ಸೋಮಶೇಖರ್ ಪಾರ್ಲಿಮೆಂಟ್‌ಗೆ ಸ್ಪರ್ಧಿಸಲಿ: ದೊಡ್ಡರಂಗೇಗೌಡ
ವಿಶ್ರಾಂತ ಐಎಎಸ್ ಅಧಿಕಾರಿ ಡಾ.ಸಿ.ಸೋಮೇಶೇಖರ್ ಅವರು ಪಾರ್ಲಿಮೆಂಟ್ ಚುನಾವಣೆಯಲ್ಲಿ ಸ್ಪರ್ಧಿಸಲಿ ಎಂದು ಸಾಹಿತಿ ಡಾ. ದೊಡ್ಡರಂಗೇಗೌಡ ಸಲಹೆ ನೀಡಿದರು.
ತುಮಕೂರು : ವಿಶ್ರಾಂತ ಐಎಎಸ್ ಅಧಿಕಾರಿ ಡಾ.ಸಿ.ಸೋಮೇಶೇಖರ್ ಅವರು ಪಾರ್ಲಿಮೆಂಟ್ ಚುನಾವಣೆಯಲ್ಲಿ ಸ್ಪರ್ಧಿಸಲಿ ಎಂದು ಸಾಹಿತಿ ಡಾ. ದೊಡ್ಡರಂಗೇಗೌಡ ಸಲಹೆ ನೀಡಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕಸಾಪ, ಡಾ.ಸಿ.ಸೋಮಶೇಖರ್ ಅಭಿಮಾನಿ ಬಳಗ ಹಾಗೂ ಸಪ್ನಾ ಬುಕ್ ಹೌಸ್‌ನವರು ಆಯೋಜಿಸಿದ್ದ, ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಅವರ ನೀನೊಲಿದ ಬದುಕು ಆತ್ಮನಿವೇದನಾ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ವ್ಯಕ್ತಿಯ ಆತ್ಮ ಕಥನ ಎನ್ನುವುದು ಒಂದು ರೀತಿಯಲ್ಲಿ ತಪ್ಪೊಪ್ಪಿಗೆ ಕೃತಿ. ಆದರೆ ಕೆಲವರು ತಮ್ಮ ತಪ್ಪುಗಳನ್ನು ಮುಚ್ಚಿಡುವುದೇ ಹೆಚ್ಚು. ಡಾ.ಸಿ.ಸೋಮಶೇಖರ್ ತಮ್ಮ ಕೃತಿಯಲ್ಲಿ ತಾವು ಅನುಭವಿಸಿದ ನೋವು, ನಲಿವುಗಳನ್ನು ಸಮವಾಗಿ ಚಿತ್ರಿಸಿದ್ದಾರೆ. ವ್ಯಕ್ತಿತ್ವ ಎಂಬುದು ಒಂದು ದಿನದಲ್ಲಿ ನಿರ್ಮಾಣವಾಗುವಂತಹದಲ್ಲ. ಸ್ಪಷ್ಟತಯಾರಿ, ಸಂಕಲ್ಪ, ಅದಕ್ಕೆ ಬೇಕಾದ ದಾರಿ ಎಲ್ಲವೂ ಅಗತ್ಯ. ಡಾ.ಸಿ.ಸೋಮಶೇಖರ್ ಅವರನ್ನು ನಾನು ಅವರು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಬಲ್ಲೆ. ನಮ್ಮ ಎಸ್.ಎಲ್.ಎನ್. ಕಾಲೇಜಿನಲ್ಲಿ ನಡೆಯುತ್ತಿದ್ದ ಚರ್ಚಾ ಸ್ಪರ್ಧೆಗಳಿಗೆ ಬರುತ್ತಿದ್ದ ಸಿದ್ದಲಿಂಗಯ್ಯ,ಡಿ.ಆರ್.ನಾಗರಾಜು ಮತ್ತು ಡಾ.ಸಿ.ಸೋಮ ಶೇಖರ್ ಅವರು, ಅತ್ಯಂತ ನಿಖರವಾಗಿ ಮಾತನಾಡುವ ಚಾಕಚಕ್ಯತೆ ಹೊಂದಿದ್ದವರು ಎಂದರು.
