ಮಂಡ್ಯದ ವಕೀಲ ಮತ್ತು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಬೆಂಬಲಿಗ ಟಿ.ಎಸ್‌. ಸತ್ಯಾನಂದ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಸಮ್ಮುಖದಲ್ಲಿ ಗುರುವಾರ ಬೆಂಗಳೂರಿನಲ್ಲಿ ಕಾಂಗ್ರೆಸ್‌ ಸೇರ್ಪಡೆಯಾದರು.

ಮಂಡ್ಯ : ಮಂಡ್ಯದ ವಕೀಲ ಮತ್ತು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಬೆಂಬಲಿಗ ಟಿ.ಎಸ್‌. ಸತ್ಯಾನಂದ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಸಮ್ಮುಖದಲ್ಲಿ ಗುರುವಾರ ಬೆಂಗಳೂರಿನಲ್ಲಿ ಕಾಂಗ್ರೆಸ್‌ ಸೇರ್ಪಡೆಯಾದರು.

ಜಿಲ್ಲಾ ಯುವ ಕಾಂಗ್ರೆಸ್‌ ಸಮಿತಿಗೆ ಎಂಟು ವರ್ಷಗಳ ಕಾಲ ಅಧ್ಯಕ್ಷರಾಗಿ, ಈ ಹಿಂದೆ ಕೆಪಿಸಿಸಿ ಸದಸ್ಯರಾಗಿ ಜಿಲ್ಲಾ ಕಾಂಗ್ರೆಸ್‌ನ ಮುಂಚೂಣಿ ನಾಯಕರಾಗಿದ್ದ ಸತ್ಯಾನಂದ ಅವರು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದಾಗ ರಾಜಕೀಯ ಗುರುವಿನ ದಾರಿಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಸತ್ಯಾನಂದ ಕಾಂಗ್ರೆಸ್‌ ಗೂಡಿಗೆ ಮರಳಿದ್ದಾರೆ. ಆ ಮೂಲಕ ಮಂಡ್ಯ ಜಿಲ್ಲಾ ಕಾಂಗ್ರೆಸ್‌ನಲ್ಲಿ ಮತ್ತೆ ಮುಂಚೂಣಿಗೆ ಬಂದಿದ್ದಾರೆ.

ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್‌ ಅವರು, ಸತ್ಯಾನಂದ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಬಂದಿದ್ದು ಅವರೊಂದಿಗೆ ಇನ್ನೂ ಹಲವಾರು ಜನ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಎಸ್‌.ಎಂ.ಕೃಷ್ಣ ಅವರ ಬೆಂಬಲಕ್ಕೆ ನಿಂತಿದ್ದ ಹಲವಾರು ಜನ ಮರಳಿ ಕಾಂಗ್ರೆಸ್‌ ಸೇರಲಿದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಸತ್ಯಾನಂದ ನನಗೆ ಹಳೆಯ ಪರಿಚಿತರಾಗಿದ್ದು ಯುವ ಕಾಂಗ್ರೆಸ್‌ ಸಂಘಟನೆಯಲ್ಲಿ ಸಾಕಷ್ಟುಕೆಲಸ ಮಾಡಿದ್ದು ಅನಿವಾರ್ಯ ಸಂದರ್ಭದಲ್ಲಿ ಪಕ್ಷ ತೊರೆದಿದ್ದರು. ಅವರು ಮರಳಿ ಪಕ್ಷಕ್ಕೆ ಬಂದಿರುವುದರಿಂದ ಪಕ್ಷಕ್ಕೆ ಶಕ್ತಿ ಬಂದಿದ್ದು ಅವರ ರಾಜಕೀಯ ಭವಿಷ್ಯ ಉಜ್ವಲವಾಗಲಿ. ಅವರ ಸೇರ್ಪಡೆ ಯನ್ನು ಸ್ವಾಗತಿಸುತ್ತೇನೆ ಎಂದರು.

