ದಾಬಸ್‌ಪೇಟೆ(ಜು.06): ತ್ಯಾಮಗೊಂಡ್ಲು ಹೋಬಳಿಯ ಅರೆಬೊಮ್ಮನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕೊಡಗಿಬೊಮ್ಮನಹಳ್ಳಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಜನತೆಯ ನೆಮ್ಮದಿ ಕೆಡಿಸಿದ್ದ ಚಿರತೆ ಬೋನಿಗೆ ಬಿದ್ದಿದ್ದು, ಜನರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಕೊಡಗಿಬೊಮ್ಮನಹಳ್ಳಿ ಗ್ರಾಮದ ಸಮೀಪದಲ್ಲಿ ಅವಿತುಕೊಂಡಿದ್ದ ಸುಮಾರು 5 ವರ್ಷದ ಗಂಡು ಚಿರತೆ ಭಾನುವಾರ ಬೆಳಗ್ಗೆ ಬೋನಿಗೆ ಬಿದ್ದಿದೆ.

ಕೆಲ ದಿನಗಳಿಂದ ಹೇಮಾಪುರ, ಅರೆಬೊಮ್ಮನಹಳ್ಳಿ, ಮಹಿಮರಂಗನ ಬೆಟ್ಟ, ಶಿವಗಂಗೆ ಸೇರಿದಂತೆ ಗ್ರಾಮಗಳ ಸುತ್ತ ಮುತ್ತಲಿನ ಪ್ರದೇಶದ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಅವಿತುಕೊಂಡಿದ್ದ ಚಿರತೆ ಯಾರೂ ಇಲ್ಲದ ಸಮಯ ಸಾದಿಸಿ ಕುರಿ, ಮೇಕೆ, ನಾಯಿಗಳ ಮೇಲೆ ದಾಳಿ ಮಾಡಿತ್ತು. ಇದರಿಂದಾಗಿ ಗ್ರಾಮಸ್ಥರು ಗಾಬರಿಯಾಗಿದ್ದರು. ಯಾವ ಸಮಯದಲ್ಲಿ ಚಿರತೆ ಯಾರ ಮೇಲೆ ದಾಳಿ ಇಡುತ್ತದೆಯೋ ಎಂಬ ಆತಂಕದಲ್ಲಿ ಗ್ರಾಮಸ್ಥರು ಕಾಲ ಕಳೆಯುತ್ತಿದ್ದರು.

ಬನಶಂಕರಿಯಲ್ಲಿ ಚಿರತೆ; ಸುಳ್ಳು ಸುದ್ದಿಯಿಂದ ಬೆಚ್ಚಿ ಬಿದ್ದ ಜನತೆ!

ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಹಿಡಿಯಲು ಹದಿನೈದು ದಿನಗಳ ಹಿಂದೆಯಷ್ಟೇ ಬೆಟ್ಟದ ತಪ್ಪಲಿನ ಅಲ್ಲಲ್ಲಿ ಬೋನು ಇಟ್ಟಿತ್ತು. ಭಾನುವಾರ ಬೆಳಗ್ಗೆ ಕೊಡಗಿಬೊಮ್ಮನಹಳ್ಳಿ ಬಳಿ ಚಿರತೆ ಬೋನಿನಲ್ಲಿ ಸಿಕ್ಕಿ ಬಿದ್ದಿದೆ. ಸೆರೆ ಸಿಕ್ಕ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಅರಣ್ಯ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿರುವ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದ್ದರಿಂದ ಚಿರತೆ ನೋಡಲು ಸಾವಿರಾರು ಜನ ಸಾಗರವೇ ಸೇರಿತು. ಇನ್ನೂ ಮೂರ್ನಾಲ್ಕು ಚಿರತೆ ಈ ಪ್ರದೇಶದಲ್ಲಿ ಇದ್ದು ಅವುಗಳನ್ನು ಸಹ ಅತೀ ಶೀಘ್ರವಾಗಿ ಹಿಡಿದು ಜನರು ನೆಮ್ಮದಿಯಿಂದ ಜೀವನ ನಡೆಸುವಂತೆ ಅವಕಾಶ ಕಲ್ಪಿಸಿಕೊಡಬೇಕೆಂದು ಸ್ಥಳೀಯರು ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.