ಸಿದ್ದರಾಮಯ್ಯ ಯೂಟರ್ನ್‌ ಹೊಡೆಯದೆ ಕೋಲಾರದಲ್ಲೇ ಸ್ಪರ್ಧಿಸಲಿ

ಸಿದ್ದರಾಮಯ್ಯ ಯೂಟರ್ನ್‌ ಹೊಡೆಯಬಾರದು, ಕೋಲಾರದಲ್ಲೇ ಸ್ಪರ್ಧಿಸಬೇಕು ಎಂದು ಮಾಜಿ ಸಚಿವ ವರ್ತೂರು ಆರ್‌. ಪ್ರಕಾಶ್‌ ಒತ್ತಾಯಿಸಿದರು.

Let  Siddaramaiah contest in Kolar without making a U-turn snr

  ಕೋಲಾರ :  ಸಿದ್ದರಾಮಯ್ಯ ಯೂಟರ್ನ್‌ ಹೊಡೆಯಬಾರದು, ಕೋಲಾರದಲ್ಲೇ ಸ್ಪರ್ಧಿಸಬೇಕು ಎಂದು ಮಾಜಿ ಸಚಿವ ವರ್ತೂರು ಆರ್‌. ಪ್ರಕಾಶ್‌ ಒತ್ತಾಯಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಕಡೆಯವರು ಮತ್ತು ಕುರುಬ ಸಮಾಜದ ಸ್ವಾಮೀಜಿ ಒತ್ತಡಕ್ಕೆ ಮಣಿದು ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವರದಿಗಳನ್ನು ಹರಿಯಬಿಡಲಾಗುತ್ತಿದೆ. ಇವೆಲ್ಲ ವಾಸ್ತವಕ್ಕೆ ದೂರವಿದ್ದು, ನನ್ನ ಮನವೊಲಿಕೆಗೆ ಯಾರೂ ಪ್ರಯತ್ನಿಸಿಲ್ಲ. ಹೈವೋಲ್ಟೇಜ್‌ ವಿದ್ಯುತ್‌ ತಂತಿಯಂತಿರುವ ನನ್ನನ್ನು ದಾರಿ ತಪ್ಪಿಸಲು ಬರುವವರು ಮುಟ್ಟಿದರೆ ಸುಟ್ಟು ಭಸ್ಮವಾಗುತ್ತಾರೆ ಎಂದರು.

ಜ.9ರವರೆಗೆ ಸಿದ್ದರಾಮಯ್ಯ ಮೇಲೆ ಗೌರವವಿತ್ತು. ಆದರೆ ಅವರದೇ ಸಮುದಾಯದ ನನ್ನ ವಿರುದ್ಧ ಸ್ಪರ್ಧಿಸುವುದಾಗಿ ಪ್ರಕಟಿಸಿದ ಬಳಿಕ ಆ ಗೌರವ ದೂರವಾಯಿತು. ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌, ಎಂಎಲ್ಸಿ ಅನಿಲ್‌ ಕುಮಾರ್‌ ಮತ್ತಿತರರು ಅವರನ್ನು ಕರೆತಂದರು ಎನ್ನುವುದಕ್ಕಿಂತ ನನ್ನನ್ನು ಮುಗಿಸಲೆಂದೇ ಸ್ವತಃ ಅವರೇ ಸ್ಪರ್ಧೆಗೆ ಮುಂದಾಗಿದ್ದಾರೆ ಎಂದರು.

ಕುರುಬರ ಸ್ವಾಮೀಜಿ, ಬೈರತಿ ಸುರೇಶ್‌ ಸೇರಿ ಯಾರೂ ನನ್ನನ್ನು ಮನವೊಲಿಕೆ ಯತ್ನ ಮಾಡಿಲ್ಲ. ಸ್ವತಂತ್ರವಾಗಿ ಸ್ಪರ್ಧಿಸಿ 2 ಬಾರಿ ಗೆದ್ದಿರುವ ನನಗೆ ಕಳೆದ ಬಾರಿ ವೈಯಕ್ತಿಕ ಸಮಸ್ಯೆ, ನನ್ನ ಬಳಿಯಿದ್ದವರೇ ಕೆಲಸವರು ನನ್ನ ವಿರುದ್ಧ ಕೆಲಸ ಮಾಡಿದ್ದರಿಂದ ಸೋಲುವಂತಾಯಿತು. ಸೋತು ಕಷ್ಟದಲ್ಲಿದ್ದಾಗ ಜತೆಗಿದ್ದವರು ಯಾರೆಂದು ಈಗ ಅರ್ಥವಾಗಿದೆ. ಗ್ರಾಮ ಪಂಚಾಯಿತಿ ಸದಸ್ಯನಾಗಿ ರಾಜಕೀಯ ಪ್ರವೇಶಿಸಿದ್ದು, ಒಮ್ಮೆ ಸೋತಿದ್ದು ಬಿಟ್ಟರೆ ಎಲ್ಲ ಗೆಲುವೇ. ಹೀಗಾಗಿ ಸಿದ್ದರಾಮಯ್ಯ ಅಥವಾ ಯಾರೇ ಎದುರಾಳಿಯಾದರೂ ಎದುರಿಸುತ್ತೇನೆ. ನನ್ನನ್ನು ಮುಗಿಸಲು ಬಂದಿರುವ ಸಿದ್ದರಾಮಯ್ಯ ರಾಜಕೀಯ ಅಂತ್ಯ ಕೋಲಾರದಲ್ಲೇ ಆಗಲಿದೆ ಎಂದರು.