ಕೃತಿಯ ಲೇಖಕ ಡಾ.ಸಿ.ಸೋಮಶೇಖರ್ ಮಾತನಾಡಿ, ನನ್ನ ಬದುಕಿನಲ್ಲಿ ಆದ ಅಂತರಂಗದ ನೋವು, ಸಂಕಟಗಳನ್ನು ಈ ಕೃತಿಯ ಮೂಲಕ ನಿವೇದನೆ ಮಾಡಿಕೊಂಡಿದ್ದೇನೆ. ತುಮಕೂರು ನನ್ನ ಕರ್ಮಭೂಮಿ. ಕ್ರೀಡಾ ಅಧಿಕಾರಿಯಾಗಿ 3 ವರ್ಷ, ಜಿಲ್ಲಾಧಿಕಾರಿಯಾಗಿ 3 ವರ್ಷ ಕೆಲಸ ಮಾಡಿದ ತುಮಕೂರು ನನಗೆ ಎರಡನೇ ತವರು ಮನೆಯಿದ್ದಂತೆ. ಇಲ್ಲಿನ ಜನ ನನಗೆ ನೀಡಿದ ಪ್ರೀತಿ, ಆಶೀರ್ವಾದ, ಸಲಹೆ ನಾನು ಮರೆಯಲು ಸಾಧ್ಯವೇ ಇಲ್ಲ. ಈಗಾಗಲೇ ಕೃತಿ ಎರಡು ಕಡೆಗಳಲ್ಲಿ ಬಿಡುಗಡೆಯಾಗಿದೆ. ಅನೇಕ ಗೆಳೆಯರು, ಹಿತೈಷಿಗಳು ಇರುವ ತುಮಕೂರು ಜಿಲ್ಲೆಯಲ್ಲಿ ಬಿಡುಗಡೆ ಮಾಡುವುದು ನನಗೆ ಹೆಚ್ಚು ಖುಷಿ ತಂದಿದೆ ಎಂದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮಾತನಾಡಿ, ಡಾ.ಸಿ.ಸೋಮಶೇಖರ್ ಡಿ.ಸಿ. ಇದ್ದಾಗ ನಾನು ಎ.ಸಿ.ಯಾಗಿ ಕೆಲಸ ಮಾಡಿದ್ದೇನೆ. ಅನೇಕ ವಿಷಯಗಳನ್ನು ಕಲಿತಿದ್ದೀನಿ. ನೀನೊಲಿದ ಬದುಕು ಒಂದು ಎಪಿಸೋಡ್‌ಗೆ ಮುಗಿಯುವಂತಹದ್ದಲ್ಲ. ಇಂತಹ ಹಲವು ಎಪಿಸೋಡ್ ಅಗತ್ಯವಿದೆ. ವಚನ ಸಾಹಿತ್ಯ ಕುರಿತು ಪಿ.ಎಚ್.ಡಿ ಮಾಡಿ, ಅದನ್ನು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡವರು. ಆಡಳಿತದಲ್ಲಿ ಹಿಂದುಳಿದವರಲ್ಲ. ಇತರೆ ಅಧಿಕಾರಿಗಳು ಹಾಗೂ ಜನಸಾಮಾನ್ಯರನ್ನು ಪ್ರೀತಿಯಿಂದಲೇ ತಿದ್ದುವ ಕೆಲಸ ಮಾಡಿದರು. ಅವರ ಬದುಕು ಮತ್ತಷ್ಟುಹಸನಾಗಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಕಲೆ ಸಾಹಿತ್ಯ, ಸಂಗೀತ ತನ್ನದೆ ಇತಿಹಾಸ ಇರುವ ಜಿಲ್ಲೆಯಲ್ಲಿ ಇಂತಹ ಕಾರ್ಯಕ್ರಮ ಒಂದು ಹೆಮ್ಮೆಯ ವಿಚಾರ. ಯುವಜನ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರಾಗಿ, ಜಿಲ್ಲಾಧಿಕಾರಿಯಾಗಿ ಇಂಚಿಂಚು ಬಲ್ಲವರು. ಸಾಂಸ್ಕೃತಿಕ ವಲಯ, ಮಾಧ್ಯಮದ ವಲಯದ ಜನರನ್ನು ಹೆಚ್ಚು ಪ್ರೀತಿಸುತ್ತಿದ್ದರು. ಅವರದ್ದೇ ಆದ ಆತ್ಮಕಥನವನ್ನು ನೀನೊಲಿದ ಬದುಕು ಎಂಬ ಕೃತಿಯ ಮೂಲಕ ತಮ್ಮ ಬದುಕಿನ ತುಮುಲಗಳನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಮತ್ತಷ್ಟುಕೃತಿಗಳನ್ನು ನಿರೀಕ್ಷಿಸುತ್ತೇವೆ ಎಂದರು.
