ಯಾದಗಿರಿ: ಕೃಷ್ಣಾ ನದಿ ತೀರದಲ್ಲಿ ಚಿರತೆ ಪತ್ತೆ, ಗ್ರಾಮಸ್ಥರಲ್ಲಿ ಆತಂಕ
ವಡಗೇರಾ, ಅಗಶ್ಯಾಳ್ ಬಳಿ ಚಿರತೆ ಪತ್ತೆ| ಕೃಷ್ಣಾ ನದಿಯಲ್ಲಿ ಪ್ರವಾಹ ಹೆಚ್ಚುತ್ತಿರುವ ಹಿನ್ನೆಲೆ, ನದಿ ತೀರದಲ್ಲಿ ಅಳವಡಿಸಲಾಗಿದ್ದ ಪಂಪು ಸೆಟ್ಟುಗಳನ್ನು ತೆಗೆಯಲು ಹೋಗಿದ್ದ ಕೆಲವು ಗ್ರಾಮಸ್ಥರಿಗೆ ಕಂಡ ಚಿರತೆ| ಚಿರತೆ ಕಂಡು ಹೌಹಾರಿದ ಜನರು ಗ್ರಾಮಕ್ಕೆ ವಾಪಸ್| ಎರಡು ಮೂರು ಕಡೆಗಳಲ್ಲಿ ಚಿರತೆ ಹೆಜ್ಜೆ ಗುರುತುಗಳು ಪತ್ತೆ|
ಯಾದಗಿರಿ(ಅ.18): ಜಿಲ್ಲೆಯ ವಡಗೇರಾ ತಾಲೂಕಿನ, ಕೃಷ್ಣಾ ನದಿ ತೀರದ ಅಗಶ್ಯಾಳ ಗ್ರಾಮದ ಹೊರವಲಯದಲ್ಲಿ ಚಿರತೆಯೊಂದು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಕೃಷ್ಣಾ ನದಿಯಲ್ಲಿ ಪ್ರವಾಹ ಹೆಚ್ಚುತ್ತಿರುವ ಹಿನ್ನೆಲೆ, ನದಿ ತೀರದಲ್ಲಿ ಅಳವಡಿಸಲಾಗಿದ್ದ ಪಂಪು ಸೆಟ್ಟುಗಳನ್ನು ತೆಗೆಯಲು ಹೋಗಿದ್ದ ಕೆಲವು ಗ್ರಾಮಸ್ಥರಿಗೆ ಚಿರತೆ ಕಂಡಿದೆ. ಇದರಿಂದ ಹೌಹಾರಿದ ಅವರೆಲ್ಲರೂ ಗ್ರಾಮಕ್ಕೆ ವಾಪಸಾಗಿದ್ದಾರೆ.
ಈ ಮಾಹಿತಿಯನ್ನು ಗ್ರಾಮಸ್ಥರು ಅರಣ್ಯ ಇಲಾಖೆಗೆ ನೀಡಿದ್ದರು. ಪ್ರಾದೇಶಿಕ ಅರಣ್ಯ ಉಪ ಸಂರಕ್ಷಣಾಧಿಕಾರಿ ಮಾಲಗತ್ತಿ ಹಾಗೂ ತಂಡ ಶನಿವಾರ ಸಂಜೆ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ನದಿ ಪಾಲಾಗಿದ್ರೆ ಚೆನ್ನಾಗಿತ್ತು. ಈಗ ಬದುಕಿಯೂ ಸತ್ತಂತೆ ; ಕುಂಬಾರರ ಕಣ್ಣೀರ ಕಥೆಯಿದು!
ಎರಡು ಮೂರು ಕಡೆಗಳಲ್ಲಿ ಚಿರತೆ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು ಗ್ರಾಮಸ್ಥರ ಜೊತೆ ಇವತ್ತು ಸಮಾಲೋಚನೆ ನಡೆಸಿದ್ದೇನೆ ಎಂದು ಡಿಸಿಎಫ್ ಭಾವಿಕಟ್ಟಿ ಶನಿವಾರ ರಾತ್ರಿ ತಮ್ಮನ್ನು ಸಂಪರ್ಕಿಸಿದ ಕನ್ನಡಪ್ರಭ'ಕ್ಕೆ ತಿಳಿಸಿದರು.
ಯಾವುದೇ ಆತಂಕ ಬೇಡ, ಚಿರತೆ ಪತ್ತೆ ಕಾರ್ಯ ನಡೆಯಲಿದೆ. ಆದರೂ ಸಹ, ಗ್ರಾಮಸ್ಥರು ಸ್ವಲ್ಪ ಮುಂಜಾಗ್ರತೆ ವಹಿಸಿ, ಒಬ್ಬೊಬ್ಬರಾಗಿ ತಿರುಗಾಡುವುದನ್ನು ಬಿಟ್ಟು, ಗುಂಪುಗೂಡಿ ಸಂಚರಿಸಲಿ ಎಂದು ಡಿಸಿಎಫ್ ಭಾವಿಕಟ್ಟಿ ಜನರಲ್ಲಿ ಕೋರಿದ್ದಾರೆ.