ಸ್ಪರ್ಧೆಗೆ ಒಲವಿದೆ ಆದರೆ ಹೈಕಮಾಂಡ್‌ ಕೈಯ್ಯಲ್ಲಿದೆ ಎಂದು ಹೇಳಿ, ಇದೀಗ ನೈಜ ಚಿತ್ರಣ ಅರ್ಥವಾಗುತ್ತಿದ್ದಂತೆ ವರುಣಾ ಅಥವಾ ಬೇರೆಡೆ ನಿಲ್ಲಲು ತಯಾರಿ ನಡೆಸಿರುವ ಮಾಹಿತಿ ಇದೆ. ಆದರೆ ಅವರು ಹಾಗೆ ಮಾಡಿದರೆ ಸ್ಪರ್ಧೆಗೆ ಮುನ್ನ ಸೋಲೊಪ್ಪಿಕೊಂಡು ಪಲಾಯನ ಮಾಡಿದ ಅಪಕೀರ್ತಿ ಬರುತ್ತದೆ. ಶಾಸಕ ಕೆ. ಶ್ರೀನಿವಾಸಗೌಡ ಮತ್ತಿತರರು ಇವರನ್ನು ಗೆಲ್ಲಿಸಿಕೊಂಡು ಬರುವ ತಾಕತ್‌ ಇರುವವರೇ. ಹೀಗಾಗಿ ನನ್ನ ವಿರುದ್ಧ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.

ಮುಖಂಡರಾದ ಬೆಗ್ಲಿ ಸೂರ್ಯಪ್ರಕಾಶ್‌, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ತಂಬಹಳ್ಳಿ ಮುನಿಯಪ್ಪ, ನಗರಸಭೆ ಸದಸ್ಯ ಮಂಜುನಾಥ್‌, ಮಾಜಿ ಸದಸ್ಯ ಕಾಶೀವಿಶ್ವನಾಥ್‌, ಜಿಪಂ ಮಾಜಿ ಅಧ್ಯಕ್ಷ ಅರುಣ್‌ ಪ್ರಸಾದ್‌, ಮುಖಂಡರಾದ ಸಿ.ಡಿ.ರಾಮಚಂದ್ರ, ಸರಸ್ವತಿ, ಬಂಕ್‌ ಮಂಜು ಇದ್ದರು.

ಕುರುಬ ಸಮಾಜ ಬೆಂಬಲ:

ಕುರುಬ ಸಮಾಜದಲ್ಲಿ ಒಡಕಿಲ್ಲ. ಎಲ್ಲ ಸಮುದಾಯಗಳಂತೆ ಆ ಸಮುದಾಯವೂ ನನ್ನ ಬೆಂಬಲಕ್ಕಿದೆ. ಕೋಲಾರದಲ್ಲಿ ಶಾಸಕ ಶ್ರೀನಿವಾಸಗೌಡ ಬೆಂಬಲಿಗರಾದ ಗಿರಿಜಮ್ಮ ರಾಮಸ್ವಾಮಿ, ಕಠಾರಿಪಾಳ್ಯದ ಕೈಲಾಸ್‌ ನಾಥ್‌, ಶಿವಕುಮಾರ್‌, ಗೌರಿಪೇಟೆ ಚಿನ್ನಿ ಅನಂತ್‌ ಮೊದಲಿನಿಂದಲೂ ನನ್ನ ವಿರುದ್ಧವಿದ್ದಾರೆ. 100 ಓಟು ತೆಗೆಯುವ ಸಾಮರ್ಥ್ಯವೂ ಅವರಿಗಿಲ್ಲ. ಕಾಂಗ್ರೆಸ್‌ ನಾಯಕರಿಗೆ ಅಂತಹ ಶಕ್ತಿ ಇದ್ದಿದ್ದರೆ ಸಿದ್ದರಾಮಯ್ಯ ಬಂದಾಗ ಪ್ರಮುಖ ಸಮಾಜಗಳಿಂದ ತಲಾ 2ಸಾವಿರ ಮಂದಿ ಬಂದಿದ್ದರೂ 20 ಸಾವಿರ ಜನ ಸೇರಬೇಕಿತ್ತು. ಆದರೆ 5 ಸಾವಿರ ಜನರನ್ನೂ ಸೇರಿಸಲಾಗದೆ ನನ್ನ ಸವಾಲ್‌ ಸ್ವೀಕರಿಸದೆ ಹೋದರು. ಕ್ಷೇತ್ರದಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ನಡುವೆ ಸ್ಪರ್ಧೆಯಿದ್ದು, ಇತ್ತೀಚೆಗೆ ಜೆಡಿಎಸ್‌ ಕಾರ್ಯಕರ್ತರು ಪ್ರಧಾನಿ ಮೋದಿಯವರು ಮತ್ತು ನನ್ನ ಅಭಿವೃದ್ಧಿ ಕಾರ್ಯ ಮೆಚ್ಚಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಸಿದ್ದರಾಮಯ್ಯ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ ಎಂದು ವರ್ತೂರು ಆರ್‌. ಪ್ರಕಾಶ್‌ ಭವಿಷ್ಯ ನುಡಿದರು. 

Latest Videos
Follow Us:
Download App:
  • android
  • ios