ರಾಮಕೃಷ್ಣ-ವಿವೇಕಾನಂದ ಆಶ್ರಮದ ಡಾ.ವೀರೇಶಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ಡಾ.ಸಿ.ಸೋಮಶೇಖರ್ ವೃತ್ತಿಯಿಂದ ನಿವೃತ್ತರಾದರು, ಪ್ರೀತಿಯಲ್ಲಿ ಇಂದಿಗೂ ಜಿಲ್ಲೆಯ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ. ನನಗೂ ಅವರಿಗೆ ಸುಮಾರು 45 ವರ್ಷಗಳ ಸ್ನೇಹ. ಸಾಹಿತಿಯಾಗಿ, ಚರ್ಚಾಪಟುವಾಗಿ ನನಗೆ ಪ್ರತಿಸ್ಪರ್ಧಿಗಳು, ಅವರ ಬದುಕು ವಾಸ್ತವ ನೆಲಗಟ್ಟಿನಲ್ಲಿ ಇರುವಂತದ್ದು. ಕೃತಕತೆ ಇಲ್ಲ. ತಂದೆಯನ್ನು ಬಹುಬೇಗ ಕಳೆದುಕೊಂಡು ತಾಯಿಯ ಆಸರೆಯಲ್ಲಿ ಬೆಳೆದವರು. ಅನಕ್ಷರತೆಯಾದ ತಾಯಿ, ನನ್ನ ಮಗ ಒಳ್ಳೆಯ ವಿದ್ಯಾವಂತನಾಗಲಿ ಎಂದು ಮಾವನ ಮನೆಗೆ ಕಳುಹಿಸಿ, ಪುತ್ರ ವ್ಯಾಮೋಹ ತ್ಯಾಗ ಮಾಡಿದವರು. ಅವರು ಆ ತ್ಯಾಗ ಇಂದು ಡಾ.ಸೋಮಶೇಖರ್ ಅಂತಹ ವ್ಯಕ್ತಿಯನ್ನು ಕರ್ನಾಟಕಕ್ಕೆ ನೀಡಿದರು. ತಾಯಿ ಪ್ರೀತಿಗೆ ವೃದ್ದಾಪ್ಯವಿಲ್ಲ. ಬದುಕಿನುದ್ದಕ್ಕೂ ನಮ್ಮ ಜೊತೆಗೆ ಬರುತ್ತದೆ. ಇಂದಿಗೂ ತಾಯಿಯ ಬಗ್ಗೆ ಕೃತಜ್ಞತಾ ಪೂರಕ ಸ್ಮರಣೆಯನ್ನು ಇಟ್ಟುಕೊಂಡಿದ್ದಾರೆ. ಅವರು ಮತ್ತಷ್ಟುಎತ್ತರಕ್ಕೆ ಬೆಳೆಯಲಿ ಎಂಬ ಆಶಯ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಸರ್ವಮಂಗಳ ಸೋಮಶೇಖರ್, ಟೂಡಾ ಅಧ್ಯಕ್ಷ ಚಂದ್ರಶೇಖರ್, ಡಾ.ಲಕ್ಷ್ಮಣದಾಸ್, ಎಸ್.ನಾಗಣ್ಣ, ಚಿ.ನಿ.ಪುರುಷೋತ್ತಮ, ಟಿ.ಬಿ.ಶೇಖರ್, ಕವಿತಾಕೃಷ್ಣ, ಮೋಹನ್ ಪಾಟೀಲ್, ಚಿದಾನಂದ, ಹೇಮಾಪಂಚಾಕ್ಷರಯ್ಯ, ಕಸಾಪ ಪದಾಧಿಕಾರಿಗಳಾದ ಡಾ.