Asianet Suvarna News Asianet Suvarna News

ಕನ್ನಡ ತಂತ್ರಾಂಶಕ್ಕೆ ಸರ್ಕಾರ ಪ್ರತಿ ವರ್ಷ 10 ಕೋಟಿ ಅನುದಾನ ನೀಡಲಿ: ಸಾಹಿತಿಗಳು

ಕನ್ನಡ ತಂತ್ರಾಂಶ ಮೂಲಕ ಐಟಿ ಉದ್ಯೋಗಗಳ ಸೃಷ್ಟಿಗೆ ಸರ್ಕಾರ ಮುಂದಾಗಬೇಕು, ಕನ್ನಡ ತಂತ್ರಾಂಶ ಬಳಕೆಗೆ ಒತ್ತು ನೀಡಲು ರಾಜ್ಯ ಸರ್ಕಾರ ಪ್ರತಿ ವರ್ಷ ಬಜೆಟ್‌ನಲ್ಲಿ 10 ಕೋಟಿ ರು. ಅನುದಾನ ನೀಡಬೇಕು ಎಂದು ಸಾಹಿತಿಗಳು, ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Let the government grant 10 crore every year for Kannada software gvd
Author
First Published Dec 12, 2022, 1:30 PM IST

ಬೆಂಗಳೂರು (ಡಿ.12): ಕನ್ನಡ ತಂತ್ರಾಂಶ ಮೂಲಕ ಐಟಿ ಉದ್ಯೋಗಗಳ ಸೃಷ್ಟಿಗೆ ಸರ್ಕಾರ ಮುಂದಾಗಬೇಕು, ಕನ್ನಡ ತಂತ್ರಾಂಶ ಬಳಕೆಗೆ ಒತ್ತು ನೀಡಲು ರಾಜ್ಯ ಸರ್ಕಾರ ಪ್ರತಿ ವರ್ಷ ಬಜೆಟ್‌ನಲ್ಲಿ 10 ಕೋಟಿ ರು. ಅನುದಾನ ನೀಡಬೇಕು ಎಂದು ಸಾಹಿತಿಗಳು, ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಕನ್ನಡ ಗಣಕ ಉಚಿತ ತರಬೇತಿ ಕೇಂದ್ರ’ ಭಾನುವಾರ ಗಾಂಧಿ ಭವನದಲ್ಲಿ ಏರ್ಪಡಿಸಿದ್ದ ‘ಐಟಿ ಕನ್ನಡ ಗಣಕ ಸಮಾವೇಶ’ದಲ್ಲಿ ಮಾತನಾಡಿದ ಹಲವು ಗಣ್ಯರು, ಸಾರ್ವಜನಿಕವಾಗಿ ಕನ್ನಡ ತಂತ್ರಾಂಶ ಅನುಷ್ಠಾನ ಮಾಡುವ ಕನ್ನಡದ ಕೆಲಸಗಳಿಗೆ ಸರ್ಕಾರ ತುರ್ತು ನೆರವು ನೀಡಬೇಕು. 

ಇಲ್ಲದಿದ್ದರೆ ಕನ್ನಡದ ಅವನತಿಗೆ ಸರ್ಕಾರ ಮತ್ತು ಸಮಾಜ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಹಿ.ಚಿ.ಬೋರಲಿಂಗಯ್ಯ ಮಾತನಾಡಿ, ಸಾರ್ವಜನಿಕವಾಗಿ ಕನ್ನಡ ತಂತ್ರಾಂಶ ಅನುಷ್ಠಾನ ಮಾಡುವ ಕ್ರಿಯಾತ್ಮಕ ಕನ್ನಡದ ಕೆಲಸಗಳಿಗೆ ಸರ್ಕಾರ ತುರ್ತು ನೆರವು ನೀಡಬೇಕು. ಕನ್ನಡರಹಿತವಾಗಿ ಜಾಗತೀಕರಣ ಮತ್ತು ಡಿಜಿಟಲೀಕರಣ ನಡೆದರೆ ಕನ್ನಡರಹಿತ ಸಮಾಜ ನಿರ್ಮಾಣವಾಗಿ ಕನ್ನಡದ ಅವನತಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. 

