ಆಗಸ್ಟ್ ಅಂತ್ಯಕ್ಕೆ ಬಾಕಿ ಕಾಮಗಾರಿ ಮುಗಿಯಲಿ
ಶಾಸಕರ ಅನುದಾನದ ಕಾಮಗಾರಿಗಳು, ಎಚ್‌ಎಸ್‌ಡಿಪಿ(HSDP), ಎಸ್‌ಸಿಪಿ-ಟಿಎಸ್‌ಪಿ(SCP-TSP) ಸೇರಿದಂತೆ ಇಲಾಖೆಗೆ ನಿಗದಿಯಾಗಿರುವ ಎಲ್ಲ ಬಾಕಿ ಕಾಮಗಾರಿಗಳು ಆಗಸ್ಟ್ ಅಂತ್ಯದೊಳಗೆ ಮುಗಿಸುವಂತೆ ಸಚಿವ ಸಿ.ಸಿ.ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದರು
ಬಳ್ಳಾರಿ (ಆ.5) : ಶಾಸಕರ ಅನುದಾನದ ಕಾಮಗಾರಿಗಳು, ಎಚ್‌ಎಸ್‌ಡಿಪಿ(HSDP), ಎಸ್‌ಸಿಪಿ-ಟಿಎಸ್‌ಪಿ(SCP-TSP) ಸೇರಿದಂತೆ ಇಲಾಖೆಗೆ ನಿಗದಿಯಾಗಿರುವ ಎಲ್ಲ ಬಾಕಿ ಕಾಮಗಾರಿಗಳು ಆಗಸ್ಟ್ ಅಂತ್ಯಕ್ಕೆ ಪೂರ್ಣಗೊಳ್ಳಬೇಕು ಮತ್ತು ಟೆಂಡರ್ ಪ್ರಕ್ರಿಯೆಯಲ್ಲಿರುವ ಕಾಮಗಾರಿಗಳನ್ನು ಆಯಾ ಕ್ಷೇತ್ರದ ಶಾಸಕರ ಸಮ್ಮುಖದಲ್ಲಿ ಶೀಘ್ರ ಕಾರ್ಯಾರಂಭಗೊಳಿಸುವಂತೆ ಲೋಕೋಪಯೋಗಿ ಇಲಾಖೆಯ ಸಚಿವ ಸಿ.ಸಿ. ಪಾಟೀಲ್(C.C.Patil) ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಲೋಕೋಪಯೋಗಿ ಇಲಾಖೆಗಳ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಳ್ಳಾರಿ ನಗರ ಸೇರಿ ಜಿಲ್ಲೆಯಲ್ಲಿರುವ ರಸ್ತೆಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ ಕ್ರಮಕ್ಕೆ ಮುಂದಾಗಬೇಕು; ಅನುದಾನದ ಕೊರತೆಯಿದ್ದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ (ಡಿಎಂಎಫ್), ಕೆಎಂಇಆರ್‌ಸಿ ಅನುದಾನದಲ್ಲಿ ಬಳಸಿಕೊಂಡು ಕಾಮಗಾರಿಗಳನ್ನು ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜನ ಸಂಕಷ್ಟದಲ್ಲಿರುವಾಗ ಕಾಂಗ್ರೆಸ್‌ಗೆ ಸಿದ್ದರಾಮೋತ್ಸವ ಬೇಕಾ? ಸಚಿವ ಸಿಸಿ ಪಾಟೀಲ್ ಪ್ರಶ್ನೆ
ಬಳ್ಳಾರಿ(Ballari) ನಗರದಲ್ಲಿ ಅನಂತಪುರ ಮುಖ್ಯ ರಸ್ತೆ (ರಾಷ್ಟ್ರೀಯ ಹೆದ್ದಾರಿ-63)ಯಲ್ಲಿ ಇಂದಿರಾ ವೃತ್ತದಿಂದ ರಾಘವೇಂದ್ರ ಕಾಲನಿ 2ನೇ ಹಂತದ ಮುಖ್ಯ ರಸ್ತೆ ವರೆಗೆ ಚತುಷ್ಪಥವಾಗಿ ಅಭಿವೃದ್ಧಿಪಡಿಸುವ ಕಾಮಗಾರಿಯನ್ನು ಒಟ್ಟಾರೆ .18 ಕೋಟಿಗಳ ಮೊತ್ತದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ಅನುದಾನದಲ್ಲಿ (ಡಿಎಂಎಫ್) ಕೈಗೊಳ್ಳಲಾಗಿದ್ದು, ಕಾಮಗಾರಿಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಬಳ್ಳಾರಿ ತಾಲೂಕಿನಲ್ಲಿ ಅಂಕೋಲಾ-ಜೋಳದರಾಶಿ ರಸ್ತೆ (ರಾಜ್ಯ ಹೆದ್ದಾರಿ-42)ಯಲ್ಲಿ ಚಳ್ಳಗುರ್ಕಿ ಕ್ರಾಸ್‌ನಿಂದ ಆಂಧ್ರಪ್ರದೇಶ ಗಡಿಯ ವರೆಗಿನ ಭಾಗದ ಸುಧಾರಣೆ ಕಾಮಗಾರಿಯು 5054-ರಾಜ್ಯ ಹೆದ್ದಾರಿಗಳ ಸುಧಾರಣೆ ಅಡಿಯಲ್ಲಿ .7.90 ಕೋಟಿಗಳ ಮೊತ್ತಕ್ಕೆ ಅನುಮೋದನೆಯಾಗಿದ್ದು, ಅಂದಾಜು ಪಟ್ಟಿಮಂಜೂರಾತಿ ಹಂತದಲ್ಲಿದೆ ಎಂದು ಅಧಿಕಾರಿಯೊಬ್ಬರು ಸಭೆಗೆ ತಿಳಿಸಿದರು.
