ದಾಸ್ಯ ಜೀವನ ಬಿಟ್ಟು ಮಾತೃಭಾಷೆ ಯೋಚಿಸಿ

ಭಾರತ ವಿಶ್ವಗುರು ಆಗಬೇಕೆಂದರೆ ವಿಜ್ಞಾನಕ್ಕೆ ಸಂಬಂಧಿಸಿದ ತಂತ್ರಜ್ಞಾನ ಮತ್ತು ಸಂಶೋಧನೆಗಳು ಹೆಚ್ಚು ನಡೆಯಬೇಕು ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್‌ ಅಧ್ಯಕ್ಷ ಡಾ.ಟಿ.ಜಿ.ಸೀತಾರಾಮ ಅಭಿಪ್ರಾಯಪಟ್ಟರು.

Leave the slave life and think mother tongue snr

  ನಾಗಮಂಗಲ :  ಭಾರತ ವಿಶ್ವಗುರು ಆಗಬೇಕೆಂದರೆ ವಿಜ್ಞಾನಕ್ಕೆ ಸಂಬಂಧಿಸಿದ ತಂತ್ರಜ್ಞಾನ ಮತ್ತು ಸಂಶೋಧನೆಗಳು ಹೆಚ್ಚು ನಡೆಯಬೇಕು ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್‌ ಅಧ್ಯಕ್ಷ ಡಾ.ಟಿ.ಜಿ.ಸೀತಾರಾಮ ಅಭಿಪ್ರಾಯಪಟ್ಟರು.

ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದ ಶಿವಶಕ್ತಿ ಸಮುದಾಯಭವನದಲ್ಲಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ 10ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಪ್ರಯುಕ್ತ ಭಾನುವಾರ ನಡೆದ ಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳದ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀಗಳು ತಮ್ಮ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಪ್ರಯುಕ್ತ ಜ್ಞಾನ ವಿಜ್ಞಾನದ ಜೊತೆಗೆ ತಂತ್ರಜ್ಞಾನವನ್ನೂ ಸಹ ಸೇರಿಸಿ ಬಹಳ ಒಳ್ಳೆಯ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳಗಳು ವಿದ್ಯಾರ್ಥಿಗಳಿಗೆ ಬಹಳಷ್ಟುಅನುಕೂಲ ಮಾಡಿಕೊಡುತ್ತವೆ. ಉನ್ನತ ವ್ಯಾಸಂಗ ಮಾಡುತ್ತಿರುವ ಮಕ್ಕಳು ಮುಂದೊಂದು ದಿನ ನಾನೂ ಸಹ ಎಂಜಿನಿಯರ್‌, ವಿಜ್ಞಾನಿ, ವೈದ್ಯ, ವಕೀಲನಾಗಬೇಕೆಂಬುದಕ್ಕೆ ಪ್ರೇರಣೆ ನೀಡುತ್ತವೆ ಎಂದರು.

ಮಾತೃ ಭಾಷೆ ಎಂಬುದು ಬಹಳ ಮುಖ್ಯವಾಗಬೇಕು. ನಮ್ಮ ಭಾಷೆಯಲ್ಲಿಯೇ ಯೋಚನೆ ಮಾಡಿದಾಗ ನಮ್ಮಲ್ಲಿರುವ ಸೃಜನಾತ್ಮಕತೆ ಕ್ರಿಯಾಶೀಲಗೊಂಡು ಹೊಸ ಹೊಸ ಸಂಶೋಧನೆಗಳು ಹೊರಬರಲು ಸಾಧ್ಯವಾಗುತ್ತದೆ. ಹಾಗಾಗಿ ದಾಸ್ಯದಲ್ಲೇ ಜೀವನ ಮಾಡುವುದನ್ನು ಬಿಟ್ಟು ನಮ್ಮ ಮಾತೃಭಾಷೆಯಲ್ಲಿಯೇ ಯೋಚನೆ ಮಾಡಬೇಕು ಎಂದರು.

