Asianet Suvarna News Asianet Suvarna News

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಂಚಲನ ಮೂಡಿಸಿದ ಪತ್ರ

ಬೆಂಗಳೂರು ವಿಶ್ವವವಿದ್ಯಾಲಯವೊಂದರಲ್ಲಿ ಪತ್ರವೊಂದು ಇದೀಗ ವೈರಲ್ ಆಗಿದೆ. ಕುಲಪತಿಗಳು ಪತ್ರ ಬರೆದಿದ್ದಾರೆ ಎಂಬ ಕರಪತ್ರ ಹರಿದಾಡುತ್ತಿದ್ದು, ಭಾರೀ ಸಂಚಲನ ಸೃಷ್ಟಿಸಿದೆ. 

Letter Viral In Bengaluru University
Author
Bengaluru, First Published Aug 23, 2019, 7:44 AM IST

ಬೆಂಗಳೂರು [ಆ.23]:  ಬೆಂಗಳೂರು ವಿಶ್ವವಿದ್ಯಾಲಯ ಕುಲ ಸಚಿವರ ಬದಲಾಯಿಸುವಂತೆ ಕುಲಪತಿಗಳು ಪತ್ರ ಬರೆದಿದ್ದಾರೆ ಎಂಬ ಕರಪತ್ರ ಹರಿದಾಡುತ್ತಿದ್ದು, ಭಾರೀ ಸಂಚಲನ ಸೃಷ್ಟಿಸಿದೆ. ಇದರಿಂದಾಗಿ ಕುಲಪತಿಗಳು ಹಾಗೂ ಕುಲಸಚಿವರ ನಡುವೆ ಶೀತಲ ಸಮರ ಉಂಟಾಗಿದೆ.

ಹಿಂದಿನ ಸರ್ಕಾರದಲ್ಲಿ ತಮ್ಮದೇ ಹಿಡಿತ ಹೊಂದಿದ್ದ ಕುಲಸಚಿವರನ್ನು ಬದಲಾಯಿಸಲು ಕುಲಪತಿಗಳು ನೂತನ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎನ್ನಲಾಗುತ್ತಿದೆ. ಆದರೆ, ಮೂಲಗಳ ಪ್ರಕಾರ ಕುಲಪತಿಗಳಿಗೆ ಪತ್ರ ಬರೆಯುವ ಅಧಿಕಾರವಿಲ್ಲ, ಕುಲಸಚಿವರನ್ನು ನೇಮಕ ಮಾಡುವುದು ಸರ್ಕಾರದ ವಿವೇಚನೆಗೆ ಬಿಟ್ಟವಿಚಾರ. ಹೀಗಿದ್ದರೂ ಯಾರ ಕುಮ್ಮಕ್ಕಿನಿಂದ ಈ ಕರ ಪತ್ರ ಹರಿದಾಡುತ್ತಿದೆ ಎಂಬುದು ತಿಳಿದಿಲ್ಲ ಎಂದು ಮೂಲಗಳು ತಿಳಿಸಿವೆ.

ಪತ್ರದ ಸಾರಾಂಶ:  ಕುಲಸಚಿವರು ಹಾಗೂ ಮೌಲ್ಯಮಾಪನ ಕುಲಸಚಿವರ ಭಾರಿ ಪ್ರಮಾಣದ ಭ್ರಷ್ಟಾಚಾರದಲ್ಲಿ ತೊಡಗಿದ್ದು, ವಿವಿಯನ್ನು ಭ್ರಷ್ಟಾಚಾರದಲ್ಲಿ ನಂ.1 ಮಾಡಲು ಹೊರಟಿದ್ದಾರೆ. ಕುಲಸಚಿವ ಪ್ರೊ.ಬಿ.ಕೆ.ರವಿ, ಮೌಲ್ಯಮಾಪನ ಕುಲಸಚಿವ ಡಾ.ಸಿ.ಶಿವರಾಜು, ಎಸ್ಟಾಬ್ಲಿಷ್‌ಮೆಂಟ್‌-2 ರಲ್ಲಿರುವ ಡಾ.ಗೋವಿಂದರಾಜು, ಹಾಸ್ಟೆಲ್‌ ವಾರ್ಡನ್‌ ಜಯರಾಮ ನಾಯ್‌್ಕ ಸೇರಿ ವಿಶ್ವವಿದ್ಯಾಲಯವನ್ನು ಅಧೋಗತಿಯತ್ತ ಕೊಂಡೊಯ್ಯುತ್ತಿದ್ದಾರೆ.

