆಗಳ ಹಿಂಡು ಕಾಫಿ ತೋಟದಲ್ಲಿ ಬೇಕಾಬಿಟ್ಟಿ ದಾಂಧಲೆ: ಆನೆಗಳ ಭಯಕ್ಕೆ ತೋಟದ ಕಡೆ ತೆರಳದ ಕಾರ್ಮಿಕರು
ರಸ್ತೆ ಕಾಮಗಾರಿ ಹಿನ್ನೆಲೆ ಚರಂಡಿಗಳಲ್ಲಿ ಮಳೆನೀರು ಹರಿಯಲು ಸ್ಥಳಾವಕಾಶವಿಲ್ಲದೇ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಣೆಮಂಗಳೂರು ನರಿಕೊಂಬು ಮಧ್ಯೆ ಮೊಗರ್ನಾಡಿನಲ್ಲಿ ಮರಗಳು ರಸ್ತೆಗಳುರುಳಿದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿದೆ. ಇನ್ನು ಗಾಳಿ ಸಹಿತ ಮಳೆಯಿಂದ ಹಲವು ಮನೆಯ ಮೆಲ್ಚಾವಣಿಗಳು ಹಾರಿ ಹೋಗಿದೆ. ಭಾರಿ ಮಳೆ ಗಾಳಿಗೆ ಗ್ರಾಮೀಣ ಪ್ರದೇಶಗಳ ಜನ ಹೈರಾಣಾಗಿದ್ದಾರೆ. ದಕ್ಷಿಣ ಕನ್ನಡದ ಜಿಲ್ಲೆಯಾದ್ಯಂತ ನೂರಾರು ಎಕರೆ ಬೆಳೆ , ತೋಟಗಳು ಹಾಳಾಗಿದೆ. ಇಂದು ಸಂಜೆಯಿಂಂದಲೇ ಸುರಿಯುತ್ತಿರುವ ಗುಡುಗ ಸಹಿತ ಭಾರಿ ಮಳೆಗೆ ಹಲವು ಕಡೆ ವಿದ್ಯುತ್ ಕಂಬಗಳು ಧರೆಗುರುಳಿದೆ.