ಮಧ್ಯಮ ಹಂತದ ಪೊಲೀಸರಿಗೆ ಎನ್‌ಡಿಎ ಮಾದರಿ ತರಬೇತಿ: ಸಿಎಂ ಬೊಮ್ಮಾಯಿ

ಇಂದಿನ ಜನಾಂಗ ಮತ್ತು ಭವಿಷ್ಯದ ಜನಾಂಗಕ್ಕೆ ಕನ್ನಡ ತಂತ್ರಾಂಶದ ಮೂಲಕ ಐಟಿ ಉದ್ಯೋಗಗಳನ್ನು ಸೃಷ್ಟಿಮಾಡಲು ಸರ್ಕಾರ ಮುಂದಾಗಬೇಕು. ಇಲ್ಲದಿದ್ದರೆ ಕನ್ನಡದಲ್ಲಿ ಹಿಂದುಳಿಯಲಿದ್ದೇವೆ. ಕನ್ನಡದ ಅಭಿವೃದ್ಧಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು. ಸಂಘ-ಸಂಸ್ಥೆಗಳೂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉತ್ತರ ಭಾರತದವರು ಕನ್ನಡದ ಹಿನ್ನಡೆಗೆ ಕಾರಣರಾಗಿದ್ದು ಆಡಳಿತದಲ್ಲಿ ಕಡ್ಡಾಯವಾಗಿ ಕನ್ನಡ ಅನುಷ್ಠಾನವಾಗಬೇಕು ಎಂದು ಸಲಹೆ ನೀಡಿದರು. ಕುವೆಂಪು ವಿವಿ ವಿಶ್ರಾಂತ ಉಪ ಕುಲಪತಿ ಡಾ.ಕೆ.ಚಿದಾನಂದಗೌಡ, ಸಾಹಿತಿಗಳಾದ ಡಾ.ಕೆ.ಪಿ.ಪುತ್ತೂರಾಯ, ಡಾ.ಕಾ.ವೆಂ.ಶ್ರೀನಿವಾಸಮೂರ್ತಿ ಉಪಸ್ಥಿತರಿದ್ದರು.

ಕನ್ನಡ ತಂತ್ರಾಂಶ ಅಗತ್ಯ: ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್‌ ಮಾತನಾಡಿ, ಕನ್ನಡ ಸಾಹಿತ್ಯ, ಸಂಸ್ಕೃತಿಯನ್ನು ಎಷ್ಟುಅಭಿವೃದ್ಧಿಪಡಿಸಬೇಕೋ ಆ ಹಾದಿಯಲ್ಲಿ ನಾವು ಸಾಗಿದ್ದೇವೆ. ಆದರೆ ಹೊಸ ಯುಗದ ಸಮೂಹಕ್ಕೆ ಅಗತ್ಯವಾದ ಮತ್ತು ಮುಂದಿನ ಜೀವನ ರೂಪಿಸಿಕೊಳ್ಳಲು ಬೇಕಾದ ಕನ್ನಡ ಭಾಷೆಯನ್ನು ವ್ಯಾಪಕವಾಗಿ ಬೆಳೆಸಬೇಕು. ಕನ್ನಡ ತಂತ್ರಾಂಶ ಅನುಷ್ಠಾನದ ಪ್ರಕ್ರಿಯೆ ಈ ಕಾಲಘಟ್ಟದ ಜರೂರು ಆಗಬೇಕು ಎಂದು ಕರೆ ನೀಡಿದರು.

ಒಗ್ಗಟ್ಟಿನಿಂದ ಶ್ರಮಿಸಿ ಜೆಡಿಎಸ್‌ ಅಧಿಕಾರಕ್ಕೆ ತನ್ನಿ: ಎಚ್‌.ಡಿ.ದೇವೇಗೌಡ

ಕನ್ನಡ ಗಣಕ ಉಚಿತ ತರಬೇತಿ ಕೇಂದ್ರದ ಸಂಸ್ಥಾಪಕ ಮುಖ್ಯಸ್ಥ ಆರ್‌.ಎ.ಪ್ರಸಾದ್‌ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಾಂಸ್ಕೃತಿಕ ಕಾರ್ಯಕ್ರಮ, ಪ್ರದರ್ಶನಗಳಿಗೆ ಆದ್ಯತೆ ನೀಡುತ್ತಿದೆ. ಇದರ ಜತೆಗೆ ಕನ್ನಡ ಅಭಿವೃದ್ಧಿ, ಬಳಕೆಗೂ ಒತ್ತು ನೀಡಬೇಕು. ರಾಜ್ಯ ಸರ್ಕಾರ ಪ್ರತಿ ವರ್ಷ ಬಜೆಟ್‌ನಲ್ಲಿ ಕನ್ನಡ ತಂತ್ರಾಂಶಕ್ಕಾಗಿಯೇ .10 ಕೋಟಿ ಅನುದಾನ ನೀಡಬೇಕು ಎಂದು ಹೇಳಿದರು.

Follow Us:
Download App:
  • android
  • ios