Asianet Suvarna News Asianet Suvarna News

'ಭಾರತೀಯ ಮುಸ್ಲಿಮರಿಗೆ ರಾಮ, ಕೃಷ್ಣ ‘ರಾಷ್ಟ್ರೀಯ ಹೀರೊ’ ಆಗಲಿ'..!

ಭಾರತೀಯ ಮುಸ್ಲಿಮರು ರಾಮ ಮತ್ತು ಕೃಷ್ಣರನ್ನು ‘ರಾಷ್ಟ್ರೀಯ ಹೀರೊ’ಗಳೆಂದು ಸ್ವೀಕರಿಸಬೇಕು ಎಂದು ಭಾರತೀಯ ಪುರಾತತ್ವ ಇಲಾಖೆಯ ಮಾಜಿ ನಿರ್ದೇಶಕ ಕೆ. ಕೆ. ಮಹಮ್ಮದ್‌ ಸಲಹೆ ನೀಡಿದ್ದಾರೆ.

let ram krishna be national hero for indian muslims says KK Muhammed
Author
Bangalore, First Published Nov 30, 2019, 2:25 PM IST
  • Facebook
  • Twitter
  • Whatsapp

ಮಂಗಳೂರು(ನ.30): ಭಾರತೀಯ ಮುಸ್ಲಿಮರು ರಾಮ ಮತ್ತು ಕೃಷ್ಣರನ್ನು ‘ರಾಷ್ಟ್ರೀಯ ಹೀರೊ’ಗಳೆಂದು ಸ್ವೀಕರಿಸಬೇಕು ಎಂದು ಭಾರತೀಯ ಪುರಾತತ್ವ ಇಲಾಖೆಯ ಮಾಜಿ ನಿರ್ದೇಶಕ ಕೆ. ಕೆ. ಮಹಮ್ಮದ್‌ ಸಲಹೆ ನೀಡಿದ್ದಾರೆ.

ಮಂಗಳೂರು ಲಿಟರರಿ ಫೌಂಡೇಶನ್‌ ವತಿಯಿಂದ ನಗರದಲ್ಲಿ ನಡೆಯುತ್ತಿರುವ ಮಂಗಳೂರು ಲಿಟ್‌ ಫೆಸ್ಟ್‌ನ ಮೊದಲ ದಿನವಾದ ಶುಕ್ರವಾರ ‘ಸತ್ಯದ ಉತ್ಖನನ’ ವಿಚಾರದ ಕುರಿತು ಅವರು ಮಾತನಾಡಿದರು. ಪ್ರಪಂಚದ ಇತರ ದೇಶಗಳಾದ ಮಲೇಶ್ಯಾ, ಇಂಡೋನೇಷ್ಯಾ, ಥಾಯ್ಲ್ಯಾಂಡ್‌ಗಳಲ್ಲೂ ರಾಮ ಮತ್ತು ಕೃಷ್ಣರನ್ನು ಹೀರೋಗಳಾಗಿಯೇ ಬಿಂಬಿಸಲಾಗಿದೆ. ಭಾರತದಲ್ಲೂ ಎಲ್ಲರೂ ಇವರನ್ನು ರಾಷ್ಟ್ರೀಯ ಹೀರೋಗಳೆಂದು ಸ್ವೀಕರಿಸಬೇಕಾಗಿದೆ ಎಂದಿದ್ದಾರೆ.

ಪ್ರಿಯತಮೆಗೆ ಕಾಟ: ಕೊಲೆ ಮಾಡಿ ಮೃತದೇಹ ಎಸೆದು ಪೊಲೀಸ್‌ಗೆ ಫೋನ್ ಮಾಡಿದ..!

ಹಿಂದೂಗಳು ಬಹುಸಂಖ್ಯಾತರಾಗಿದ್ದರಿಂದಲೇ ದೇಶ ಇಬ್ಭಾಗವಾದರೂ ಇನ್ನೂ ಭಾರತ ಜಾತ್ಯತೀತವಾಗಿಯೇ ಉಳಿದಿದೆ ಎಂದು ವ್ಯಾಖ್ಯಾನಿಸಿದ ಕೆ.ಕೆ. ಮಹಮ್ಮದ್‌, ನನ್ನ ಚಿಕ್ಕಂದಿನಲ್ಲಿ ರಾಮಾಯಣ, ಮಹಾಭಾರತ ಕಲಿಸಿಕೊಟ್ಟದ್ದು ಅಬೂಬಕ್ಕರ್‌ ಎನ್ನುವ ಮುಲ್ಲಾ. ಅವರು ಇಸ್ಲಾಂನ ಕಟ್ಟಾಅನುಯಾಯಿಯಾಗಿದ್ದರೂ ಈ ಬೃಹತ್‌ ಗ್ರಂಥಗಳ ಪಾಠ ಮಾಡುತ್ತಿದ್ದರು. ಈಗ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲೇ ಸಮಸ್ಯೆಯಿದೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.

