ಗಂಗಾವತಿ(ಫೆ.01): ತಾಲೂಕಿನ ವಿರೂಪಾಪುರಗಡ್ಡೆಯಲ್ಲಿ ಅರಣ್ಯ ಇಲಾಖೆಯವರು ವಿರೂಪಾಪುರಗಡ್ಡೆಯಲ್ಲಿ ಅಳವಡಿಸಲಾಗಿದ್ದ ಬೋನಿಗೆ ಭಾನು​ವಾರ ಮೂರು ವರ್ಷದ ಚಿರತೆ ಬೋನಿಗೆ ಬಿದ್ದಿದೆ. ಇದ​ರಿಂದ ಸುತ್ತ​ಮು​ತ್ತಲ ಗ್ರಾಮಸ್ಥರು ಕೊಂಚ ನಿಟ್ಟು​ಸಿ​ರು ಬಿ​ಟ್ಟಿ​ದ್ದಾರೆ.

ಈ ಭಾಗ​ದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಚಿರತೆಗಳು ಇಬ್ಬರನ್ನು ಬಲಿ ತೆಗೆದುಕೊಂಡಿದ್ದವು. ಅಲ್ಲದೇ ಮೂವರ ಮೇಲೆ ಹಲ್ಲೆ ನಡೆಸಿದ್ದು ನಿತ್ಯ ಗ್ರಾಮಸ್ಥರ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದವು. ಇದರಿಂದ ಭಯಭೀತರಾಗಿದ್ದ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದರು. ಅರಣ್ಯ ಸಚಿವರು ಸಹ ಚಿರತೆ ದಾಳಿ ನಡೆಸಿದ್ದ ಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಬೇಕೆಂದು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ 20 ದಿನಗಳ ಹಿಂದೆ ಗಜಪಡೆ ಮತ್ತು ಲೈನಿಂಗ್‌ ಸರ್ವೆ ಕಾರ್ಯ ನಡೆಸಿದ್ದರೂ ಚಿರತೆ ಯಾರ ಕಣ್ಣಿಗೂ ಕಾಣಿಸಿಕೊಳ್ಳದೆ ಅರಣ್ಯ ಇಲಾಖೆಯ ಸಿಬ್ಬಂದಿಗೆ ಚಳ್ಳೆ ಹಣ್ಣು ತಿನಿಸಿದ್ದವು.

ಚಿರತೆ ಮರಿಗಳ ಹಳೆಯ ಚಿತ್ರ ವೈರಲ್‌: ಜನ​ರಲ್ಲಿ ಹೆಚ್ಚಿದ ಆತಂಕ

ಅದರ ಬಳಿಕ ಈ ಭಾಗ​ದಲ್ಲಿ ಒಟ್ಟು 3 ಚಿರ​ತೆ​ಗ​ಳನ್ನು ಸೆರೆ ಹಿಡಿ​ಯ​ಲಾ​ಗಿದೆ. 2 ತಿಂಗಳ ಹಿಂದೆ ಒಂದು ಮತ್ತು 15 ದಿನ​ಗಳ ಹಿಂದೆ ಒಂದು ಚಿರತೆ ಅರಣ್ಯ ಇಲಾ​ಖೆಯ ಬೋನಿಗೆ ಬಿದ್ದಿದ್ದವು. ಈಗ ಮತ್ತೊಂದು ಚಿರತೆ ಬೋನಿಗೆ ಬಿದ್ದಿ​ರು​ವುದು ಜನರಲ್ಲಿನ ಆತಂಕ​ವನ್ನು ಮತ್ತಷ್ಟು ಕಡಿಮೆ ಮಾಡಿದೆ. ಆದರೆ, ಈ ಪ್ರದೇ​ಶ​ದಲ್ಲಿ ಚಿರ​ತೆ​ಗಳ ಸಂಖ್ಯೆ ಹೆಚ್ಚಾ​ಗಿ​ರುವ ಹಿನ್ನೆ​ಲೆ​ಯಲ್ಲಿ ಅರಣ್ಯ ಇಲಾ​ಖೆಯ ಕಾರ್ಯಾ​ಚ​ರಣೆ ಮುಂದು​ವ​ರಿ​ದಿದ್ದು, ಇನ್ನಷ್ಟು ಚಿರ​ತೆ​ಗಳು ಬೋನಿಗೆ ಬೀಳುವ ಸಾಧ್ಯ​ತೆ​ಗ​ಳಿ​ವೆ. ವಿರೂಪಾಪುರಗಡ್ಡೆಯಲ್ಲಿ ಸೆರೆಸಿಕ್ಕ ಚಿರತೆಯನ್ನು ಕಮಾಲಾಪುರ ಪ್ರಾಣಿ ಸಂಗ್ರಹಾಲಯಕ್ಕೆ ಬಿಡಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.