ಸಂಡೂರು ತಾಲೂಕಿನಲ್ಲಿ ತುಮಟಿ ತಾಂಡದಿಂದ ಬೆಳಗಲ್ ತಾಂಡಾದ ಕಣಿವೆ ಮಾರಮ್ಮ ದೇವಸ್ಥಾನದ ವರೆಗಿನ ರಸ್ತೆ ಸುಧಾರಣೆ ಕಾಮಗಾರಿಯನ್ನು .8 ಕೋಟಿಗಳ ಮೊತ್ತದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ಅನುದಾನದಲ್ಲಿ (ಡಿಎಂಎಫ್) ಕೈಗೊಳ್ಳಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಮತ್ತು ಕಂಪ್ಲಿ ತಾಲೂಕಿನಲ್ಲಿ ರಾಜ್ಯ ಹೆದ್ದಾರಿ-132ರಲ್ಲಿ ಕಂಪ್ಲಿಯಿಂದ ಎಮ್ಮಿಗನೂರು ವರೆಗಿನ ರಸ್ತೆ ಸುಧಾರಣೆ ಕಾಮಗಾರಿಯನ್ನು .6 ಕೋಟಿಗಳ ಮೊತ್ತದಲ್ಲಿ 2515-ಕೆಕೆಆರ್‌ಡಿಬಿ ಯೋಜನೆಯಲ್ಲಿ ಕೈಗೊಳ್ಳಲಾಗಿದ್ದು, ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಸಚಿವರ ಗಮನಕ್ಕೆ ತಂದರು.
ಮಹಾ ಬಿಕ್ಕಟ್ಟು ವಿಚಾರ ಸುವರ್ಣ ನ್ಯೂಸ್‌ನಿಂದ ನೋಡಿ ತಿಳಿದುಕೊಳ್ಳುತ್ತಿದ್ದೇನೆ: ಸಚಿವ ಸಿ.ಸಿ.ಪಾಟೀಲ್
ಬಳ್ಳಾರಿ ನಗರದಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಕಟ್ಟಡವನ್ನು .100 ಕೋಟಿಗಳ ಪರಿಷ್ಕೃತ ಮೊತ್ತದಲ್ಲಿ ಕೈಗೊಂಡು ಪೂರ್ಣಗೊಳಿಸಲಾಗಿದೆ. ಕಟ್ಟಡವನ್ನು ಇತ್ತೀಚೆಗೆ ಉದ್ಘಾಟನೆ ಮಾಡಲಾಗಿದೆ. ನಗರದಲ್ಲಿ ಬಾರ್ ಅಸೋಸಿಯೇಶನ್ ಕಟ್ಟಡವನ್ನು .9.98 ಕೋಟಿಗಳ ಮೊತ್ತದಲ್ಲಿ ಕೈಗೊಳ್ಳಲಾಗಿದ್ದು, ಪ್ರಗತಿಯಲ್ಲಿದೆ. ಜಿಲ್ಲೆಯಲ್ಲಿ ಸರ್ಕಾರಿ ನೌಕರರಿಗಾಗಿ .15.50 ಕೋಟಿಗಳ ಮೊತ್ತದಲ್ಲಿ ಒಟ್ಟು 50 ವಸತಿಗೃಹಗಳನ್ನು ನಿರ್ಮಿಸಲಾಗುತ್ತಿದ್ದು, ಕಾಮಗಾರಿಯನ್ನು ಡಿಸೆಂಬರ್-2022ರ ಅಂತ್ಯದೊಳಗಾಗಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ ಅವರು, ಸಿರುಗುಪ್ಪ ತಾಲೂಕಿನ ರಾರಾವಿ ಬಳಿ ಹಗರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಯನ್ನು .30 ಕೋಟಿಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲಾಗಿದ್ದು, ಅಕ್ಟೋಬರ್ 2022ರ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು. ಬಳ್ಳಾರಿ ನಗರದಲ್ಲಿ ರಾಯಲ್ ಸರ್ಕಲ್‌ನಲ್ಲಿ ಕ್ಲಾಕ್ ಟವರ್ ನಿರ್ಮಾಣ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು .7 ಕೋಟಿಗಳ ಮೊತ್ತದಲ್ಲಿ ಕೈಗೊಳ್ಳಲಾಗಿದ್ದು, ಟೆಂಡರ್ ಆಹ್ವಾನಿಸಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ ವಿವಿಧ ಯೋಜನೆಗಳಡಿ ಲೋಕೋಪಯೋಗಿ ಇಲಾಖೆ ವತಿಯಿಂದ ಕೈಗೊಳ್ಳಲಾದ ಕಾಮಗಾರಿಗಳ ಪ್ರಗತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡ ಆನಂತರ ಮಾತನಾಡಿದ ಸಚಿವ ಸಿ.