ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಚಿರತೆ ಪ್ರತ್ಯಕ್ಷ?
ಬೆಂಗಳೂರು ವಿವಿಯ ಹಾಸ್ಟೆಲ್ ವಿದ್ಯಾರ್ಥಿಗಳು ಹೇಳುವ ಪ್ರಕಾರ ಬುಧವಾರ ರಾತ್ರಿ 11.30ರ ಸುಮಾರಿಗೆ ಹಾಸ್ಟೆಲ್ ಬಳಿ ಚಿರತೆ ಪ್ರತ್ಯಕ್ಷವಾಗಿ ಕೆಲ ನಿಮಿಷಗಳ ಬಳಿಕ ಕ್ಯಾಂಪಸ್‌ನ ಕಾಡೊಳಗೆ ಕಣ್ಮರೆಯಾಗಿದೆ ಎಂದು ಹೇಳಿದ್ದಾರೆ. ಮತ್ತೊಂದೆಡೆ ಕ್ಯಾಂಪಸ್‌ನಲ್ಲಿ ವಾಯುವಿಹಾರಕ್ಕೆ ಬರುವ ಸಾರ್ವಜನಿಕರ ಕಣ್ಣಿಗೂ ಚಿರತೆ ಕಂಡುಬಂದಿದೆ.

ಬೆಂಗಳೂರು(ಜ.13): ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್, ನಾಗರಭಾವಿ ಸೇರಿದಂತೆ ಸುತ್ತಮುತ್ತಲ ಕೆಲ ಪ್ರದೇಶದಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿರುವುದಕ್ಕೆ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಚಿರತೆಗಳನ್ನು ಸೆರೆಹಿಡಿಯಲು ಕ್ರಮ ವಹಿಸಬೇಕು ಎಂದು ವಿದ್ಯಾರ್ಥಿಗಳು ಹಾಗೂ ಸುತ್ತಲಿನ ಪ್ರದೇಶಗಳ ಜನರು ಆಗ್ರಹಿಸಿದ್ದಾರೆ.
ಬೆಂಗಳೂರು ವಿವಿಯ ಹಾಸ್ಟೆಲ್ ವಿದ್ಯಾರ್ಥಿಗಳು ಹೇಳುವ ಪ್ರಕಾರ ಬುಧವಾರ ರಾತ್ರಿ 11.30ರ ಸುಮಾರಿಗೆ ಹಾಸ್ಟೆಲ್ ಬಳಿ ಚಿರತೆ ಪ್ರತ್ಯಕ್ಷವಾಗಿ ಕೆಲ ನಿಮಿಷಗಳ ಬಳಿಕ ಕ್ಯಾಂಪಸ್‌ನ ಕಾಡೊಳಗೆ ಕಣ್ಮರೆಯಾಗಿದೆ ಎಂದು ಹೇಳಿದ್ದಾರೆ. ಮತ್ತೊಂದೆಡೆ ಕ್ಯಾಂಪಸ್‌ನಲ್ಲಿ ವಾಯುವಿಹಾರಕ್ಕೆ ಬರುವ ಸಾರ್ವಜನಿಕರ ಕಣ್ಣಿಗೂ ಚಿರತೆ ಕಂಡುಬಂದಿದೆ. ಈ ಬಗ್ಗೆ ಸಾರ್ವಜನಿಕರು ವಿವಿಯ ಅಧಿಕಾರಿಗಳಿಗೆ ದೂರು ನೀಡಿದ್ದು, ಎಚ್ಚರ ವಹಿಸುವಂತೆ ಮನವಿ ಮಾಡಿದ್ದಾರೆ.
Shivamogga News: ವಾರದಿಂದ ಚಿರತೆ ಸಂಚಾರ: ಆತಂಕದಲ್ಲಿ ಗ್ರಾಮಸ್ಥರು
ದಟ್ಟ ಕಾಡಿನಲ್ಲಿ ಚಿರತೆ ವಾಸ?