ಪಾರಂಪರಿಕ ತಾಣಗಳ ಮಾರುಕಟ್ಟೆಬೇಕು:

ವಿದೇಶಗಳಲ್ಲಿ ಅವರ ಪಾರಂಪರಿಕ ತಾಣಗಳನ್ನು ಮಾರುಕಟ್ಟೆಮಾಡುವಲ್ಲಿ ಬಹಳ ಕೆಲಸ ಮಾಡಿದ್ದರೂ ಭಾರತದಲ್ಲಿ ಇನ್ನೂ ಆ ನಿಟ್ಟಿನಲ್ಲಿ ಹಿಂದುಳಿದಿದ್ದೇವೆ. ರಾಮಾಯಣ ಹಾಗೂ ಮಹಾಭಾರತದಲ್ಲಿರುವ ಕೆಲವು ತಾಣಗಳನ್ನು ಇನ್ನೂ ಪಾರಂಪರಿಕವಾಗಿ ಬಿಂಬಿಸಿ ಮಾರುಕಟ್ಟೆಗೆ ತೆರೆದುಕೊಂಡಿಲ್ಲ. ಭಾರತೀಯ ಕಲೆ ಮತ್ತು ಸಂಸ್ಕೃತಿ ನಶಿಸುವ ಮೊದಲು ನಮ್ಮ ದೇಶದ ಸಾಂಸ್ಕೃತಿಕ ನೀತಿಯನ್ನು ಬದಲಾವಣೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.

ಸ್ಥಳದಲ್ಲೇ ನಿವೇಶನ ಮಂಜೂರು ಮಾಡಿದ ತಹಸೀಲ್ದಾರ್..!

ಅಯೋಧ್ಯೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿಗೆ ಆಧಾರವಾಗಿದ್ದ ಪುರಾತತ್ವ ಇಲಾಖೆಯ ಮೊದಲ ಹಂತದ ಉತ್ಖನನದಲ್ಲಿ ಪಾಲ್ಗೊಂಡಿದ್ದ ಕೆ.ಕೆ. ಮಹಮ್ಮದ್‌ ಅಂದಿನ ನೆನಪುಗಳನ್ನು ಸ್ಮರಿಸಿದರು. ಅಯೋಧ್ಯೆಯಲ್ಲಿದ್ದ ಮಸೀದಿಯ ಹಿಂದೆ 1976-77ರಲ್ಲಿ ಮೊದಲ ಹಂತದ ಉತ್ಖನನದ ತಂಡದಲ್ಲಿ ನಾನೊಬ್ಬನೇ ಮುಸ್ಲಿಮನಾಗಿದ್ದೆ. ಮಸೀದಿಯ ಒಳಗಡೆ 12 ಪಿಲ್ಲರ್‌ಗಳು ಸಿಕ್ಕಿದ್ದವು. ಕೆಲವು ಕಂಬಗಳಲ್ಲಿ ಪೂರ್ಣ ಕಲಶದ ಕೆತ್ತನೆಗಳಿದ್ದರೆ ಇನ್ನೂ ಕೆಲವದರಲ್ಲಿ ಅಷ್ಟಮಂಗಳ ಚಿಹ್ನೆಗಳಿದ್ದವು. 50ಕ್ಕೂ ಅಧಿಕ ವಿಗ್ರಹಗಳು ದೊರೆತಿದ್ದವು. ಅಲ್ಲಿ ಮಂದಿರವಿದ್ದ ಕುರುಹು ಅದಾಗಿತ್ತು. 2003ರಲ್ಲಿ 2ನೇ ಹಂತದ ಉತ್ಖನನದ ತಂಡದಲ್ಲಿ ನಾನಿರಲಿಲ್ಲ. ಆಗ 50ಕ್ಕೂ ಅಧಿಕ ಪಿಲ್ಲರ್‌ಗಳು ದೊರೆತಿದ್ದು, 263 ವಿಗ್ರಹಗಳೂ ಸಿಕ್ಕಿದ್ದವು. ದೇವರ ವಿಗ್ರಹಕ್ಕೆ ಅಭಿಷೇಕ ಮಾಡಿದ ನೀರು ಹರಿದುಹೋಗಲು ಮಾಡಿದ ಕುರುಹುಗಳಿದ್ದವು. ಮಸೀದಿಯ ಅಡಿಭಾಗದಲ್ಲಿ ಬಹುದೊಡ್ಡ ದೇವಾಲಯವಿತ್ತು ಎನ್ನುವುದಕ್ಕೆ ಇದು ಸಾಕ್ಷ್ಯವಾಗಿತ್ತು. ಇದರ ಆಧಾರದಲ್ಲೇ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ ಎಂದಿದ್ದಾರೆ.

