ಭಿನ್ನಮತ ಬದಿಗೊತ್ತಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಿ: ಆರೀಫ್
ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಎಐಸಿಸಿ ವತಿಯಿಂದ ನೇಮಕಗೊಂಡಿರುವ ತುಮಕೂರು ಜಿಲ್ಲೆಯ ಉಸ್ತುವಾರಿ, ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಕೇಂದ್ರದ ಮಾಜಿ ಸಚಿವ ಮೊಹಮ್ಮದ್ ಆರೀಫ್ ನಸೀಮ್‌ಖಾನ್ ಅವರ ನೇತೃತ್ವದಲ್ಲಿ ಜಿಲ್ಲಾ ಮುಖಂಡರ ಸಭೆ ನಡೆಸಲಾಯಿತು.
ತುಮಕೂರು : ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಎಐಸಿಸಿ ವತಿಯಿಂದ ನೇಮಕಗೊಂಡಿರುವ ತುಮಕೂರು ಜಿಲ್ಲೆಯ ಉಸ್ತುವಾರಿ, ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಕೇಂದ್ರದ ಮಾಜಿ ಸಚಿವ ಮೊಹಮ್ಮದ್ ಆರೀಫ್ ನಸೀಮ್‌ಖಾನ್ ಅವರ ನೇತೃತ್ವದಲ್ಲಿ ಜಿಲ್ಲಾ ಮುಖಂಡರ ಸಭೆ ನಡೆಸಲಾಯಿತು.
ಜಿಲ್ಲಾ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೊಹಮ್ಮದ್ ಆರೀಫ್ ಖಾನ್, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿಯ ಚುನಾವಣೆಯಲ್ಲಿ 7-8 ಸ್ಥಾನಗಳಲ್ಲಿ ಗೆಲ್ಲಲ್ಲು ಅವಕಾಶವಿದೆ. ಜಿಲ್ಲಾ ಮುಖಂಡರು ತಮ್ಮ ನಡುವಿನ ಭಿನ್ನಮತವನ್ನು ಬದಿಗೊತ್ತಿಗೆ ಪಕ್ಷದ ಗೆಲುವಿಗಾಗಿ ದುಡಿಯಬೇಕೆಂದು ಸಲಹೆ ನೀಡಿದರು.
ಕೋಮುವಾದಿ ಬಿಜೆಪಿ ಮತ್ತು ಜಾತ್ಯತೀತ ಪಕ್ಷಗಳಾಗಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಪ್ರಬಲ ಪೈಪೋಟಿ ಇದೆ. ಒಂದು ವೇಳೆ ಕಾಂಗ್ರೆಸ್ ಪಕ್ಷವನ್ನು ವಿರೋಧಿಸುವ ಜಾತ್ಯತೀತ ಮನಸ್ಸುಗಳು ಜೆಡಿಎಸ್‌ಗೆ ಮತ ಹಾಕಿದರೂ, ಅದು ಪರೋಕ್ಷವಾಗಿ ಬಿಜೆಪಿಗೆ ಮತ ಹಾಕಿದಂತೆ, ಹಾಗಾಗಿ ಸಾಧ್ಯವಾದಷ್ಟುದಲಿತ, ಅಲ್ಪಸಂಖ್ಯಾತ, ಹಿಂದುಳಿದ ಸಮುದಾಯಗಳ ಮತಗಳು ಜೆಡಿಎಸ್ ಪಕ್ಷಕ್ಕೆ ಬೀಳದಂತೆ ಎಚ್ಚರಿಕೆ ವಹಿಸಿ, ಕಾಂಗ್ರೆಸ್ ಪಕ್ಷ ನೀಡಿರುವ 2000 ನಗದು, 200 ಯೂನಿಟ್ ವಿದ್ಯುತ್ ಉಚಿತ ಹಾಗೂ 10 ಕೆ.ಜಿ.ಅಕ್ಕಿ ಖಚಿತ ಗ್ಯಾರಂಟಿ ಕಾರ್ಡು ಮನೆ ಮನೆಗೆ ತಲುಪಿಸಿ, ಬಡವರ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬೀಳುವಂತೆ ಮಾಡಿದರೆ ಮಾತ್ರ ಕಾಂಗ್ರೆಸ್ ಗೆಲ್ಲಲ್ಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲಾ ಮುಖಂಡರು ಒಗ್ಗಟ್ಟಿನಿಂದ ಹೋರಾಟ ನಡೆಸುವಂತೆ ಮೊಹಮ್ಮದ್ ಆರೀಫ್ ಖಾನ್ ಸೂಚನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ಮಾಜಿ ಶಾಸಕರಾದ ಕೆ.ಷಡಕ್ಷರಿ,ಟಿ.ಬಿ.ಜಯಚಂದ್ರ, ಎಸ್.ಷಪಿ ಅಹಮದ್, ಲಕ್ಕಪ್ಪ, ಕೆ.ಎಸ್.ಕಿರಣ್ ಕುಮಾರ್, ಆರ್.ನಾರಾಯಣ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿಹುಲಿಕುಂಟೆ ಮಠ್, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಬಿ.ಜಿ.ಲಿಂಗರಾಜು, ಮರಿಚನ್ನಮ್ಮ, ತುಮಕೂರು ಮೇಯರ್ ಪ್ರಭಾವತಿ ಸುಧೀಶ್ವರ್, ಸುಜಾತ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
‘ಕಾಂಗ್ರೆಸ್‌ನಲ್ಲಿ ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ’
ಕಾಂಗ್ರೆಸ್ ಪಕ್ಷ 140 ವರ್ಷಗಳ ಇತಿಹಾಸ ಹೊಂದಿರುವ ಪಕ್ಷ. ತನ್ನದೇ ಆದ ತತ್ವ, ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು, ದೇಶದ ಸ್ವಾತಂತ್ರ್ಯ, ದೇಶದ ಅಭಿವೃದ್ಧಿಗಾಗಿ ಹಗಲಿರುಳು ದುಡಿಯುತ್ತಾ ಬಂದಿದೆ. ಕಾಂಗ್ರೆಸ್ ಪಕ್ಷದಲ್ಲಿ ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ. ಹಾಗಾಗಿ ಎಲ್ಲರೂ ತಮ್ಮ ಇಗೋ ಬದಿಗೊತ್ತಿ, ಪರಸ್ಪರ ಗೆಲುವಿಗೆ ಪೂರಕವಾಗಿ ಕೆಲಸ ಮಾಡಿದರೆ ಈ ಬಾರಿ ಪಕ್ಷವನ್ನು ಖಂಡಿತವಾಗಿಯೂ ಅಧಿಕಾರಕ್ಕೆ ತರಬಹುದು. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಬಲವಾಗಿದೆ. ಪಕ್ಷ ಆಕಾಂಕ್ಷಿಗಳಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಉಳಿದ ಆಕಾಂಕ್ಷಿಗಳು ಅಭ್ಯರ್ಥಿ ಜೊತೆ ನಿಂತು ಅವರ ಗೆಲುವಿಗೆ ದುಡಿದರೆ ಮಾತ್ರ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯ. ಇದನ್ನು ಮುಖಂಡರ ಜೊತೆಗೆ, ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಮೊಹಮ್ಮದ್ ಆರೀಫ್ ಖಾನ್ ಸಲಹೆ ನೀಡಿದರು.