ಉನ್ನತ ವ್ಯಾಸಂಗವನ್ನು ಅವರವರ ಭಾಷೆಯಲ್ಲಿಯೇ ಕಲಿಯಲು ಆದ್ಯತೆ ನೀಡಲಾಗಿದೆ. ಎಂಜಿನಿಯರಿಂಗ್‌, ಡಿಪ್ಲೊಮಾ ವ್ಯಾಸಂಗವನ್ನು ಕನ್ನಡ, ತಮಿಳು, ತೆಲುಗು ಸೇರಿದಂತೆ ಅವರವರ ಮಾತೃಭಾಷೆಯಲ್ಲಿಯೇ ಕಲಿಯಬಹುದು. ಆದ್ದರಿಂದ ಯಾವುದೇ ನಿರಾಸೆಯಾಗಬೇಕಿಲ್ಲ. ದಾಸ್ಯ ಶಿಕ್ಷಣದಿಂದ ಹೊರಬರಲು ಸ್ವಲ್ಪದಿನಗಳ ಕಾಲಾವಕಾಶ ಬೇಕಾಗುತ್ತದೆ ಅಷ್ಟೆಎಂದರು.

ನೆರೆಯ ಜಪಾನ್‌ ಯೂರೋಪ್‌ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಅವರವರ ಭಾಷೆಯಲ್ಲಿಯೇ ಉನ್ನತ ವ್ಯಾಸಂಗದ ಪಠ್ಯ ಪುಸ್ತಕಗಳಿರುತ್ತವೆ. ಆದರೆ, ನಮ್ಮಲ್ಲಿ ಎಂಜಿನಿಯರಿಂಗ್‌ ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ಪಠ್ಯ ಪುಸ್ತಕಗಳು ನಮ್ಮ ಭಾಷೆಯಲ್ಲಿ ಇಲ್ಲದಿರುವುದು ದುರಾದೃಷ್ಟಕರ ಸಂಗತಿ ಎಂದರು.

ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಉನ್ನತ ವ್ಯಾಸಂಗಕ್ಕೆ ಸಂಬಂಧಿಸಿದ ಪಠ್ಯ ಪುಸ್ತಕಗಳನ್ನು ಕನ್ನಡ ಸೇರಿದಂತೆ ಹದಿಮೂರು ಭಾಷೆಗಳಲ್ಲಿ ಅನುವಾದಿಸಿ ಹೊರತರಲು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್‌ ಮುಂದಾಗಿದೆ. ಅಲ್ಲದೇ, ಡಿಪ್ಲೊಮಾ, ಎಂಜಿನಿಯರಿಂಗ್‌ ಶಿಕ್ಷಣದ ಎಲ್ಲ ಹೊಸ ಪುಸ್ತಕಗಳನ್ನು ಸಿದ್ಧಪಡಿಸಿ ಆನ್‌ಲೈನ್‌ನಲ್ಲಿ ಉಚಿತವಾಗಿ ವಿತರಿಸಲಾಗುತ್ತಿದೆ ಎಂದರು.

ಕಲಿಯುವ ದೇಶಗಳು ಈ ಪುಸ್ತಕಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುತ್ತಿದೆ. ನಮ್ಮ ಭಾಷೆಯಲ್ಲಿ ಮಾಡಿರುವ ಪುಸ್ತಕಗಳಿಗೂ ಬೇರೆ ದೇಶಗಳಲ್ಲಿಯೂ ಹೆಚ್ಚು ಆದ್ಯತೆಯಿದೆ. ಇದನ್ನು ಮುಂದೆ ತೆಗೆದುಕೊಂಡು ಹೋಗಬೇಕೆಂಬುದೇ ನಮ್ಮ ಉದ್ದೇಶ ಎಂದರು.