ಕುಲಸಚಿವರು ತಮ್ಮ ಸಮುದಾಯದ ವಿದ್ಯಾರ್ಥಿಗಳಿಗೆ ಮಾತ್ರ ಕುಲಸಚಿವರಂತೆ ವರ್ತಿಸುತ್ತಿದ್ದಾರೆ. ತಮ್ಮ ಅವಧಿ ಮುಗಿದು ಆರು ತಿಂಗಳಾದರೂ ಪ್ರತಿ ದಿನ ಬಹುಮಹಡಿ ಕಟ್ಟಡಗಳಿಗೂ ವಿಶ್ವವಿದ್ಯಾಲಯಗಳಿಗೂ ಅಡ್ಡಾಡಿಕೊಂಡು ಇಲ್ಲಿಯೇ ಬೇರು ಬಿಟ್ಟಿದ್ದಾರೆ. ಹಿಂದಿನ ಸರ್ಕಾರದಲ್ಲಿ ತಮ್ಮ ಹಿಡಿತ ಹೊಂದಿದ್ದ ಕುಲಸಚಿವರು ಇಂದಿಗೂ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ದಲ್ಲಾಳಿಗಳ ಅಡ್ಡೆ:  ಮೌಲ್ಯಮಾಪನ ಕುಲಸಚಿವರು ಅನುತ್ತೀರ್ಣ ವಿದ್ಯಾರ್ಥಿಗಳನ್ನು ಪಾಸ್‌ ಮಾಡುವುದು, ಸ್ನಾತಕೋತ್ತರ ಪದವಿ ಪ್ರವೇಶ, ಪಿಎಚ್‌.ಡಿ ಪ್ರವೇಶದಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮ ನಡೆಸುತ್ತಿದ್ದಾರೆ. ಪರೀಕ್ಷಾ ಭವನವು ದಲ್ಲಾಳಿಗಳ ಅಡ್ಡವಾಗಿದೆ. ಲಂಚ ಪಡೆದು ಎಲ್ಲಾ ಕೆಲಸಗಳನ್ನು ಮಾಡಿಕೊಡಲಾಗುತ್ತಿದೆ. ಇನ್ನು ಹಾಸ್ಟೆಲ್‌ ವಾರ್ಡನ್‌ ಅವರು ವಿದ್ಯಾರ್ಥಿಗಳ ಅನ್ನಕ್ಕೆ ಕನ್ನ ಹಾಕುತ್ತಿದ್ದಾರೆ. ಮೊಟ್ಟೆ, ಬಾಳೇಹಣ್ಣು, ಚಿಕನ್‌, ಮಟನ್‌, ತರಕಾರಿ ಸೇರಿದಂತೆ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ವಿತರಿಸಲಾಗುತ್ತಿದೆ. ಅಮಾಯಕ ವಿದ್ಯಾರ್ಥಿಗಳ ಮೇಲೆ ಗೂಂಡಾಗಿರಿ ಮಾಡಲಾಗುತ್ತಿದೆ ಎಂದು ಕರ ಪತ್ರದಲ್ಲಿ ಮುದ್ರಿಸಲಾಗಿದೆ.

ವಿವಿ ಆಡಳಿತ ಕಚೇರಿಯು ನೆಲಮಹಡಿಯು ಪ್ರಸಾರಾಂಗಕ್ಕೆ ಹೊಂದಿಕೊಂಡಂತೆ ಇರುವುದರಿಂದ ನೌಕರರಿಗೆ ಸಂಜೆ ಮೇಲೆ ಇಸ್ಪೀಟ್‌ ಅಡ್ಡವಾಗಿ ಮಾರ್ಪಾಡಾಗಿದೆ. ವಿವಿ ಆವರಣದಲ್ಲಿರುವ ಅಂಗಡಿ ಮುಂಗಟ್ಟುಗಳಲ್ಲಿ ಸಿಗರೆಟ್‌, ಮಾಂಸಾಹಾರಿ ಆಹಾರಗಳು ಹಾಗೂ ಡ್ರಗ್ಸ್‌ ವಿತರಿಸಲಾಗುತ್ತಿದೆ. ಕುಡುಕರು ಮತ್ತು ಡ್ರಗ್ಸ್‌ ಪ್ರಿಯರಿಗೆ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ಅಂಗಡಿ ಮಾಲಿಕರು ಗೂಂಡಾಗಳ ಒತ್ತಡಕ್ಕೆ ಸಿಗರೆಟ್‌ ತಂದು ಮಾರಾಟ ಮಾಡುತ್ತಿದ್ದಾರೆ. ಒಟ್ಟಾರೆ ವಿಶ್ವ ವಿದ್ಯಾಲಯವು ಭ್ರಷ್ಟಾಚಾರದ ಕೂಪವಾಗಿ ಮಾರ್ಪಾಡಾಗಿದೆ ಎಂಬ ಆರೋಪವಿರುವ ಕರಪತ್ರ ಹರಿದಾಡುತ್ತಿದೆ.

ಕುಲಸಚಿವರ ನೇಮಕ ವಿಚಾರ ಸರ್ಕಾರದ ವಿವೇಚನೆಗೆ ಬಿಟ್ಟವಿಚಾರ. ಕುಲಸಚಿವರನ್ನು ಬದಲಾಯಿಸುವಂತೆ ಕೋರಿ ಸರ್ಕಾರಕ್ಕೆ ಯಾವುದೇ ರೀತಿಯ ಪತ್ರವನ್ನು ನಾನು ಬರೆದಿಲ್ಲ. ಕರಪತ್ರ ಹರಿದಾಡುತ್ತಿರುವ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುತ್ತದೆ.

-ಪ್ರೊ.ಕೆ.ಆರ್‌.ವೇಣುಗೋಪಾಲ್‌, ಕುಲಪತಿ, ಬೆಂವಿವಿ.

Follow Us:
Download App:
  • android
  • ios