ಶಿವಮೊಗ್ಗ [ಅ.05]: ಆಗಸ್ಟ್‌ ತಿಂಗಳಲ್ಲಿ ನಗರದಲ್ಲಿ ಉಂಟಾದ ನೆರೆಯಿಂದ ಇದ್ದ ಬಾಡಿಗೆ ಮನೆಯೂ ಮುಳುಗಿ ಅಕ್ಷರಶಃ ಬೀದಿಗೆ ಬಿದ್ದಿದ್ದ ಮಾಜಿ ಸೈನಿಕನ ಪತ್ನಿ, 95 ವರ್ಷದ ವಯೋವೃದ್ಧೆ ಗಂಗಮ್ಮಜ್ಜಿಗೆ ಕೊನೆಗೂ ಎರಡೇ ತಿಂಗಳಲ್ಲಿ ಮನೆಯೊಂದು ಸಿಕ್ಕಿದೆ. ಇದಕ್ಕೆ ಕಾರಣವಾಗಿದ್ದು ಕನ್ನಡಪ್ರಭ-ಸುವರ್ಣಾ ನ್ಯೂಸ್‌ ವರದಿ.

ಈ ಗಂಗಮ್ಮಜ್ಜಿ ಮೂಲತಃ ಬರ್ಮಾ ಮೂಲದವರು ಎನ್ನುವುದು ಇನ್ನೊಂದು ವಿಶೇಷ.

ಈಕೆಯ ಪತಿ ಎಸ್‌.ಪಿ. ನಾಯ್ಡು ಬ್ರಿಟೀಷ್‌ ಕಾಲದಲ್ಲಿ ಆಯೋಧ್ಯಾ ಮತ್ತು ಅಸ್ಸಾಂ ರೆಜಿಮೆಂಟ್‌ನಲ್ಲಿ ಸೈನಿಕರಾಗಿದ್ದರು. ಬರ್ಮಾದಲ್ಲಿ ಕೆಲಸ ಮಾಡುತ್ತಿದ್ದಾಗ ಅವರ ಕಣ್ಣಿಗೆ ಬಿದ್ದಿದ್ದೇ ಈ ಹೆಣ್ಣು. ಕಣ್ಣಲ್ಲಿ ಕಣ್ಣು ಕೂಡಿದ ಇವರನ್ನು ಮದುವೆಯಾದ ಬಳಿಕ ಗಂಗಮ್ಮ ಎಂದು ಹೆಸರು ಇಟ್ಟನಾಯ್ಡು 1954ರಲ್ಲಿ ನಿವೃತ್ತಿ ಜೀವನಕ್ಕಾಗಿ ಶಿವಮೊಗ್ಗಕ್ಕೆ ಬಂದು ನೆಲೆಸಿದರು. 84ರಲ್ಲಿ ಪತಿ ತೀರಿಕೊಂಡ ಬಳಿಕ ಅಕ್ಷರÍಃ ಬೀದಿಗೆ ಬಿದ್ದಿದ್ದ ಈ ಗಂಗಮ್ಮಜ್ಜಿ ಒಂದು ಕಾಲದಲ್ಲಿ ಪತಿಯೊಡನೆ ಸೈನ್ಯದಲ್ಲಿ ಬಟ್ಟೆಹೊಲಿಯುತ್ತಾ ಚೆನ್ನಾಗಿಯೇ ಬಾಳಿ ಬದುಕಿದ್ದವರು.