ತುಮಕೂರು ಹಿರೇಮಠ ಸುಕ್ಷೇತ್ರದ ಡಾ.ಶಿವಾನಂದ ಶಿವಾಚಾರ್ಯ ಶ್ರೀಗಳು ಮಾತನಾಡಿ, ಉಪನಿಶತ್ನ ನಹೀ ಜ್ಞಾನೇನ ಸದೃಶಂ ಎಂಬ ಉವಾಚವನ್ನು ಮತ್ತಷ್ಟುಮುಂದುವರಿಸಬೇಕು ಎಂದು ಶ್ರೀಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀಗಳು ನಹೀ ಜ್ಞಾನ ವಿಜ್ಞಾನ ತಂತ್ರಜ್ಞಾನ ಸದೃಶಂ ಈ ಮೂರಕ್ಕೂ ಹೊಸ ಆಯಾಮ ಒದಗಿಸಿಕೊಡಬೇಕೆಂಬ ಉದ್ದೇಶದಿಂದ ತಮ್ಮ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಸಂದರ್ಭದಲ್ಲಿ ಇಂತಹ ಮಹತ್ಕಾರ್ಯಕ್ಕೆ ಸಂಕಲ್ಪ ಮಾಡಿ ಕಳೆದ ಹತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಬಣ್ಣಿಸಿದರು.

ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ ಅವರು ತಮ್ಮ ಜನ್ಮದಿನವನ್ನು ಶಿಕ್ಷಕರಿಗೆ ಧಾರೆ ಎರೆದರೆ, ಡಾ.ಸರ್‌ ಎಂ. ವಿಶ್ವೇಶ್ವರಯ್ಯ ಅವರು ತಮ್ಮ ಜನ್ಮ ದಿನವನ್ನು ಎಂಜಿನಿಯರ್‌ಗೆ ಧಾರೆ ಎರೆದಂತೆ ನಿರ್ಮಲಾನಂದನಾಥ ಶ್ರೀಗಳು ತಮ್ಮ ಪಟ್ಟಾಭಿಷೇಕ ಮಹೋತ್ಸವವನ್ನು ಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನೆಡೆಗೆ ಧಾರೆ ಎರೆದಿದ್ದಾರೆ ಎಂದರು.

ಈ ಮಹೋತ್ಸವವನ್ನು ಶ್ರೀಗಳು ಒಂದು ಜಾತ್ರೆಯನ್ನಾಗಿಸಬಹುದಿತ್ತು. ಆದರೆ, ಇದೊಂದು ಜ್ಞಾನದ ಕುಂಭಮೇಳವಾಗಬೇಕೆಂಬ ಉದ್ದೇಶದಿಂದ ನಾಡಿನ ವಿವಿಧೆಡೆಗಳಿಂದ ಸಾಕಷ್ಟುವಿದ್ಯಾರ್ಥಿಗಳನ್ನು ಒಂದೆಡೆ ಕಲೆಹಾಕಿ ಈ ಮೇಳದ ವಸ್ತುಪ್ರದರ್ಶನ ಆಯೋಜಿಸಿದ್ದಾರೆ. ಶ್ರೀಗಳ ವೈಚಾರಿಕತೆ ಮತ್ತು ದೂರದೃಷ್ಟಿಯನ್ನು ಬಹಳ ಸಂತೋಷದಿಂದ ಒಪ್ಪಿಕೊಳ್ಳಬೇಕಾಗುತ್ತದೆ ಎಂದರು.

ಒಬ್ಬ ವ್ಯಕ್ತಿ ತುಂಬಾ ದೊಡ್ಡ ಶಕ್ತಿಯಾಗಿ ಬೆಳೆದಾಗ ಅವರಿಗಿಂತಲೂ ಇವರು ಶ್ರೇಷ್ಠ ಎಂಬ ಭಾವನೆ ಮೂಡಿಸುವುದು ಬಹಳ ಕಷ್ಟದ ಕೆಲಸ. ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳು ಆದಿಚುಂಚನಗಿರಿ ಕ್ಷೇತ್ರಕ್ಕೆ ಕಳಶವಿಟ್ಟಿದ್ದರೆ ನಿರ್ಮಲಾನಂದನಾಥ ಶ್ರೀಗಳು ಅದಕ್ಕೆ ಮೆರಗು ನೀಡುತ್ತಿದ್ದಾರೆ ಎಂದರು.