ಡಿ.ಎನ್.ಯೋಗೀಶ್ವರಪ್ಪ, ಕಂಟಲಗೆರೆ ಸಣ್ಣಹೊನ್ನಯ್ಯ, ಉಮಾಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸೋಮಶೇಖರ್‌ರಂತಹ ಜ್ಞಾನಿಗಳು, ಜನರ ಕಷ್ಟಅರಿತವರು ಪಾರ್ಲಿಮೆಂಟ್‌ಗೆ ಹೋದರೆ ವಾಜಪೇಯಿರಂತಹ ಉತ್ತಮ ಸಂಸದೀಯ ಪಟುವಾಗಲು ಸಾಧ್ಯ. ಆದ್ದರಿಂದ ಮುಂಬರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸ್ಪರ್ಧಿಸಿ,ಆಯ್ಕೆಯಾಗಿ ಹೋಗುವಂತೆ ನಾವುಗಳು ಪ್ರಯತ್ನಿಸಬೇಕಿದೆ. ಇವರು ಪಾರ್ಲಿಮೆಂಟ್‌ಗೆ ಹೋದರೆ ಜನರ ಪರವಾಗಿ, ಅದರಲ್ಲಿಯೂ ಬಡ ಜನರ ಪರವಾಗಿ ಮಾತನಾಡುತ್ತಾರೆ ಎಂಬ ನಂಬಿಕೆ ನಮ್ಮದು. ಈ ನಿಟ್ಟಿನಲ್ಲಿ ಅವರ ಪ್ರಯತ್ನ ಸಾಗಲಿ.
ಡಾ.ದೊಡ್ಡರಂಗೇಗೌಡ ಸಾಹಿತಿ
ನನ್ನ ಇಡೀ ಬದುಕನ್ನು ನಡೆಸಿಕೊಂಡು ಬಂದಿದ್ದು, ವಚನ ಸಾಹಿತ್ಯ. ಅದನ್ನು ಸಾರ್ವಜನಿಕ ಬದುಕಿನಲ್ಲಿ ಅಳವಡಿಸಿಕೊಂಡು ನನ್ನ ಜವಾಬ್ದಾರಿಯನ್ನು ನಿರ್ವಹಿಸಿದೆನು. ವ್ಯಕ್ತಿಯನ್ನು ಕಡತವಾಗಿ ಕಾಣಬೇಡ, ಕಡತದಲ್ಲಿ ವ್ಯಕ್ತಿಯನ್ನು ಕಾಣು ಎಂಬ ಧ್ಯೇಯ ವಾಕ್ಯವನ್ನು ರೂಢಿಸಿಕೊಂಡು ಬಂದಿದ್ದೇನೆ. ಜನಮುಖಿ ಆಡಳಿತ ನಡೆಸುವುದು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷನಾಗಿ ಹಲವಾರು ಜಿಲ್ಲೆಗಳನ್ನು ಸುತ್ತಿ, ಗಡಿಯಲ್ಲಿ ತಲ್ಲಣಗಳನ್ನು ಹತ್ತಿರದಿಂದ ನೋಡಿದ್ದೇನೆ. ಬೆಳಗಾವಿ ಗಡಿಯಲ್ಲಿ ಶಾಂತಿ ನೆಲೆಸಬೇಕೆಂಬುದು ನನ್ನ ಆಶಯವಾಗಿದೆ.
ಡಾ.ಸಿ.ಸೋಮಶೇಖರ್ ಕೃತಿಯ ಲೇಖಕ