ಸಿಂಧನೂರು: ಸಿಎಸ್ಎಫ್ ಬಳಿ ಚಿರತೆ ಪತ್ತೆ, ಭಯಭೀತಗೊಂಡ ಗ್ರಾಮಸ್ಥರು
ಸಿಎಸ್ಎಫ್ ಬಳಿ ಕಳೆದ 4 ದಿನಗಳಿಂದೆ ಚಿರತೆ ಕಾಣಿಸಿಕೊಂಡಿದ್ದ ಹಿನ್ನೆಲೆ ಎಸ್‌ಎಫ್ ಕ್ಯಾಂಪ್-1, ಸಿಎಸ್‌ಎಫ್ ಕ್ಯಾಂಪ್-2, ಬಂಗಾಲಿ ಕ್ಯಾಂಪ್, ರಾಗಲಪರ್ವಿ, ಧುಮತಿ, ಪುಲದಿನ್ನಿ, ಹೆಡಗಿನಾಳ, ಆಯನೂರು ಗ್ರಾಮದ ರೈತರು ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ರಾತ್ರಿ ವೇಳೆ ಗ್ರಾಮದ ಹೊರಭಾಗದಲ್ಲಿ ಬೆಂಕಿ ಹಚ್ಚಿ ಚಿರತೆ ಸುಳಿವು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.
ಸಿಂಧನೂರು(ಡಿ.12): ತಾಲೂಕಿನ ಸಿಎಸ್ಎಫ್ (ಸೆಂಟ್ರಲ್ ಸ್ಟೇಟ್ ಫಾರ್ಮ್) ಬಳಿ ಕಳೆದ ನಾಲ್ಕು ದಿನಗಳ ಹಿಂದೆ ಬಸವರಾಜ ಎಂಬ ವ್ಯಕ್ತಿಗೆ ಚಿರತೆ ಕಾಣಿಸಿಕೊಂಡಿತ್ತು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸುತ್ತಮುತ್ತಲಿನ ಜನತೆ ತೀವ್ರ ಭಯಭೀತರಾಗಿದ್ದಾರೆ.
ಸಿಎಸ್ಎಫ್ ಬಳಿ ಕಳೆದ 4 ದಿನಗಳಿಂದೆ ಚಿರತೆ ಕಾಣಿಸಿಕೊಂಡಿದ್ದ ಹಿನ್ನೆಲೆ ಎಸ್‌ಎಫ್ ಕ್ಯಾಂಪ್-1, ಸಿಎಸ್‌ಎಫ್ ಕ್ಯಾಂಪ್-2, ಬಂಗಾಲಿ ಕ್ಯಾಂಪ್, ರಾಗಲಪರ್ವಿ, ಧುಮತಿ, ಪುಲದಿನ್ನಿ, ಹೆಡಗಿನಾಳ, ಆಯನೂರು ಗ್ರಾಮದ ರೈತರು ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ರಾತ್ರಿ ವೇಳೆ ಗ್ರಾಮದ ಹೊರಭಾಗದಲ್ಲಿ ಬೆಂಕಿ ಹಚ್ಚಿ ಚಿರತೆ ಸುಳಿವು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.
ಮನೆ ಬಾಗಿಲಿಗೇ ಬಂದು ಸಾಕು ನಾಯಿ ಹೊತ್ತೊಯ್ದ ಚಿರತೆ
ಸಿಎಸ್ಎಫ್ ಕ್ಯಾಂಪ್ ಹತ್ತಿರದ 54ನೇ ವಿತರಣಾ ಕಾಲುವೆಯ ಸೇತುವೆಯೊಂದರ ಮೇಲೆ ಚಿರತೆ ಅಡ್ಡಾಡಿದ್ದನ್ನು ಚಿತ್ರ ಸಹಿತ ಸೆರೆಹಿಡಿಯಲಾಗಿದ್ದು, ಚಿರತೆಯ ವೀಡಿಯೋ ವೈರಲ್ ಆಗಿದೆ. ಈ ಮಾಹಿತಿಯನ್ನು ಅರಣ್ಯಾಧಿಕಾ ರಿಗಳಿಗೆ ಗ್ರಾಮಸ್ಥರು ತಿಳಿಸಿದ್ದು, ಅವರು ಸ್ಥಳಕ್ಕೆ ಭೇಟಿ ನೀಡಿ ಚಿರತೆಯ ಹೆಜ್ಜೆಗುರುತು ಪತ್ತೆ ಹಚ್ಚಿ ಚಿರತೆ ಇರುವುದನ್ನು ಖಚಿತ ಪಡಿಸಿದ್ದಾರೆ.
ಈ ಕುರಿತು ಅರಣ್ಯ ಇಲಾಖೆಯ ವಲಯಾಧಿಕಾರಿ ಸುರೇಶ ಅಲಮೇಲ ಅವರನ್ನು ಸಂಪರ್ಕಿಸಿದಾಗ, ಚಿರತೆ ಬಂದಿರುವುದು ನಿಜವಿದೆ. ಪ್ರತ್ಯಕ್ಷದರ್ಶಿಯನ್ನು ಕರೆದುಕೊಂಡು ಹೋಗಿ ಸ್ಥಳ ವೀಕ್ಷಿಸಿದ್ದು, ಹೆಜ್ಜೆಯನ್ನು ಗಮನಿಸಿದಾಗ ಚಿರತೆ ಮರಿ ಇರಬೇಕೆನಿಸುತ್ತದೆ. ಅದು ಪ್ರತಿನಿತ್ಯ ರಾತ್ರಿ 15 ರಿಂದ 20 ಕಿ.ಮೀ. ಆಹಾರಕ್ಕಾಗಿ ಅಲೆದಾಡುತ್ತದೆ. ಒಂದೇ ಕಡೆ ನೆಲೆಸುವುದನ್ನು ಗಮನಿಸಿ ಬಲೆ ಹಾಕಿ ಹಿಡಿಯಲು ಪ್ರಯತ್ನಿಸಬೇಕಾಗುತ್ತದೆ. ಆದ್ದರಿಂದ ಸಿಂಧನೂರು, ಮಾನ್ವಿ, ಮಸ್ಕಿ, ಮುದಗಲ್ ಭಾಗದ ಹಳ್ಳಿಗಳಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಕಣ್ಗಾವಲು ಇಟ್ಟಿದ್ದು, ಪ್ರತಿನಿತ್ಯ ಹುಡುಕಾಟದ ಕಾರ್ಯಾಚರಣೆ ಮುಂದುವರಿದಿದೆ ಎಂದರು.
ಒಂದು ಬಾರಿ ಮಾತ್ರ ಚಿರತೆ ಕಾಣಿಸಿಕೊಂಡಿದ್ದು, ಬೇರೆ ಎಲ್ಲಿಯೂ ಕಾಣಿಸಿಕೊಂಡಿರುವ ವರದಿಗಳು ಬಂದಿಲ್ಲ. ಚಿರತೆ ಹೆಜ್ಜೆ ಗುರುತು ಪತ್ತೆಯಾದರೆ ಮಾಹಿತಿ ತಿಳಿಸುವಂತೆ ಹಾಗೂ ಸದಾ ಜಾಗೃತಿಯಲ್ಲಿರುವಂತೆ ಸಿಎಸ್‌ಎಫ್ ಕ್ಯಾಂಪ್‌ನ ಸುತ್ತಮುತ್ತ ಹಳ್ಳಿಗಳ ಜನರಿಗೂ ತಿಳಿಸಲಾಗಿದೆ ಎಂದು ಹೇಳಿದರು.