ಶ್ರೀಗಳು ಒಬ್ಬ ವಿಜ್ಞಾನಿ ತಂತ್ರಜ್ಞಾನಿಯಾಗಿದ್ದರೂ ಸಹ ಅವರಲ್ಲಿರುವ ಆಧ್ಯಾತ್ಮಿಕತೆ ಸಭ್ಯತೆ ಶ್ರದ್ಧೆ ಭಕ್ತಿಯನ್ನು ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಇಂತಹ ಕಾಲಘಟ್ಟದಲ್ಲಿ ವಿಜ್ಞಾನ ಮತ್ತು ಸಾಹಿತ್ಯ ಕ್ಷೇತ್ರದ ಸಾಧಕರನ್ನು ಗುರುತಿಸಿ ವಿಜ್ಞಾತಂ ಪ್ರಶಸ್ತಿ ಪ್ರದಾನ ಮಾಡುತ್ತಿರುವ ಕಾರ್ಯ ಬಹಳ ಅದ್ಭುತ ಎಂದರು.

ಖಾವಿಗೆ ಏನು ಶಕ್ತಿಯಿದೆ ಅನ್ನುವುದನ್ನು ಆದಿಚುಂಚನಗಿರಿ, ಸಿದ್ಧಗಂಗಾ, ಸುತ್ತೂರು ಮಠಕ್ಕೆ ಬಂದು ನೋಡಿದರೆ ಗೊತ್ತಾಗುತ್ತದೆ. ಶ್ರೀಗಳಿಗೆ ಜೇಬಿಲ್ಲ ಎಂಬುದು ದೊಡ್ಡ ವಿಷಯವೇನಲ್ಲ. ಶಿವನಿಗೂ ಸಹ ಜೇಬಿಲ್ಲ. ಸ್ವಾಮೀಜಿಗಳಿಗೆ ಜೇಬಿರಬಾರದು ಆದರೆ ಜೋಳಿಗೆ ಇರಬೇಕು. ಖಾವಿ ಧರಿಸಿರುವ ಒಬ್ಬ ಯೋಗಿ ತಪಸ್ವಿ ಜೋಳಿಗೆ ಹಾಕಿರುವುದರಿಂದ ಎಷ್ಟುಕುಟುಂಬಗಳಿಗೆ ನೆಲೆ ನಿಂತುಕೊಂಡಿವೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದರು.

ಒಬ್ಬ ಸ್ವಾಮೀಜಿ ತಮಗಾಗಿ ಏನನ್ನೂ ಮಾಡಿಕೊಳ್ಳುವುದಿಲ್ಲ ಏನೇ ಮಾಡಿದರೂ ಭಕ್ತರಿಗೆ ಜನಸಾಮಾನ್ಯರಿಗೆ ಹಾಗೂ ಸಮಾಜದ ಅಭ್ಯುಧಯಕ್ಕೆ ಮಾಡುತ್ತಾರೆ. ಖಾದಿಯ ಶಕ್ತಿ ಕಡಿಮೆಯಾಗುತ್ತಿದ್ದರೂ ಖಾವಿಯ ಶಕ್ತಿಗೆ ಎಲ್ಲರೂ ತಲೆಬಾಗಲೇ ಬೇಕು. ಹಾಗಾಗಿ ಸ್ವಾಮೀಜಿಗಳು ಧರಿಸುವ ಖಾವಿ ಬಗ್ಗೆ ಯಾವುದೇ ರಾಜಕಾರಣಿಗಳು ಅನುಮಾನ ಪಡಬಾರದು ಎಂದರು.

ಸಮಾರಂಭದಲ್ಲಿ ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ, ಮಾಜಿ ಸಂಸದ ಎಲ….ಆರ್‌.ಶಿವರಾಮೇಗೌಡ, ಐಆರ್‌ಎಸ್‌ ಅಧಿಕಾರಿ ಜಯರಾಂ, ಐಎಸ್‌ಟಿಇ ಸದಸ್ಯ ಪ್ರತಾಪ್‌ ಸಿಂಗ್‌ ದೇಸಾಯಿ, ಕೆಪಿಎಸ್ಸಿ ಸದಸ್ಯ ಡಾ.ಪ್ರಭುದೇವ್‌ ಮಾತನಾಡಿದರು.

ಕೋಟ್‌...