'ಬೈ ಎಲೆಕ್ಷನ್ ರಿಸಲ್ಟ್‌ ದಿನ ಕುಕ್ಕರ್‌ ಶಬ್ದ ರಾಜ್ಯಕ್ಕೆ ಕೇಳಿಸಲಿದೆ'..!

ಈಗಿನ ಮುಸ್ಲಿಮರ ಮೇಲೆ ಹೇರಿಕೆ ಬೇಡ: ಅಯೋಧ್ಯೆ ವಿಚಾರದಲ್ಲಿ ಇತಿಹಾಸದಲ್ಲಿ ಏನೇ ನಡೆದಿದ್ದರೂ ಅದಕ್ಕೆ ವರ್ತಮಾನದ ಮುಸ್ಲಿಮರು ಜವಾಬ್ದಾರರಲ್ಲ ಎಂದು ಒತ್ತಿ ಹೇಳಿದ ಕೆ.ಕೆ. ಮಹಮ್ಮದ್‌, ಇತಿಹಾಸದಲ್ಲಿ ಏನೇ ನಡೆದಿದ್ದರೂ ಅದನ್ನು ಸ್ವೀಕರಿಸುವ ಮನೋಭಾವ ಬೇಕು. ಪ್ರಸ್ತುತ ಕಾಲಘಟ್ಟದಲ್ಲಿ ನೆಲೆಸಿರುವವರ ಮೇಲೆ ಅದರ ಹೇರಿಕೆ ಮಾಡಬಾರದು ಎಂದು ಹೇಳಿದರು. ಅಯೋಧ್ಯೆಯು ಮೆಕ್ಕಾ ಮತ್ತು ಮದೀನದಷ್ಟೇ ಹಿಂದೂಗಳಿಗೆ ಪವಿತ್ರವಾದುದು. ಆದರೆ ಅಯೋಧ್ಯೆಯ ಮಸೀದಿ ಮುಸ್ಲಿಮರಿಗೆ ತುಂಬ ಮುಖ್ಯವಲ್ಲ. ಮುಸ್ಲಿಮರು ಮಸೀದಿಯ ಜಾಗವನ್ನು ಬದಲಾಯಿಸಲು ಸಾಧ್ಯವಿದೆ ಎಂದೂ ಅವರು ತಿಳಿಸಿದ್ದಾರೆ.

'ಮುಂದೆ ಕಾಂಗ್ರೆಸ್ ಪಕ್ಷದಲ್ಲಿ ದೀಪ ಹಚ್ಚಲು ಯಾವ ನಾಯಕರು ಇರೋದಿಲ್ಲ'

ತಾನು ತೀವ್ರಗಾಮಿ ಹಿಂದೂಗಳು ಹಾಗೂ ಮುಸ್ಲಿಮರ ಪರವಾಗಿಲ್ಲ ಎಂದು ಹೇಳಿದ ಅವರು, ಈ ಕಾರಣದಿಂದಲೇ ಹಲವರ ವಿರೋಧ ವ್ಯಕ್ತವಾಗಿದೆ. ಬೆದರಿಕೆಗಳನ್ನೂ ಎದುರಿಸಿದ್ದೇನೆ ಎಂದಿದ್ದಾರೆ.

