ವರದಿ :  ಉಗಮ ಶ್ರೀನಿವಾಸ್‌

ತುಮಕೂರು (ನ.06):  ಕಳೆದ ಒಂದು ವರ್ಷದಲ್ಲಿ ಒಂದಲ್ಲ, ಎರಡಲ್ಲ ಭರ್ತಿ ಐದು ಮಂದಿಯನ್ನು ಬಲಿತೆಗೆದುಕೊಂಡಿರುವ ನರಹಂತಕ ಚಿರತೆ ಅಟ್ಟಹಾಸ ಮೆರೆಯುತ್ತಿದೆ.

ಕಳೆದ ವರ್ಷ ಅಕ್ಟೋಬರ್‌ 15 ರಂದು ಹೆಬ್ಬೂರು ಹೋಬಳಿ ಬಿನ್ನಿಕುಪ್ಪೆಯಲ್ಲಿ ಲಕ್ಷ್ಮಮ್ಮ ಎಂಬ ವೃದ್ಧೆಯನ್ನು ಬಲಿ ತೆಗೆದುಕೊಳ್ಳುವುದರೊಂದಿಗೆ ನರ ಹಂತಕ ತನ್ನ ಜಾಡನ್ನು ಹರಿಸಿತು. ಅಲ್ಲಿಂದ ಇಲ್ಲಿಯವರೆಗೆ ಭರ್ತಿ ಐದು ಮಂದಿಯನ್ನು ಆಪೋಶನ ತೆಗೆದುಕೊಂಡಿದೆ.

18 ಕ್ಕೂ ಹೆಚ್ಚು ಚಿರತೆಗಳಿದ್ದವು:

ಒಂದು ವರ್ಷದ ಹಿಂದೆ ತುಮಕೂರು ತಾಲೂಕು, ಗುಬ್ಬಿ ಹಾಗೂ ಕುಣಿಗಲ್‌ ತಾಲೂಕಿನ ಗ್ರಾಮಗಳಲ್ಲಿ ಚಿರತೆಗಳ ಸಂಚಾರ ತೀವ್ರವಾಗಿತ್ತು. ಕೆರೆ ಏರಿ ಮೇಲೆ, ರಸ್ತೆಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿತ್ತು. ಹಳ್ಳಿಯ ಜನ ರಾತ್ರಿ ಹೊತ್ತು ಸಂಚಾರ ಮಾಡಿದ್ದನ್ನು ಬಿಟ್ಟು ಬಿಟ್ಟಿದ್ದರು. ಅರಣ್ಯ ಇಲಾಖೆ ನಡೆಸಿದ ಸರ್ವೆ ಪ್ರಕಾರ ಸುಮಾರು 18 ಕ್ಕೂ ಹೆಚ್ಚು ಚಿರತೆಗಳ ಸಂಚಾರವಿತ್ತು. ಅಲ್ಲದೇ ಹೆಬ್ಬೂರು, ಕುಣಿಗಲ್‌, ತುಮಕೂರು ತಾಲೂಕಿನ ಸುತ್ತಮುತ್ತ ಅರಣ್ಯ ಇಲಾಖೆ ಹಾಕಿದ್ದ ಕ್ಯಾಮರಾಗಳಲ್ಲಿ 18 ಕ್ಕೂ ಹೆಚ್ಚು ಚಿರತೆಗಳ ಸಂಚಾರವಿದ್ದದನ್ನು ಗುರುತಿಸಲಾಗಿತ್ತು.

40 ಡ್ರೋಣ್‌ ಕ್ಯಾಮರಾ ಹಾಗೂ 20 ಬೋನ್‌ಗಳನ್ನು ಇಟ್ಟು ಚಿರತೆ ಬೀಳಬಹುದೆಂದು ಅರಣ್ಯ ಇಲಾಖೆ ಕಾದರೂ ಚಿರತೆ ಮಾತ್ರ ಬೋನಿನ ಸುತ್ತಮುತ್ತ ಓಡಾಡುತ್ತಿತ್ತು ವಿನಃ ಬೋನಿಗೆ ಮಾತ್ರ ಬರುತ್ತಿರಲಿಲ್ಲ.

ಚಿರತೆಗಳ ಹೆಚ್ಚಳಕ್ಕೆ ಕಾರಣವೇನು?:

ತುಮಕೂರು ತಾಲೂಕು, ಕುಣಿಗಲ್‌ ಹಾಗೂ ಗುಬ್ಬಿ ತಾಲೂಕಿನಲ್ಲಿ ಹೇಮಾವತಿ ನೀರಿನ ಒರತೆ ಇದೆ. ಜೊತೆಗೆ ಬೆಂಗಳೂರಿನವರು ಖರೀದಿಸಿರುವ ಖಾಲಿ ಜಮೀನಿನಲ್ಲಿ ಮನುಷ್ಯ ಎತ್ತರದಷ್ಟುಪೊದೆಗಳು ಬೆಳೆದಿವೆ. ಹೀಗಾಗಿ ಚಿರತೆಗಳು ಅಡಗಿಕೊಳ್ಳಲು ಇದು ಸೂಕ್ತವಾದ ಜಾಗವಾಗಿತ್ತು. ಜೊತೆಗೆ ನೀರಿನ ಒರತೆ ಹೆಚ್ಚಿರುವುದು ಮತ್ತು ಸುಲಭವಾಗಿ ನಾಯಿ, ಕರುಗಳು ಬೇಟೆಗೆ ಸಿಗುತ್ತಿದ್ದರಿಂದ ಈ ಮೂರು ತಾಲೂಕಿನಲ್ಲೇ ಚಿರತೆಗಳು ಝಾಂಡಾ ಹೂಡಿದವು. ಒಂದು ಕಡೆ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಹರಸಾಹಸ ಮಾಡುತ್ತಿದ್ದರೆ ಇನ್ನೊಂದೆಡೆ ನರಹಂತಕ ಚಿರತೆಗಳು ತನ್ನ ಬೇಟೆಯನ್ನು ಮುಂದುವರೆಸಿ ಒಂದೇ ವರ್ಷದಲ್ಲಿ ನಾಲ್ವರನ್ನು ಬಲಿ ಪಡೆಯಿತು. ಆದರೆ ಕಳೆದ 8 ತಿಂಗಳಿನಿಂದ 10 ಕ್ಕೂ ಹೆಚ್ಚು ಚಿರತೆಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದ್ದರು. ಇನ್ನೇನು ಚಿರತೆ ಹಾವಳಿ ಮುಗಿಯಿತು ಎನ್ನುವಷ್ಟರಲ್ಲಿ ಮತ್ತೆ ಗುಬ್ಬಿ ತಾಲೂಕಿನಲ್ಲಿ ಚಿರತೆಯೊಂದು ಮಹಿಳೆಯನ್ನು ಕೊಂದು ಹಾಕಿದೆ.

ಕನಸಲ್ಲಿ ಹಾವು, ಕುದುರೆ, ಟಗರು ಕಂಡರೆ ಏನರ್ಥ, ಗೊತ್ತೆ? ...

ಹುಲಿ ಸಂರಕ್ಷಣಾ ಪಡೆ ಬಂದಿತ್ತು:

ತುಮಕೂರು ಜಿಲ್ಲೆಯ ಮೂರು ತಾಲೂಕಿನಲ್ಲಿ ವ್ಯಾಪಕವಾಗಿ ನರಹಂತಕ ಚಿರತೆ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಅರಣ್ಯ ಸಚಿವರ ಸೂಚನೆ ಮೇರೆಗೆ ಬಂಡಿಪುರದಿಂದ ಹುಲಿ ಸಂರಕ್ಷಣಾ ಪಡೆಯನ್ನು ಕರೆಸಿಕೊಳ್ಳಲಾಯಿತು. ಇದಕ್ಕಾಗಿ 4 ಆನೆಗಳು ಬಂದವು. ಆದರೆ ಆನೆಯ ಮೂಲಕ ಕಾರ್ಯಾಚರಣೆ ಫಲ ಕೊಡಲಿಲ್ಲ. ಈ ಮಧ್ಯೆ ಹೇಮಾವತಿ ನಾಲೆ ಬಳಿ ಅಡಗಿದ್ದ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಯಿತು. ಇದಾದ ಮೇಲೆ 9 ಕ್ಕೂ ಹೆಚ್ಚು ಚಿರತೆಗಳು ಬೋನಿಗೆ ಬಿದ್ದವು. ಈ ಮಧ್ಯೆ ಒಂದೆರೆಡು ವಿಫಲ ದಾಳಿಯನ್ನು ಕೂಡ ಚಿರತೆ ಮಾಡಿತ್ತು. ಕ್ರಮೇಣ ಚಿರತೆ ಹಾವಳಿ ಇಲ್ಲವೇ ಎನ್ನುವಂತೆ ಇದ್ದ ವೇಳೆ ಮತ್ತೆ ನರಹಂತಕ ಚಿರತೆ ಅಟ್ಟಹಾಸ ಮೆರೆದಿದ್ದು ಐದನೇ ಬಲಿ ತೆಗೆದುಕೊಂಡಿದೆ. ಮೊದಲ ಬಲಿ ಬನ್ನಿಕುಪ್ಪೆಯಲ್ಲಿ ತೆಗೆದುಕೊಂಡರೆ ಎರಡನೇ ಬಲಿ ದೊಡ್ಡಮಳಲವಾಡಿಯಲ್ಲಿ ತೆಗೆದುಕೊಂಡಿತು. ಬಳಿಕ ಮೂರನೇ ಬಲಿಯನ್ನು ಮಣಿಕುಪ್ಪೆಯಲ್ಲಿ ನರಹಂತಕ ಚಿರತೆ ತೆಗೆದುಕೊಂಡಿತು. ನಾಲ್ಕನೇ ಬಲಿಯನ್ನು ಬೈಚೇನಹಳ್ಳಿಯಲ್ಲಿ ತೆಗೆದುಕೊಂಡಿತು. ಈಗ ಐದನೇ ಬಲಿಯನ್ನು ಮತ್ತೆ ಮಣಿಕುಪ್ಪೆಯಲ್ಲಿ ತೆಗೆದುಕೊಂಡಿದೆ.