ತುಮಕೂರು [ಮಾ.01]:  ತೋಟದ ಮನೆ ಮುಂದೆ ಆಟವಾಡುತ್ತಿದ್ದ ಮೊಮ್ಮಗಳನ್ನು ಅಜ್ಜ, ಅಜ್ಜಿ ಎದುರೇ ನರಹಂತಕ ಚಿರತೆಯೊಂದು ಕಚ್ಚಿಕೊಂಡು ಹೋದ ಮನಕಲಕುವ ಘಟನೆ ತುಮಕೂರು ತಾಲೂಕು ಹೆಬ್ಬೂರು ಹೋಬಳಿ ಬೈಚೇನಹಳ್ಳಿಯಲ್ಲಿ ಶನಿವಾರ ರಾತ್ರಿ 8.30ಕ್ಕೆ ನಡೆದಿದೆ.

ಚಂದನಾ(3) ಮಗುವನ್ನೇ ನರಹಂತಕ ಚಿರತೆ ಕಚ್ಚಿ ಒಯ್ದಿರುವುದು. ಬೇಸಿಗೆ ಕಾಲ ಆರಂಭವಾಗಿದ್ದು ಮನೆಯೊಳಗೆ ಧಗೆ ಇದ್ದುದ್ದರಿಂದ ತೋಟದ ಮನೆ ಹೊರಗೆ ಚಾಪೆ ಹಾಸಿಕೊಂಡು ಅಜ್ಜ, ಅಜ್ಜಿ ಕುಳಿತಿದ್ದರು. ಅನತಿ ದೂರದಲ್ಲೇ ಮಗು ಆಟವಾಡುತ್ತಿತ್ತು. ಮನೆ ಹಿಂದಿನ ಬೇಲಿ ಸಂಧಿಯಲ್ಲಿ ಅಡಗಿದ್ದ ಈ ನರಹಂತಕ ಚಿರತೆ ಎಗರಿ ಮಗುವನ್ನು ಕಚ್ಚಿಕೊಂಡು ಹೋಗಿದೆ. ಕಣ್ಣೆದುರೇ ಮಗುವನ್ನು ಚಿರತೆ ಕಚ್ಚಿಕೊಂಡು ಹೋಗಿದನ್ನು ಕಂಡ ಅಜ್ಜ, ಅಜ್ಜಿ ಬೆಚ್ಚಿ ಜೋರಾಗಿ ಕಿರುಚಿಕೊಂಡಿದ್ದಾರೆ. ಈ ತೋಟದ ಮನೆ ಅಕ್ಕಪಕ್ಕ 3 ಮನೆಗಳಿದ್ದು ಆ ಮನೆಯವರೆಲ್ಲಾ ಓಡಿ ಬಂದಿದ್ದಾರೆ. ಮಗುವಿನ ಕುತ್ತಿಗೆಯನ್ನು ಕಚ್ಚಿ ಚಿರತೆ ಹೊತ್ತೊಯ್ದಿದ್ದು ಮನೆ ಮುಂದೆ ರಕ್ತ ಬಿದ್ದಿದೆ.

3 ತಿಂಗಳಿಂದ ಜನರನ್ನು ಬೆಚ್ಚಿ ಬೀಳಿಸಿದ್ದ ನರಭಕ್ಷಕ ಬಲೆಗೆ

  ಚಿರತೆ ಕಚ್ಚಿಕೊಂಡು ಹೋಗಿರುವ ಈ ಮಗುವಿನ ತಂದೆ, ತಾಯಿ ಬೆಂಗಳೂರಿನಲ್ಲಿ ವಾಸವಾಗಿದ್ದು ಮಗಳನ್ನು ಅಜ್ಜ, ಅಜ್ಜಿ ಮನೆಯಲ್ಲೇ ಬಿಟ್ಟಿದ್ದರು. ಪಕ್ಕದೂರಿನಲ್ಲಿದ್ದ ಅಂಗನವಾಡಿಗೆ ಈ ಮಗುವನ್ನು ಪ್ರತಿದಿನ ಅಜ್ಜ ಕರೆದುಕೊಂದು ಹೋಗಿ ಕರೆದುಕೊಂಡು ಬರುತ್ತಿದ್ದರು. ಇವತ್ತು ರಜೆ ಇದ್ದುದ್ದರಿಂದ ಮೊಮ್ಮಗುವನ್ನು ಹೊರಗೆ ಕರೆದುಕೊಂಡು ಹೋಗಿದ್ದರು. ರಾತ್ರಿ ಊಟವಾದ ಮೇಲೆ ಬೇಸಿಗೆ ಕಾಲವಾಗಿದ್ದರಿಂದ ಹೊರಗೆ ಕುಳಿತಿದ್ದಾಗ ಈ ಘಟನೆ ನಡೆದು ಹೋಗಿದೆ.

2 ತಿಂಗಳಲ್ಲಿ ನಾಲ್ವರ ಬಲಿ:  ಕಳೆದ ಎರಡು ತಿಂಗಳ ಅವಧಿಯಲ್ಲಿ ನರಹಂತಕ ಚಿರತೆಗೆ ನಾಲ್ವರು ಬಲಿಯಾಗಿದ್ದಾರೆ. ಮೊದಲ ಬಲಿ ಹೆಬ್ಬೂರು ಹೋಬಳಿಯ ಬಿನ್ನಿಕುಪ್ಪೆಯಲ್ಲಿ ನಡೆಯಿತು. ಬಳಿಕ ಕುಣಿಗಲ್‌ ತಾಲೂಕು ಚಿಕ್ಕಮಳಲವಾಡಿಯಲ್ಲಿ ವೃದ್ಧರೊಬ್ಬರ ರಕ್ತವನ್ನು ನರಹಂತಕ ಚಿರತೆ ಹೀರಿತ್ತು. ಬಳಿಕ ಗುಬ್ಬಿ ತಾಲೂಕು ಮಣಿಕುಪ್ಪೆಯಲ್ಲಿ ಬಾಲಕನನ್ನು ಅಜ್ಜಿ ಎದುರೇ ಚಿರತೆ ಕಚ್ಚಿಕೊಂಡು ಹೋಗಿತ್ತು. ಈಗ ಚಂದನ ಎಂಬ ಹೆಣ್ಣು ಮಗುವನ್ನು ಹೊತ್ತೊಯ್ಯುವ ಮೂಲಕ ನರಹಂತಕ ಚಿರತೆಗೆ ನಾಲ್ವರು ಬಲಿಯಾದಂತಾಗಿದೆ.