ಉತ್ಖನನಕ್ಕೆ ಅವಕಾಶ ಬೇಕು: ಪ್ರಸ್ತುತ ದೇಶದಲ್ಲಿ ಉತ್ಖನನ ನಡೆಸಲು ಸರ್ಕಾರ ಅವಕಾಶ ನೀಡುತ್ತಿಲ್ಲ. ಬೇರೆ ಬೇರೆ ಸಂಗತಿಗಳ ಅಧ್ಯಯನಕ್ಕೆ ಉತ್ಖನನ ಅತ್ಯಂತ ಅವಶ್ಯಕ. ಆದರೆ, ಕೇಂದ್ರ ಸರ್ಕಾರ ಉತ್ಖನನಕ್ಕೆ ಅವಕಾಶ ನೀಡದಿರುವುದು ಬೇಸರ ತರಿಸಿದೆ. ಇದಕ್ಕಿಂತ ಕೇಂದ್ರದಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಉತ್ಖನನಕ್ಕೆ ಹೆಚ್ಚು ಅವಕಾಶ ನೀಡಿದ್ದರು. ಕೆಲವೊಮ್ಮೆ ಕಾಂಗ್ರೆಸ್‌ ಸರ್ಕಾರ ಇರಬೇಕಿತ್ತು ಎಂದೂ ಅನಿಸಿದ್ದಿದೆ ಎಂದು ಮಹಮ್ಮದ್‌ ಹೇಳಿದ್ದಾರೆ.

ಪತ್ರಕರ್ತೆ ಹರ್ಷ ಭಟ್‌ ಸಂವಾದ ನಡೆಸಿಕೊಟ್ಟರು. ಇದೇ ಸಂದರ್ಭ ಕೆ.ಕೆ. ಮಹಮ್ಮದ್‌ ಅವರ ಆತ್ಮಕಥನದ ಕನ್ನಡ ಅವತರಣಿಕೆಯ 2ನೇ ಆವೃತ್ತಿಯನ್ನು ಬಿಡುಗಡೆಗೊಳಿಸಲಾಯಿತು.

ತಾಜ್‌ಮಹಲ್‌ ಅಡಿ ಶಿವ ದೇವಾಲಯವಿರಲಿಲ್ಲ

ತಾಜ್‌ಮಹಲ್‌ ಇದ್ದ ಜಾಗದಲ್ಲಿ ಮೊದಲು ಶಿವ ದೇವಾಲಯವಿದ್ದ ಕುರಿತು ಕೆಲವು ತೀವ್ರಗಾಮಿ ಹಿಂದೂಗಳು ಮಾತನಾಡುತ್ತಾರೆ. ಆದರೆ, ನಾನು ಅಲ್ಲಿ ಇಲಾಖೆಯ ಜವಾಬ್ದಾರಿ ವಹಿಸಿದ ಸಂದರ್ಭ ಅಧ್ಯಯನ ನಡೆಸಿದಾಗ ಈ ಸಂಬಂಧ ಯಾವುದೇ ಸಾಕ್ಷಾ ್ಯಧಾರಗಳು ದೊರೆತಿಲ್ಲ. ಶಿವ ದೇವಾಲಯವಿದ್ದ ಕುರಿತು ಯಾವುದೇ ಕುರುಹೂ ಅಲ್ಲಿಲ್ಲ. ಸತ್ಯವಲ್ಲದ ಇಂಥ ತೀವ್ರಗಾಮಿ ಚಿಂತನೆಗಳನ್ನು ಹರಡಿಸುವ ಹಿಂದೂ ಗುಂಪುಗಳೂ ಕೂಡ ದೇಶಕ್ಕೆ ಮಾರಕ ಎಂದು ಕೆ.ಕೆ. ಮಹಮ್ಮದ್‌ ಹೇಳಿದರು.

ಭಾರತಕ್ಕೆ ಡಬಲ್‌ ಡೋಮ್‌ ಪರಿಚಯವಾದದ್ದೇ 15 ನೇ ಶತಮಾನದ ಬಳಿಕ. ಅದಕ್ಕಿಂತಲೂ ಮುಖ್ಯವಾಗಿ ಇಡೀ ಭಾರತದಲ್ಲಿ ದೇವಸ್ಥಾನವನ್ನು ಮಾರ್ಬಲ್‌ನಿಂದ ಕಟ್ಟಿದ್ದು ನೋಡಿದ್ದೀರಾ? ಇಂಥ ಸಾಮಾನ್ಯ ಪ್ರಶ್ನೆಯಲ್ಲಿಯೇ ಉತ್ತರವಿದೆ ಎಂದರು.

Follow Us:
Download App:
  • android
  • ios