ಸಿ. ಪಾಟೀಲ್, ಕಳೆದ ತಿಂಗಳಿನಿಂದ ರಾಜ್ಯದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಅದರಂತೆ ಬಳ್ಳಾರಿ ಜಿಲ್ಲೆಯ ನಾನಾ ಕಡೆಗಳಲ್ಲಿ ಸುರಿದ ಹೆಚ್ಚಿನ ಮಳೆಯಿಂದ ಹಾನಿಯಾದ ರಸ್ತೆಗಳನ್ನು ಶೀಘ್ರವೇ ದುರಸ್ತಿಗೊಳಿಸಿ, ಪ್ರಾಣಾಪಾಯನ್ನು ತಪ್ಪಿಸಬೇಕು ಹಾಗೂ ಸಾರ್ವಜನಿಕ ಆಸ್ತಿಯನ್ನು ಮತ್ತು ಸಾರ್ವಜನಿಕರಿಗೆ ಯೋಗ್ಯ ಸೇವೆಯನ್ನು ಒದಗಿಸುವುದು ಲೋಕೋಪಯೋಗಿ ಇಲಾಖೆಯ ಕರ್ತವ್ಯವಾಗಿದೆ. ಅದರಂತೆ ಜಿಲ್ಲೆಯಲ್ಲಿ ಉಂಟಾದ ಹಾನಿಗೆ ಸಂಬಂಧಿಸಿದ ಪರಿಹಾರ ಕ್ರಮಗಳನ್ನು ಕೈಗೊಂಡು ಸಂತ್ರಸ್ತರಿಗೆ ನೆರವಾಗಬೇಕು ಎಂದು ಅವರು ಹೇಳಿದರು.
ಸರ್ಕಾರವು ಯಾವುದೇ ಗುತ್ತಿಗೆದಾರರ ಅಭಿವೃದ್ಧಿಗೆ ಅಥವಾ ಅವರ ಹಿತಾಸಕ್ತಿ ಕಾಪಾಡಲು ನಿರ್ವಹಿಸುತ್ತಿಲ್ಲ. ಅಧಿಕಾರಿಗಳು ಇದನ್ನು ಅರಿತುಕೊಂಡು ಯೋಗ್ಯ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ಹಂಚಿಕೆ ಮಾಡಬೇಕು. ನಿಗದಿತ ಅವಧಿಯಲ್ಲಿ ಹಾಗೂ ನಿಗದಿಪಡಿಸಿದ ಅನುದಾನದಲ್ಲಿ ಗುಣಮಟ್ಟದ ಕಾಮಗಾರಿಯನ್ನು ಪೂರ್ಣಗೊಳಿಸುವ ಹಾಗೂ ಬದ್ಧತೆಯಿರುವ ಗುತ್ತಿಗೆದಾರರಿಗೆ ಕಾಮಗಾರಿ ಹಂಚಿಕೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅನುದಾನ ಬಿಡುಗಡೆಗೊಂಡು, ಆಡಳಿತಾತ್ಮಕ ಅನುಮೋದನೆ ಆನಂತರವೂ ಅನಗತ್ಯ ವಿಳಂಬ ಮಾಡುವಂತಿಲ್ಲ. ಈ ತಿಂಗಳ ಮುಕ್ತಾಯದಲ್ಲಿ ಜಿಲ್ಲೆಯಲ್ಲಿ ವಿಳಂಬವಾಗಿರುವ ಎಲ್ಲ ಕಾಮಗಾರಿಗಳನ್ನು ಚುರುಕುಗೊಳಿಸಿ, ಪ್ರಗತಿ ವರದಿಯನ್ನು ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಿ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಇಲಾಖಾ ಎಂಜಿನಿಯರ್‌ಗಳಿಗೆ ತಿಳಿಸಿದರು.
ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ, ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ, ಅಪರ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್, ಲೋಕೋಪಯೋಗಿ ಇಲಾಖೆಯ ಸಂಪರ್ಕ ಮತ್ತು ಕಟ್ಟಡಗಳ ಮುಖ್ಯ ಎಂಜಿನಿಯರ್ ಜಗನ್ನಾಥ ಹಲಿಂಗೆ, ಲೋಕೋಪಯೋಗಿ ಇಲಾಖೆಯ ಬಳ್ಳಾರಿ ವೃತ್ತದ ಅಧೀಕ್ಷಕ ಮಲ್ಲಿಕಾರ್ಜುನ, ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಎಸ್. ಪೂಜಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳು ಹಾಗೂ ಅಧಿಕಾರಿಗಳು ಸಭೆಯಲ್ಲಿದ್ದರು.