ಐದು ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ ಈ ಅಜ್ಜಿಗೆ ಇರುವ ಏಕೈಕ ಪುತ್ರ ಪಾಶ್ರ್ವವಾಯು ಪೀಡಿತ. ಸದ್ಯ 95 ವರ್ಷದ ವೃದ್ದೆ ಗಂಗಮ್ಮಜ್ಜಿಗೆ ಒಂದು ಸಾವಿರ ರು. ವೃದ್ದಾಪ್ಯ ವೇತನ ಬರುತ್ತಿದೆ. ಇನ್ನು ಮಗನಿಗೆ 1200 ರು. ಅಂಗವಿಕಲ ವೇತನ. ಒಟ್ಟು 2200 ರು.ಗಳಲ್ಲಿ ಮನೆ ಬಾಡಿಗೆ, ವಿದ್ಯುತ್‌ ಬಿಲ್‌ ಎಂದು 1200 ರು. ಖರ್ಚು ಮಾಡಿ, ಉಳಿದ 1 ಸಾವಿರದಲ್ಲಿ ಇಡೀ ತಿಂಗಳು ಗಂಜಿಯೂಟ ಮಾಡುವಂತಹ ಸ್ಥಿತಿ. ಕೇಳಲು ಯಾರೂ ಇರಲಿಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಂಗವಿಕಲ ಪುತ್ರನನ್ನು ಕಟ್ಟಿಕೊಂಡು ಹಾಗೂ ಹೀಗೂ ಬದುಕು ಸಾಗುತ್ತಿತ್ತು. ಕಳೆದ ಆಗಸ್ಟ್‌ನಲ್ಲಿ ಭಾರೀ ಮಳೆಯಿಂದ ಈಕೆಯ ಮನೆಯ ಅರ್ಧ ಭಾಗದಲ್ಲಿ ನೀರು ನಿಂತಿತ್ತು. ಮುರುಕು ಬಾಡಿಗೆ ಮನೆಯ ಗೋಡೆ ಕುಸಿದಿತ್ತು. ಯಾರೂ ಈಕೆಯ ಗೋಳನ್ನೇ ಕೇಳಲಿಲ್ಲ. ಆಗ ಈಕೆಯ ನೆರವಿಗೆ ಬಂದಿದ್ದೇ ಕನ್ನಡಪ್ರಭ-ಸುವರ್ಣನ್ಯೂಸ್‌.

ಈ ಸಂಬಂಧದ ವರದಿಯಿಂದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಣಿವಣ್ಣನ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಈಕೆಯ ಗೋಳಿಗೆ ಸ್ಪಂದಿಸಿದರು. ಕಳೆದ ತಿಂಗಳು ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ನೆರೆ ವೀಕ್ಷಣೆಗೆ ಆಗಮಿಸಿದಾಗ ಈಕೆಯನ್ನು ಭೇಟಿ ಮಾಡಿ ನೆರವಿನ ಭರವಸೆ ನೀಡಿದ್ದರು. ಸಂಸದ ಬಿ. ವೈ. ರಾಘವೇಂದ್ರ ಧ್ವನಿ ಸೇರಿಸಿದರು. ಕೊನೆಗೆ ಬೊಮ್ಮನಕಟ್ಟೆಯಲ್ಲಿನ ಅಶ್ರಯ ಮನೆಯೊಂದರ ಹಕ್ಕು ಪತ್ರವನ್ನು ಕಳೆದ ವಾರ ಮುಖ್ಯಮಂತ್ರಿಗಳ ಭೇಟಿ ಸಂದರ್ಭದಲ್ಲಿ ನೀಡಲಾಯಿತು.

ಈ ಮನೆಗೆ ಸುಣ್ಣಬಣ್ಣ ಹೊಡೆದಾಯಿತು. ಮನೆಯೊಳಗಿನ ಚಿಕ್ಕಪುಟ್ಟಕೆಲಸಗಳನ್ನು ಕೆಲ ಸ್ವಯಂ ಸೇವಾ ಸಂಘಟನೆಗಳು ಮಾಡಿಕೊಟ್ಟವು.

ಶುಕ್ರವಾರ ತಹಸೀಲ್ದಾರ್‌ ಬಿ.ಎನ್‌. ಗಿರೀಶ್‌ ಗಂಗಮ್ಮಜ್ಜಿಗೆ ಮನೆಯ ಕೀ ಹಸ್ತಾಂತರಿಸಿದರು. ಗೃಹ ಪ್ರವೇಶದಲ್ಲಿ ಜೊತೆಯಾದರು. ಗಂಗಮ್ಮಜ್ಜಿಯ ಕಣ್ಣಲ್ಲಿ ಬೆಳಕು ಮೂಡಿತು. ಸಂತಸದ ಧಾರೆ ಹರಿಯಿತು. ಕೊನಗೂ ಗಂಗಮ್ಮಜ್ಜಿಗೆ ಸ್ವಂತ ಮನೆಯಾಯಿತು. ಇದಕ್ಕೆ ನೆರೆ ಕಾರಣವಾಗಿದ್ದು ಮಾತ್ರ ವಿಪರ್ಯಾಸ!

ಈ ಶುಭ ಕಾರ್ಯಕ್ರಮದಲ್ಲಿ ತಾಲೂಕು ಕಚೇರಿಯ ಸಿಬ್ಬಂದಿ, ಕಂದಾಯ ಇಲಾಖೆಯ ವಿವಿಧ ಸಿಬ್ಬಂದಿ, ಸ್ಥಳೀಯರು, ಹಲವು ಸ್ವಯಂ ಸೇವಾ ಸಂಘಟನೆಗಳ ಸದಸ್ಯರು ಸಾಕ್ಷಿಯಾದರು.