ಚಿರತೆ ಮರಿಗಳ ಹಳೆಯ ಚಿತ್ರ ವೈರಲ್: ಜನರಲ್ಲಿ ಹೆಚ್ಚಿದ ಆತಂಕ
ಚಿರತೆಗಳ ಹಾವಳಿಗೆ ಜನ ತತ್ತರಿಸಿದ ಜನತೆ| ಸುಳ್ಳು ಸುದ್ದಿಗೆ ಜನ ಕಿವಿಗೊಡಬಾರದು| ಚಿರತೆ ಹಾಗೂ ಕರಡಿ ಸೇರಿ ವನ್ಯಜೀವಿಗಳು ಕಾಣಿಸಿಕೊಂಡರೆ ತಕ್ಷಣವೇ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ| ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರು|
ಕನಕಗಿರಿ(ಜ.25): ಕುರಿಗಾಯಿಗಳ ಕೈಗೆ ಎರಡು ಚಿರತೆ ಮರಿಗಳು ದೊರಕಿವೆ ಎನ್ನುವ ಹಳೇ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರ ಆತಂಕಕ್ಕೀಡಾಗಿದ್ದಾರೆ.
ತಾಲೂಕಿನ ಗುಡ್ಡಗಾಡು ಪ್ರದೇಶಗಳಾದ ಕರಡಿಗುಡ್ಡ, ಅಡವಿಬಾವಿ, ದೇವಲಾಪುರ, ರಾಮದುರ್ಗಾ ಹಾಗೂ ಬಸರಿಹಾಳ ಸುತ್ತ-ಮುತ್ತ ಕರಡಿ ಹಾಗೂ ಚಿರತೆಗಳ ಹಾವಳಿಗೆ ಜನ ತತ್ತರಿಸಿರುವಾಗ ಇದೀಗ ಮತ್ತೇರೆಡು ಚಿರತೆ ಮರಿಗಳು ಕುರಿಗಾಯಿಗಳ ಕೈಗೆ ದೊರೆತಿರುವ ಹಳೇ ವಿಡಿಯೋ ಒಂದು ಫೇಸ್ಬುಕ್ ಹಾಗೂ ವಾಟ್ಸಾಪ್‌ಗಳಲ್ಲಿ ಹರಿದಾಡುತ್ತಿದ್ದು, ಜನರು ಮತ್ತಷ್ಟು ಭೀತಿಗೆ ಒಳಗಾಗಿದ್ದಾರೆ.
ಕಬ್ಬಿನ ಗದ್ದೆಯಲ್ಲಿ ಸಿಕ್ಕಿತು ಮುದ್ದು ಮರಿ..!
ಕೆಲ ಪ್ರಜ್ಞಾವಂತರು ನೇರವಾಗಿ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ಕೇಳಿದಾಗ ಹಳೇ ವಿಡಿಯೋ ವೈರಲ್ ಆಗಿದೆ. ಸುಳ್ಳು ಸುದ್ದಿಗೆ ಜನ ಕಿವಿಗೊಡಬಾರದು. ಚಿರತೆ ಹಾಗೂ ಕರಡಿ ಸೇರಿ ವನ್ಯಜೀವಿಗಳು ಕಾಣಿಸಿಕೊಂಡರೆ ತಕ್ಷಣವೇ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸುತ್ತೇನೆ ಎಂದು ಕನ್ನಡಪ್ರಭಕ್ಕೆ ಆರ್‌ಎಫ್‌ಒ ಶಿವರಾಜ್ ಮೇಟಿ ತಿಳಿಸಿದ್ದಾರೆ.