ಬೆಂಗಳೂರು(ಮಾ.10): ತಾನು ಹೇಳಿದಂತೆ ಬಂಡವಾಳ ಹೂಡಿಕೆ ಮಾಡಿದರೆ ಶೇ.2ರಷ್ಟುಲಾಭಾಂಶ ಕೊಡಿಸುವುದಾಗಿ ಹಲವರಿಂದ .1.28 ಕೋಟಿ ಹಣ ಪಡೆದು ಉಪನ್ಯಾಸಕ ದಂಪತಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ವಂಚನೆಗೊಳಗಾದ ನಾಗರಬಾವಿ ನಿವಾಸಿ ಎಸ್‌.ರಮೇಶ್‌ ಎಂಬುವರು ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದು, ನಗರದ ಉಲ್ಲಾಳು ಮುಖ್ಯರಸ್ತೆ ನಿವಾಸಿ ಉಪನ್ಯಾಸಕ ಶ್ರೀನಿವಾಸ್‌(35) ಹಾಗೂ ಇವರ ಪತ್ನಿ ಸುನಿತಾ (33) ಎಂಬುವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

 

ದೂರದಾರ ರಮೇಶ್‌ ಮತ್ತು ಆರೋಪಿ ಶ್ರೀನಿವಾಸ್‌ ಇಬ್ಬರು ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ಹಲವು ವರ್ಷಗಳಿಂದ ರಮೇಶ್‌ ಅವರಿಗೆ ಶ್ರೀನಿವಾಸ್‌ ದಂಪತಿ ಸ್ನೇಹಿತರಾಗಿದ್ದರು.

ಅರ್ಥಶಾಸ್ತ್ರ ಉಪನ್ಯಾಸಕರಾಗಿರುವ ಶ್ರೀನಿವಾಸ್‌, ನನಗೆ ಹಣಕಾಸಿನ ವ್ಯವಹಾರದಲ್ಲಿ ಜ್ಞಾನವಿದ್ದು, ತಾನು ಹೇಳಿದ ಕಡೆಗಳಲ್ಲಿ ಬಂಡವಾಳ ಹೂಡಿಕೆ ಮಾಡಿದರೆ, ಶೇ.2ರಷ್ಟುಲಾಭ ಕೊಡಿಸುತ್ತೇನೆಂದು ಹೇಳಿದ್ದರು. ಇದನ್ನು ನಂಬಿದ ರಮೇಶ್‌, ಹಂತ-ಹಂತವಾಗಿ .37.80 ಲಕ್ಷವನ್ನು ತಮ್ಮ ಖಾತೆಗೆ ಜಮೆ ಮಾಡಿದ್ದರು. ಇತರ ಸ್ನೇಹಿತರಿಂದಲೂ ಹೂಡಿಕೆ ಮಾಡಿಸುವಂತೆ ಆರೋಪಿ ಸೂಚಿಸಿದ ಹಿನ್ನೆಲೆಯಲ್ಲಿ ರಮೇಶ್‌ ತನಗೆ ಪರಿಚಯವಿರುವ ಶಕ್ತಿ ಎಂಜಿನಿಯರಿಂಗ್‌ ಕಾರ್ಪೋರೇಷನ್‌ ಹಾಗೂ ಮಾತಾ ಎಂಟರ್‌ ಪ್ರೈಸಸ್‌ ಸಂಸ್ಥೆ ಮಾಲಿಕರಿಂದ ಕ್ರಮವಾಗಿ .43.95 ಲಕ್ಷ ಹಾಗೂ .47.20 ಲಕ್ಷ ಸೇರಿ ಒಟ್ಟಾರೆ .1.28 ಕೋಟಿ ಹಣ ಜಮೆ ಮಾಡಿಸಿದ್ದರು. ಆರೋಪಿ ದಂಪತಿ ಹೇಳಿದಂತೆ ಇಲ್ಲಿ ತನಕ ಯಾವುದೇ ಲಾಭಾಂಶ ನೀಡಿಲ್ಲ, ಸಬೂಬು ಹೇಳುತ್ತಾ ದಿನ ತಳ್ಳುತ್ತಿದ್ದರು. ಹಣವನ್ನು ವಾಪಸ್‌ ಕೇಳಿದ್ದಕ್ಕೆ ಆರೋಪಿ ದಂಪತಿ ಕೊಲೆ ಬೆದರಿಕೆ ಹಾಕಿದ್ದು, ಹಣ ಕೊಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ರಮೇಶ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರು ಪಡೆಯದ ಪೊಲೀಸ್ರು!

ವಂಚನೆ ಸಂಬಂಧ ರಮೇಶ್‌ ಅವರು ದೂರು ನೀಡಲು ಬ್ಯಾಟರಾಯನಪುರ ಠಾಣೆಗೆ ಹೋದಾಗ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದರು. ಬಳಿಕ ರಮೇಶ್‌ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಕೋರ್ಟ್‌ ಸೂಚನೆ ಮೇರೆಗೆ ಎಚ್ಚೆತ್ತ ಪೊಲೀಸರು ಇದೀಗ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.