ಕೆಲ ದಿನಗಳ ಹಿಂದೆ ವಿವಿ ಆವರಣದಲ್ಲಿರುವ ಎನ್‌ಎಸ್‌ಎಸ್ ಭವನದ ಹಿಂಭಾಗದಲ್ಲಿ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ವಾಯು ವಿಹಾರಿಗಳು ವಿವಿ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದರು. ಇದೀಗ ವಿದ್ಯಾರ್ಥಿಗಳ ಕಣ್ಣಿಗೂ ಚಿರತೆ ಕಂಡು ಬಂದಿದೆ. ಎನ್‌ಎಸ್‌ಎಸ್ ಭವನದ ಹಿಂಭಾಗ ನೂರಾರು ಎಕರೆಯಲ್ಲಿ ಸ್ವಲ್ಪ ದಟ್ಟವಾದ ಕಾಡು ಇದೆ. ಹೀಗಾಗಿ ಚಿರತೆ ಅಲ್ಲಿಯೇ ಬೀಡು ಬಿಟ್ಟಿರಬಹುದು ಎಂದು ಶಂಕಿಸಲಾಗುತ್ತಿದೆ.
ಕ್ಯಾಂಪಸ್‌ನಲ್ಲಿ ಚಿರತೆ ಇರುವ ಬಗ್ಗೆ ಇದುವರೆಗೆ ಅರಣ್ಯ ಇಲಾಖೆಯ ಯಾವುದೇ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಚಿರತೆ ಸಂಚಾರದ ಗುರುತಿನ ಬಗ್ಗೆ ಪರಿಶೀಲಿಸಿ ಖಚಿತಪಡಿಸುವ ಕೆಲಸ ಮಾಡಿಲ್ಲ ಎಂದು ವಿದ್ಯಾರ್ಥಿಗಳು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಿಂಗಳ ಹಿಂದಷ್ಟೇ ಬೆಂಗಳೂರಿನ ಹೊರವಲಯದ ಕೆಂಗೇರಿ, ಕುಂಬಳಗೋಡು, ತುರಹಳ್ಳಿ ಭಾಗ ಹಾಗೂ ದೇವನಹಳ್ಳಿ ಸುತ್ತಮುತ್ತಲ ಭಾಗಗಳಲ್ಲಿ ಚಿರತೆಗಳು ಪ್ರತ್ಯಕ್ಷವಾಗಿ ಜನರು ಭಯಭೀತಿಗೊಂಡಿದ್ದರು.
ಚಿತ್ರದುರ್ಗ ನಗರಕ್ಕೆ ಚಿರತೆ ಭೀತಿ: ಚಂದ್ರವಳ್ಳಿ ರಸ್ತೆಯ ಬಂಡೆ ಮೇಲೆ ಮೂರು ಚಿರತೆ ಪ್ರತ್ಯಕ್ಷ
ಅರಣ್ಯ ಇಲಾಖೆಗೆ ವಿವಿ ಪತ್ರ
ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ಬಗ್ಗೆ ವಿದ್ಯಾರ್ಥಿಗಳು ಹಾಗೂ ಜನರು ನೀಡಿರುವ ಮಾಹಿತಿಯ ಹಿನ್ನೆಲೆಯಲ್ಲಿ ವಿವಿಯ ಅಧಿಕಾರಿಗಳು ಅರಣ್ಯ ಇಲಾಖೆಗೆ ಪತ್ರ ಬರೆದು ಚಿರತೆ ಸೆರೆ ಹಿಡಿಯಲು ಕ್ರಮ ವಹಿಸುವಂತೆ ಕೋರಿದ್ದಾರೆ.
ಸಂಜೆ ಹೊರ ಹೋಗಬೇಡಿ:ವಿವಿಯ ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಸಾರ್ವಜನಿಕರು ಎಚ್ಚರದಿಂದ ಇರುವಂತೆ ಸೂಚನೆ ನೀಡಿರುವ ವಿವಿಯ ಕುಲಸಚಿವರು, ವಿಶೇಷವಾಗಿ ಹಾಸ್ಟೆಲ್ ವಿದ್ಯಾರ್ಥಿಗಳು ಸಂಜೆ ನಂತರ ಅಥವಾ ರಾತ್ರಿ ವೇಳೆ ಸಂಚರಿಸುವುದನ್ನು ನಿರ್ಬಂಧಿಸುವಂತೆ ಕುಲಸಚಿವ ಎನ್.ಮಹೇಶ್ ಬಾಬು ಸುತ್ತೋಲೆ ಹೊರಡಿಸಿದ್ದಾರೆ.