ಇಂದಿನ ಜಗತ್ತಿನಲ್ಲಿ ಜ್ಞಾನದ ಜೊತೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಹೊಂದಿಕೊಳ್ಳದಿದ್ದರೆ ವಿನಾಶ ಕಟ್ಟಿಟ್ಟಬುತ್ತಿ. ಸಂಶೋಧನಾ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಯಿಂದಾಗಿ ಭಾರತ ಅಭಿವೃದ್ಧಿಯಾಗುತ್ತಿದೆ. ಇದನ್ನು ನೋಡಿ ಇಡೀ ಜಗತ್ತು ನಿಬ್ಬೆರಗಾಗುತ್ತಿದೆ. ಪ್ರಸ್ತುತ ಬುದ್ಧಿವಂತ ಯುವಕ ಯುವತಿಯರು ಸಂಶೋಧನಾ ವಲಯಕ್ಕೆ ಹೋಗಲು ಇಷ್ಟಪಡುತ್ತಿಲ್ಲ. ಭೈರವೈಕ್ಯ ಶ್ರೀಗಳ ಪಟ್ಟಾಭಿಷೇಕ ಮಹೋತ್ಸವದ ಪ್ರಯಕ್ತ ಜಾನಪದ ಕಲಾ ಮೇಳ ಆರಂಭಿಸಲಾಯಿತು. ಇಂದಿನ ಮಕ್ಕಳಿಗೆ ವಿದ್ಯೆ ಕಲಿತು ಹೊರಗೆ ಹೋದರೂ ಸಹ ಅದು ತಂತ್ರವಾಗಿ ಉಳಿಯಬೇಕೆಂದರೆ ಆಧ್ಯಾತ್ಮದ ತಳಹದಿ ಬೇಕಾಗುತ್ತದೆ. ಅದಕ್ಕಾಗಿ ಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳವನ್ನು ಆಯೋಜಿಸಲಾಗುತ್ತಿದೆ.

-- ಡಾ.ನಿರ್ಮಲಾನಂದನಾಥಸ್ವಾಮೀಜಿ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರು.

ಭವಿಷ್ಯದ ರಾಷ್ಟ್ರದ ಯಶಸ್ಸಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಮಠ ಕಾರ್ಯ ನಿರ್ವಹಿಸುತ್ತಿದೆ. ಧರ್ಮ ಮತ್ತು ವಿಜ್ಞಾನವನ್ನು ಒಂದಾಗಿ ತೆಗೆದುಕೊಂಡು ಹೋಗುವ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ. ವಿದ್ಯಾರ್ಥಿಗಳಲ್ಲಿ ಜ್ಞಾನ ಹೆಚ್ಚಿಸಲು ಪೂರಕವಾಗಿ ಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳವನ್ನು ಆಯೋಜಿಸಿರುವುದು ಶ್ಲಾಘನೀಯ. ಶ್ರೀಮಠದಿಂದ ಮತ್ತಷ್ಟುಸೇವೆಗಳು ನಿರಂತರವಾಗಿ ನಡೆಯಲು ಕಾಲಭೈರವೇಶ್ವರಸ್ವಾಮಿ ಮತ್ತು ಭೈರವೈಕ್ಯಶ್ರೀಗಳು ನಿರ್ಮಲಾನಂದನಾಥ ಶ್ರೀಗಳಿಗೆ ಹೆಚ್ಚು ಶಕ್ತಿ ನೀಡಲಿ.

- ಎನ್‌.ಚಲುವರಾಯಸ್ವಾಮಿ, ಮಾಜಿ ಸಚಿವರು.

ಸಮಾಜಕ್ಕೆ ಇಂದು ಏನೆಲ್ಲಾ ಅಗತ್ಯವಿದೆ ಎಂಬುದನ್ನು ಮನಗಂಡಿರುವ ನಿರ್ಮಲಾನಂದನಾಥ ಶ್ರೀಗಳು ಅದಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ ಇಂದು ಜಗತ್ತನ್ನು ಆವರಿಸಿದೆ. ಪ್ರತಿಯೊಬ್ಬರಲ್ಲೂ ಜ್ಞಾನದ ವಿಸ್ತಾರ ಅಧಿಕವಾಗಿದೆ. ಶ್ರೀಮಠ 500ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳನ್ನು ಆರಂಭಿಸಿ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ.

 ಶಿವರಾಮೇಗೌಡ, ಮಾಜಿ ಸಂಸದರು. 

Latest Videos
Follow Us:
Download App:
  • android
  • ios