ಪ್ರತಿ ಜಿಲ್ಲಾ ಕೇಂದ್ರದಲ್ಲಿ ಪಿಯು ಮೌಲ್ಯಮಾಪನ ವ್ಯವಸ್ಥೆಗೆ ಒತ್ತಾಯ
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೇಂದ್ರಗಳನ್ನು ಪ್ರತಿ ಜಿಲ್ಲೆಯಲ್ಲಿ ತೆರೆಯಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಸುರೇಶ್‌ಕುಮಾರ್ ಅವರಿಗೆ ಜಿಲ್ಲಾ ಉಪನ್ಯಾಸಕರ ಮತ್ತು ಪ್ರಾಚಾರ್ಯರ ಸಂಘ ಒತ್ತಾಯಿಸಿದೆ. ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಚಿತ್ರದುರ್ಗ(ಮೇ.27): ಕೊರೋನಾ ಸಾಂಕ್ರಾಮಿಕ ರೋಗ ಭೀತಿಯ ಈ ಸಮಯದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೇಂದ್ರಗಳನ್ನು ಪ್ರತಿ ಜಿಲ್ಲೆಯಲ್ಲಿ ತೆರೆಯಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಸುರೇಶ್‌ಕುಮಾರ್ ಅವರಿಗೆ ಜಿಲ್ಲಾ ಉಪನ್ಯಾಸಕರ ಮತ್ತು ಪ್ರಾಚಾರ್ಯರ ಸಂಘ ಒತ್ತಾಯಿಸಿದೆ.
ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳು, ಈ ಮೂಲಕ ಉಪನ್ಯಾಸಕರಿಗೆ, ಪ್ರಾಚಾರ್ಯರಿಗೆ ನಿರಾತಂಕವಾಗಿ ಮೌಲ್ಯಮಾಪನ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಕೋರಿದ್ದಾರೆ.
ಆದರೆ ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಮೌಲ್ಯಮಾಪನ ಕೇಂದ್ರಗಳನ್ನು ಏರ್ಪಡಿಸಿದೆ. ಇಲ್ಲಿಗೆ ಹೋಗುವುದರಿಂದ ಉಪನ್ಯಾಸಕರು ಮತ್ತು ಪ್ರಾಚಾರ್ಯರು ಸಾರಿಗೆ, ಊಟ, ವಸತಿ ಮುಂತಾದ ಹಲವಾರು ಸಮಸ್ಯೆಗಳನ್ನು ಮತ್ತು ಕೊರೊನಾ ಸಾಂಕ್ರಾಮಿಕ ರೋಗದ ಭೀತಿಯನ್ನು ಎದುರಿಸಬೇಕಾಗುತ್ತದೆ. ಇದರಿಂದ ಉಪನ್ಯಾಸಕರು ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸಲು ಹಿಂಜರಿಯುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ತಂದೆಯಿಂದಲೇ ಲೈಂಗಿಕ ಕಿರುಕುಳ: ಮಗಳು ಆತ್ಮಹತ್ಯೆ
ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಎಸ್.ಎ. ಸಂಗಪ್ಪ ಅವರು, ತಮ್ಮ ಮನವಿಯನ್ನು ಕೂಡಲೇ ಶಿಕ್ಷಣ ಸಚಿವರಿಗೆ ತಲುಪಿಸುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಮನವಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಎಂ.ಸಿ.ಶೋಭಾ ಅವರ ಮುಖಾಂತರ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗೂ ಸಹ ಸಲ್ಲಿಸಲಾಯಿತು.
ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಲಕ್ಷ್ಮಣ, ಉಪಾಧ್ಯಕ್ಷ ಡಾ.ತಿಮ್ಮಣ್ಣ, ಪ್ರಾಚಾರ್ಯರ ಸಂಘದ ಅಧ್ಯಕ್ಷ ತಿಮ್ಮಯ್ಯ, ಸಹ ಕಾರ್ಯದರ್ಶಿ ನರಸಿಂಹಮೂರ್ತಿ, ಉಪನ್ಯಾಸಕರ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ್, ವಸಂತಕುಮಾರ್, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ವೇಧಮೂರ್ತಿ, ಪದಾಧಿಕಾರಿಗಳಾದ ಕೆ.ತಿಪ್ಪೇಸ್ವಾಮಿ, ಬಿ.ದೊಡ್ಡಯ್ಯ, ಡಾ.ಬಿ.ಕೃಷ್ಣಪ್ಪ, ಡಾ.ಬಿ.ಎಂ.ಗುರುನಾಥ್, ಮುಸ್ತಾಪ್, ಎಚ್.ಶ್ರೀನಿವಾಸ್, ಚನ್ನಬಸಪ್ಪ, ಬ್ಯಾಲಹಾಳ್ ನಾಗರಾಜ್, ಮುರ್ನಾಳ್, ಕಲ್ಲೇಶ್, ಸುರೇಶ್ ಇತರರು ಉಪಸ್ಥಿತರಿದ್ದರು.