Asianet Suvarna News Asianet Suvarna News

'ಬೆಂಬಲ ಬೆಲೆಗೆ ಕೊಬ್ಬರಿ ಖರೀದಿಗೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಲಿ'

ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ಕೇಂದ್ರ ಸರ್ಕಾರ ರು. 11750  ಬೆಂಬಲ ಬೆಲೆ ನೀಡಿದ್ದರೂ, ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ರು. 8 ಸಾವಿರಕ್ಕೆ ತೀವ್ರ ಕುಸಿತ ಕಂಡಿರುವುದರಿಂದ ಕೂಡಲೆ ಕೇಂದ್ರ ಸರ್ಕಾರ ನಫೆಡ್ ಖರೀದಿ ಕೇಂದ್ರ ತೆರೆಯುವ ಮೂಲಕ ಸಂಕಷ್ಟದಲ್ಲಿರುವ ರೈತರಿಂದ ಬೆಂಬಲ ಬೆಲೆಗೆ ಕೊಬ್ಬರಿ ಖರೀದಿಸಬೇಕೆಂದು ಕಾಂಗ್ರೆಸ್ ಸೇವಾ ದಳದ ರಾಜ್ಯ ಕಾರ್ಯದರ್ಶಿ ಮಾದೀಹಳ್ಳಿ ಉಮೇಶ್ ಒತ್ತಾಯಿಸಿದ್ದಾರೆ.

 Let the central government intervene in the purchase of coconut at support price snr
Author
First Published Oct 15, 2023, 7:56 AM IST

 ತಿಪಟೂರು: ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ಕೇಂದ್ರ ಸರ್ಕಾರ ರು. 11750  ಬೆಂಬಲ ಬೆಲೆ ನೀಡಿದ್ದರೂ, ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ರು. 8 ಸಾವಿರಕ್ಕೆ ತೀವ್ರ ಕುಸಿತ ಕಂಡಿರುವುದರಿಂದ ಕೂಡಲೆ ಕೇಂದ್ರ ಸರ್ಕಾರ ನಫೆಡ್ ಖರೀದಿ ಕೇಂದ್ರ ತೆರೆಯುವ ಮೂಲಕ ಸಂಕಷ್ಟದಲ್ಲಿರುವ ರೈತರಿಂದ ಬೆಂಬಲ ಬೆಲೆಗೆ ಕೊಬ್ಬರಿ ಖರೀದಿಸಬೇಕೆಂದು ಕಾಂಗ್ರೆಸ್ ಸೇವಾ ದಳದ ರಾಜ್ಯ ಕಾರ್ಯದರ್ಶಿ ಮಾದೀಹಳ್ಳಿ ಉಮೇಶ್ ಒತ್ತಾಯಿಸಿದ್ದಾರೆ.

ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ, ಬೆಂಬಲ ಬೆಲೆಗಿಂತ ಕಡಿಮೆಯಾದ ತಕ್ಷಣ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ನಫೆಡ್ ಮೂಲಕ ಖರೀದಿ ಕೇಂದ್ರ ತೆರೆದು ತಾನು ನೀಡಿರುವ ಬೆಂಬಲ ಬೆಲೆಗೆ ರೈತರಿಂದ ಕೊಬ್ಬರಿ ಖರೀದಿಸಬೇಕೆಂಬ ನಿಯಮವಿದೆ. ಆದರೆ, ಕಳೆದ ಒಂದು ವರ್ಷದಿಂದಲೂ ಕೊಬ್ಬರಿ ಬೆಲೆ ರು.೮೦೦೦ಕ್ಕೆ ತೀವ್ರ ಕುಸಿತ ಕಂಡು ಬೆಳೆಗಾರರು ಸಂಕಷ್ಟದಲ್ಲಿದ್ದರೂ ಬೆಂಬಲ ಬೆಲೆಗೆ ಕೊಬ್ಬರಿ ಖರೀದಿಸದಿರುವುದರಿಂದ ಬೆಳೆಗಾರರು ತೀವ್ರ ನಷ್ಟಕ್ಕೊಳಗಾಗಿದ್ದಾರೆ.

