ಸರ್ಕಾರ ರೈತರ ನೆರವಿಗೆ ಧಾವಿಸಲಿ: ನಂಜಾವಧೂತ ಶ್ರೀ
ಮಳೆಯ ಕೊರತೆಯಿಂದ ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಮಧ್ಯ ಕರ್ನಾಟಕದ ಜಿಲ್ಲೆಗಳ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಸರ್ಕಾರ ತಕ್ಷಣ ರೈತರ ನೆರವಿಗೆ ಧಾವಿಸಬೇಕಿದ್ದು ಬೆಳೆ ನಷ್ಟಪರಿಹಾರ ಸೇರಿದಂತೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕಿದೆ ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಂಜಾವಧೂತ ಸ್ವಾಮೀಜಿ ಹೇಳಿದರು.
ಶಿರಾ : ಮಳೆಯ ಕೊರತೆಯಿಂದ ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಮಧ್ಯ ಕರ್ನಾಟಕದ ಜಿಲ್ಲೆಗಳ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಸರ್ಕಾರ ತಕ್ಷಣ ರೈತರ ನೆರವಿಗೆ ಧಾವಿಸಬೇಕಿದ್ದು ಬೆಳೆ ನಷ್ಟಪರಿಹಾರ ಸೇರಿದಂತೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕಿದೆ ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಂಜಾವಧೂತ ಸ್ವಾಮೀಜಿ ಹೇಳಿದರು.
ಅವರು ತಾಲೂಕಿನ ಗೌಡಗೆರೆ ಹೋಬಳಿಯ ಬ್ರಹ್ಮಸಂದ್ರ ಗ್ರಾಮದಲ್ಲಿ ಗುಂಡಾಂಜನೇಯ ಸ್ವಾಮಿ ನೂತನ ದೇವಸ್ಥಾನ ಪ್ರತಿಷ್ಠಾಪನೆ ಹಾಗೂ ಗೋಪುರ, ಕಳಸ ಸ್ಥಾಪನೆ ಮಹೋತ್ಸವದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಮಧ್ಯ ಕರ್ನಾಟಕ ಜಿಲ್ಲೆಗಳಾದ ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯು ಬಾರದೆ ರೈತರು ಬಿತ್ತಿದ್ದ ಬೆಳೆಗಳು ಒಣಗಿ ಹೋಗಿವೆ. ಈ ನಿಟ್ಟಿನಲ್ಲಿ ಸರ್ಕಾರ ಅಧಿಕಾರಿಗಳಿಂದ ತಕ್ಷಣ ವರದಿ ಪಡೆದು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಬೇಕು. ಶೇಂಗಾ ನಾಡು ಎಂದು ಖ್ಯಾತಿ ಗಳಿಸಿರುವ ತುಮಕೂರು ಜಿಲ್ಲೆಯಲ್ಲಿ ಶೇಂಗಾ ಬಿತ್ತನೆ ಮಾಡಿರುವ ರೈತರು ಮಳೆಯ ಕೊರತೆಯಿಂದ ಸಂಪೂರ್ಣ ಬೆಳೆ ನಷ್ಟಪರಿಸ್ಥಿತಿ ಎದುರಿಸುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಈಗಾಗಲೇ ರೈತರು ಶೇಂಗಾ ಬೆಳೆಗೆ ವಿಮೆ ಹಣ ಪಾವತಿಸಿದ್ದು, ಯಾವುದೇ ತಾರತಮ್ಯ ಮಾಡದೆ ಸಂಪೂರ್ಣ ಬೆಳೆ ನಷ್ಟಪರಿಹಾರ ಘೋಷಣೆ ಮಾಡಿ ಬೆಳೆ ನಷ್ಟಪರಿಹಾರ ನೀಡುವಂತೆ ಆಗ್ರಹಿಸಿದರು.
ಜೆಡಿಎಸ್ ರಾಜ್ಯ ಪರಿಷತ್ ಸದಸ್ಯರಾದ ಆರ್.ಉಗ್ರೇಶ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ನಡೆಯುವಂತಹ ದೇವತಾ ಉತ್ಸವಗಳು ಪರಸ್ಪರ ಸ್ನೇಹ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಸಹಕಾರಿಯಾಗುತ್ತವೆ. ಮುಗ್ಧ ಮನಸ್ಸಿನಿಂದ ಗುಂಡಾಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿದರೆ ಇಷ್ಟಾರ್ಥ ಸಿದ್ಧಿಗೊಳಲಿದ್ದು, ಗ್ರಾಮಕ್ಕೆ ಒಳಿತಾಗಲಿದೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಮೂಡ್ಲೇಗೌಡ, ಮಾಜಿ ಉಪಾಧ್ಯಕ್ಷ ಎ.ಕಾಂತಯ್ಯ, ಮುಖಂಡರಾದ ಬಿ.ಜಿ. ಯೋಗಾನಂದ, ಬಾಲಚಂದ್ರ, ಕೆ.ಸಿ.ರಂಗನಾಥ್, ಸಿದ್ದಗಂಗಪ್ಪ, ಶಿಕ್ಷಕ ಬಿ.ಕೆ. ರಮೇಶ್, ಟೈಲರ್ ಗುಣ್ಣಯ್ಯ, ಗೋವಿಂದಯ್ಯ, ವಸಂತಕುಮಾರ, ಕೃಷ್ಣಪ್ಪ, ವಕೀಲ ಗುಣಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು. ಗುಂಡಾಂಜನೇಯ ಸ್ವಾಮಿಗೆ ನೂರಾರು ಮಹಿಳೆಯರು ಆರತಿ ಉತ್ಸವ ನೆರವೇರಿಸಿ, ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು.
25ಶಿರಾ2: ಶಿರಾ ತಾಲೂಕಿನ ಬ್ರಹ್ಮಸಂದ್ರ ಗ್ರಾಮದಲ್ಲಿ ನಡೆದ ಶ್ರೀ ಗುಂಡಾಂಜನೇಯ ಸ್ವಾಮಿ ನೂತನ ದೇವಸ್ಥಾನ ಪ್ರತಿಷ್ಠಾಪನೆ ಹಾಗೂ ಗೋಪುರ, ಕಳಸ ಸ್ಥಾಪನೆ ಮಹೋತ್ಸವದಲ್ಲಿ ನಂಜಾವಧೂತ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.