ಮುಂಬರುವ ಚುನಾವಣೆಗಳಿಗೆ ಮಹಿಳಾ ಕಾಂಗ್ರೆಸ್ ಬಲಿಷ್ಠವಾಗಲಿ : ಜಿಲ್ಲಾಧ್ಯಕ್ಷ
ಮುಂಬರುವ ತಾಪಂ, ಜಿಪಂ ಹಾಗೂ ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರ ಪಾತ್ರ ಹೆಚ್ಚಾಗಿದ್ದು, ಮಹಿಳಾ ಕಾಂಗ್ರೆಸ್ ಮತ್ತಷ್ಟುಬಲಿಷ್ಠವಾಗಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್ ಕರೆ ನೀಡಿದರು.
ಮೈಸೂರು : ಮುಂಬರುವ ತಾಪಂ, ಜಿಪಂ ಹಾಗೂ ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರ ಪಾತ್ರ ಹೆಚ್ಚಾಗಿದ್ದು, ಮಹಿಳಾ ಕಾಂಗ್ರೆಸ್ ಮತ್ತಷ್ಟು ಬಲಿಷ್ಠವಾಗಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್ ಕರೆ ನೀಡಿದರು.
ಗುರುವಾರ ನಡೆದ ಮಹಿಳಾ ಕಾಂಗ್ರೆಸ್ ವಿಭಾಗದ ಮೂರನೇ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಗೆಲುವು ಸಾಧಿಸಲು ಮಹಿಳಾ ಕಾರ್ಯಕರ್ತರು ಬಹಳ ಶ್ರಮ ವಹಿಸಿದ್ದಾರೆ ಎಂದು ಶ್ಲಾಘಿಸಿದರು.
ಮಹಿಳೆಯರಿಗೆ ಹಲವಾರು ವೈಯಕ್ತಿಕ ಸಮಸ್ಯೆಗಳು ಇವೆ. ಇದರ ನಡುವೆಯೂ ಪಕ್ಷಕ್ಕೆ ಕೆಲಸ ಮಾಡಿರುವುದು ನಮ್ಮ ಕಾಂಗ್ರೆಸ್ ಮಹಿಳಾ ಸಂಘಟನೆಯನ್ನು ಪ್ರದರ್ಶಿಸುತ್ತದೆ. ಸರ್ಕಾರ ಬಂದ ಮೇಲೆ ಎಲ್ಲರನ್ನು ಗೌರಯುತವಾಗಿ ನೋಡಿಕೊಳ್ಳಬೇಕು, ಆ ಕೆಲಸವನ್ನು ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಮಾಡುತ್ತದೆ. ಮಹಿಳೆಯರಿಗೆ ಸೂಕ್ತ ಸ್ಥಾನಮಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ನೀಡುತ್ತದೆ ಎಂದು ಅವರು ಭರವಸೆ ನೀಡಿದರು.
ಮಹಿಳಾ ಪ್ರಧಾನ ಗ್ಯಾರಂಟಿ
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಲತಾ ಸಿದ್ದಶೆಟ್ಟಿಮಾತನಾಡಿ, ಕಾಂಗ್ರೆಸ್ ಸರ್ಕಾರ ನೀಡಿರುವ 5 ಗ್ಯಾರಂಟಿಗಳಲ್ಲಿ 4 ಗ್ಯಾರಂಟಿಗಳು ಮಹಿಳಾ ಪ್ರಧಾನ ಕಾರ್ಯಕ್ರಮಗಳಾಗಿವೆ. ಇವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಜನಜಾಗೃತಿ ಮೂಡಿಸಬೇಕು. ಹಾಗೆಯೇ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಬಹು ನಿಚ್ಚಳ ಬಹುಮತ ಬರಲು ರಾಜ್ಯದಲ್ಲಿ ಮಹಿಳಾ ಶಕ್ತಿ ಕಾಂಗ್ರೆಸ್ ಪರವಾಗಿ ಅತೀ ಹೆಚ್ಚು ಒಲವು ತೋರಿದ್ದು ಕಾರಣವಾಗಿದೆ. ಕಾಂಗ್ರೆಸ್ ಪಕ್ಷ ಮಾತ್ರ ಮಹಿಳಾ ಸಬಲೀಕರಣಕ್ಕೆ ಹಾಗೂ ಮಹಿಳೆಯರ ಸಾಮಾಜಿಕ ಭದ್ರತೆಗೆ ಸೂಕ್ತ ಸ್ಥಾನಮಾನ ಕೊಡುವ ಪಕ್ಷ ಎಂದು ಹೇಳಿದರು.
ನಂತರ ಜಿಲ್ಲಾ ಓಬಿಸಿ ಘಟಕ, ಅಲ್ಪಸಂಖ್ಯಾಕರ ವಿಭಾಗ, ಜಿಲ್ಲಾ ವಿದ್ಯಾರ್ಥಿ ಕಾಂಗ್ರೆಸ್, ಜಿಲ್ಲಾ ರೈತ ಘಟಕಗಳ ಸಭೆ ಸಹ ನಡೆಯಿತು.
ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಎಡತಲೆ ಮಂಜುನಾಥ್, ಮುಖಂಡರಾದ ಪುಷ್ಪವಲ್ಲಿ, ಸುಧಾ ಮಹದೇವಯ್ಯ, ಲೇಖ ವೆಂಕಟೇಶ್, ಶಾರದಾ ಸಂಪತ್ತು, ಬೃಂದಾ ಕೃಷ್ಣೇಗೌಡ ಮೊದಲಾದವರು ಇದ್ದರು.