ಕೊಬ್ಬರಿ ಬೆಲೆ ತೀವ್ರ ಕುಸಿತ ಮನಗಂಡ ರಾಜ್ಯ ಸರ್ಕಾರ, ಕಳೆದ ವಿಧಾನಸಭಾ ಅಧಿವೇಶನದಲ್ಲಿ ನಫೆಡ್ ಮೂಲಕ ಬೆಂಬಲ ಬೆಲೆಗೆ ಕೊಬ್ಬರಿ ಮಾರುವ ರೈತರಿಗೆ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ೧೨೫೦ ರು. ಪ್ರೋತ್ಸಾಹ ಬೆಲೆ ನೀಡುವ ಘೋಷಣೆ ಮಾಡಿದೆಯಾದರೂ ನಫೆಡ್ ಖರೀದಿ ಕೇಂದ್ರಗಳು ಸಹ ಬಂದ್ ಆಗಿರುವುರಿಂದ ಕೊಬ್ಬರಿ ಬೆಳೆಗಾರರಿಗೆ ಈ ಪ್ರೋತ್ಸಾಹ ಬೆಲೆ ಸಿಗದೆ ತೀವ್ರ ಹತಾಶರಾಗಿದ್ದಾರೆ. ನಫೆಡ್ ಮೂಲಕ ರೈತರು ಕೊಬ್ಬರಿ ಮಾರಿದರೆ ಒಂದು ಕ್ವಿಂಟಾಲ್ ಕೊಬ್ಬರಿಗೆ ಬೆಂಬಲ ಬೆಲೆ ಹಾಗೂ ಪ್ರೋತ್ಸಾಹ ಬೆಲೆ ಎರಡೂ ಸೇರಿ ಒಟ್ಟು ಒಂದು ಕ್ವಿಂಟಾಲ್‌ಗೆ ರು. ೧೩ಸಾವಿರ ಬೆಲೆ ಸಿಗುತ್ತದೆ. ನಫೆಡ್ ಕೇಂದ್ರ ತೆರೆಯದ ಕಾರಣ ರೈತರು ಕೊಬ್ಬರಿಯನ್ನು ಕೇವಲ ರು. ೮ಸಾವಿರಕ್ಕೆ ಮಾರುವಂತಾಗಿದೆ. ಕೂಡಲೆ ರಾಜ್ಯದ ಸಂಸದರು ಕೊಬ್ಬರಿಯನ್ನು ಬೆಂಬಲ ಬೆಲೆಗೆ ಕೊಳ್ಳುವಂತೆ ಕೇಂದ್ರದ ಮೇಲೆ ಒತ್ತಡ ಹಾಕಿ ಕೊಬ್ಬರಿ ಬೆಳೆಗಾರರ ಸಂಕಷ್ಟಕ್ಕೆ ನೆರವಾಗಬೇಕೆಂದು ಮಾದೀಹಳ್ಳಿ ಉಮೇಶ್ ಒತ್ತಾಯಿಸಿದ್ದಾರೆ.

ರಾಜ್ಯಪಾಲರಿಗೆ ,ಮನವಿ

ತಿಪಟೂರು : ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಮತ್ತು ತೆಂಗು ಬೆಳೆಗಾರರ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆದ ರಾಜ್ ಭವನ್ ಚಲೋ ಕಾರ್ಯಕ್ರಮದಲ್ಲಿ ತಿಪಟೂರಿನ ರೈತ ಮುಖಂಡರುಗಳು ಭಾಗವಹಿಸಿ ಕೇಂದ್ರ ಸರ್ಕಾರ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 20 ಸಾವಿರ ರು. ಘೋಷಣೆ ಮಾಡಬೇಕು ಹಾಗೂ ರಾಜ್ಯ ಸರ್ಕಾರ 5 ಸಾವಿರ ರು. ಪ್ರೋತ್ಸಾಹ ಧನ ನೀಡಬೇಕೆಂದು ಒತ್ತಾಯಿಸಿ ರೈತರ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು.

ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಸಂಚಾಲಕ ಎಸ್.ಎನ್. ಸ್ವಾಮಿ ಮಾತನಾಡಿ, ದಿನದಿಂದ ದಿನಕ್ಕೆ ಕೊಬ್ಬರಿ ಬೆಲೆ ತೀವ್ರವಾಗಿ ಕುಸಿಯುತ್ತಿದೆ. ತೆಂಗು ಬೆಳೆಗಾರರು ಸಂಕಷ್ಟದಲ್ಲಿರುವ ಇಂದಿನ ಸಂದರ್ಭದಲ್ಲಿ ಅವರ ಸಮಸ್ಯೆಯನ್ನು ಮತ್ತು ಹಕ್ಕೊತ್ತಾಯಗಳನ್ನು ತಮ್ಮ ಗಮನಕ್ಕೆ ತರಲು ಸಂಯುಕ್ತ ಹೋರಾಟ ಕರ್ನಾಟಕ ಬಯಸುತ್ತದೆ ಎಂದರು.

ವಿಶ್ವದಾದ್ಯಂತ ಪ್ರಸಿದ್ಧವಾಗಿರುವ ಉಂಡೆ ಕೊಬ್ಬರಿಯ ಬೆಲೆ ಕ್ವಿಂಟಲ್‌ಗೆ ರು.8 ಸಾವಿರಕ್ಕೆ ಕುಸಿದಿದೆ. ರಾಜ್ಯದಲ್ಲಿ 2.18 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗುವ ಕೊಬ್ಬರಿಯನ್ನು ನಂಬಿಕೊಂಡು ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ. ರಾಜ್ಯ ಸರ್ಕಾರ ಚಳುವಳಿಯ ಒತ್ತಡದಿಂದ ರು.1250 ಪ್ರೋತ್ಸಾಹ ಧನ ನೀಡಿತಾದರೂ ಅದೂ ಅನ್ವಯವಾಗಿಲ್ಲ. ಹಾಗಾಗಿ ಕೊಬ್ಬರಿ ಖರೀದಿಯನ್ನು ಮುಂದುವರೆಸದಿದ್ದರೆ ರೈತರಿಗೆ ಯಾವ ಅನುಕೂಲವೂ ಆಗುವುದಿಲ್ಲ. ಕಳೆದ ಐದಾರು ವರ್ಷಗಳಿಂದ ಒಣ ಬರ ಮತ್ತು ಹಸಿ ಬರಗಳಿಂದ ತೆಂಗು ಬೆಳೆಗಾರರು ನಷ್ಟ ಅನುಭವಿಸಿದರು. ಜೊತೆಗೆ ಕಪ್ಪು ಮತ್ತು ಕೆಂಪು ಮೂತಿ ಕೀಟಗಳ ಬಾಧೆ, ಬೊಡ್ಡೆ ರಸ ಸೋರುವ ರೋಗ, ಕಪ್ಪು ಚುಕ್ಕೆ ರೋಗ, ಗರಿ ಉದುರುವ ರೋಗಗಳಿಗೆ ತೆಂಗಿನಮರಗಳು ಬಲಿಯಾಗುತ್ತಿವೆ. ಇದರಿಂದ ತೆಂಗು ಬೆಳೆಗಾರರು ತೀವ್ರ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಕೊಬ್ಬರಿ ಖರೀದಿ ಕೇಂದ್ರ ನಫೆಡ್‌ನ್ನು ಏಕಾಏಕಿ ಮುಚ್ಚಿರುವ ಕಾರಣ ರೈತರಿಗೆ ದಿಕ್ಕೇ ತೋಚದಂತಾಗಿದೆ. ಸರ್ಕಾರ ರೈತರ ಕಷ್ಟವನ್ನು ಅರ್ಥಮಾಡಿಕೊಂಡು ಕ್ವಿಂಟಲ್ ಕೊಬ್ಬರಿಗೆ 20ಸಾವಿರ ರು. ಘೋಷಣೆ ಮಾಡುವ ಮೂಲಕ ನಫೆಡ್ ಕೇಂದ್ರವನ್ನು ಶೀಘ್ರವಾಗಿ ತೆರೆಯಬೇಕೆಂದು ಒತ್ತಾಯಿಸಿದರು.

Follow Us:
Download App:
  • android
  • ios