 ‘ಕೈ’ ಟಿಕೆಟ್‌ ತಪ್ಪಿದ್ದಕ್ಕೆ ಪಾಲಹಳ್ಳಿ : ಚಂದ್ರಶೇಖರ್‌ ಆಕ್ರೋಶ: ಸಭೆ

 ಶ್ರೀರಂಗಪಟ್ಟಣ : ಶ್ರೀರಂಗಪಟ್ಟಣ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಾಜಿ ಶಾಸಕ ರಮೇಶ್‌ ಬಂಡಿಸಿದ್ದೇಗೌಡರ ಹೆಸರನ್ನು ಹೈಕಮಾಂಡ್‌ ಅಂತಿಮಗೊಳಿಸಿರುವ ಹಿನ್ನೆಲೆಯಲ್ಲಿ ಮತ್ತೊರ್ವ ಟಿಕೆಟ್‌ ವಂಚಿತ ಪಾಲಹಳ್ಳಿ ಚಂದ್ರಶೇಖರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಖಾಸಗಿ ಭವನದಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿದ ಪಾಲಹಳ್ಳಿ ಚಂದ್ರಶೇಖರ್‌ ನನಗೆ ಕಳೆದ ಬಾರಿಯಂತೆ ಈ ಬಾರಿಯೂ ‘ಕೈ’ ಟಿಕೆಟ್‌ ಕೈತಪ್ಪಿದೆ. ಇನ್ನೊಂದು ವಾರದಲ್ಲಿ ಬೆಂಬಲಿಗರೊಂದಿಗೆ ಬಹಿರಂಗ ಸಭೆ ಕರೆದು ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷರು ನನಗೆ ಟಿಕೆಟ್‌ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಕೊನೆಗಳಿಗೆಯಲ್ಲಿ ನನಗೆ ಟಿಕೆಟ್‌ ತಪ್ಪಿಸಲಾಗಿದೆ. ಜೆಡಿಎಸ್‌ನಿಂದ ಬಂದಿರುವ ರಮೇಶ್‌ ಬಂಡಿಸಿದ್ದೇಗೌಡರಿಗೆ ಮತ್ತೊಮ್ಮೆ ಟಿಕೆಟ್‌ ನೀಡುವ ಮೂಲಕ ಹಲವು ವರ್ಷಗಳಿಂದ ಪಕ್ಷದಲ್ಲಿ ದುಡಿಯುತ್ತಿರುವ ನನ್ನನ್ನು ಕಡೆಗಣಿಸಿದ್ದಾರೆ. ಪಕ್ಷವನ್ನು ಕಟ್ಟಿರುವ ನಮ್ಮ ಪಾಡೇನು ಎಂದು ಪ್ರಶ್ನಿಸಿದರು.

ನನಗೆ ಟಿಕೆಟ್‌ ನೀಡಲು ಜಿಲ್ಲೆಯ ಬಾಯಲ್ಲಿ ನನ್ನ ಹೆಸರು ಯಾಕೆ ಬರಬೇಕು. ಕೆಲಸ ಮಾಡುವವನು ನಾನು. ಗೆಲ್ಲಿಸುವವರು ಕಾಂಗ್ರೆಸ್‌ ಕಾರ್ಯಕರ್ತರು. ಇನ್ನೊಂದು ವಾರದಲ್ಲಿ ಅಂತಿಮ ತೀರ್ಮಾನ ಕೈಗೊಂಡು ಪಕ್ಷೇತರರಾಗಿ ಕಣಕ್ಕಿಳಿಯುತ್ತೇನೆ ಅಥವಾ ಅಭ್ಯರ್ಥಿಯನ್ನು ಸೋಲಿಸುವುದಾಗಿ ಎಚ್ಚರಿಕೆ ನೀಡಿದರು.

ಹಿರಿಯ ಕಾಂಗ್ರೆಸ್‌ ಮುಖಂಡ ಮರಳಾಗಾಲ ಧನಂಜಯ್‌ ಮಾತನಾಡಿ, ಮೂಲ ಕಾಂಗ್ರೆಸ್‌ ಕಾರ್ಯಕರ್ತರನ್ನು ಕಡೆಗಣಿಸುತ್ತಿರುವ ಪರಿಣಾಮ ರಾಜ್ಯದಲ್ಲಿ ಕಾಂಗ್ರೆಸ್‌ ಅಲೆಯಿದ್ದರೂ ಕ್ಷೇತ್ರದಲ್ಲಿ ಮೂಲೆ ಗುಂಪಾಗುತ್ತಿದೆ. ನಾನೊಬ್ಬ ಹಿರಿಯ ಕಾಂಗ್ರೆಸ್ಸಿಗ. ಪಕ್ಷವನ್ನು ತಳಮಟ್ಟದಲ್ಲಿ ಕಟ್ಟಿದ್ದೇನೆ ಎನ್ನುವ ಅರಿವೇ ಇಲ್ಲದೆ ರಮೇಶ್‌ ಬಂಡಿಸಿದ್ದೇಗೌಡರಿಗೆ ಟಿಕೆಟ್‌ ನೀಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೂಲ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಮುಖಂಡರು ನಾವೆಲ್ಲರೂ ಗಟ್ಟಿಯ ನಿರ್ಧಾರ ಕೈಗೊಂಡು ಕಡೆಗಣಿಸುತ್ತಿರುವ ಕಾಂಗ್ರೆಸ್‌ ಪಕ್ಷಕ್ಕೆ ಹಾಗೂ ಅಭ್ಯರ್ಥಿಗೆ ತಕ್ಕ ಪಾಠ ಕಲಿಸಬೇಕು ಎಂದರು.

ಕೆಆರ್‌ಎಸ್‌ ತಮ್ಮಣ್ಣ ಮಾತನಾಡಿ, ನಾವುಗಳು ಹೆದರುವುದು ಬೇಡ. ಪಾಲಹಳ್ಳಿ ಚಂದ್ರಶೇಖರ್‌ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಎಲ್ಲರೂ ಶಕ್ತಿ ಮೀರಿ ಅವರ ಗೆಲುವಿಗೆ ಶ್ರಮಿಸೋಣ. ಬೂತ್‌ ಮಟ್ಟದಲ್ಲಿ ನಮ್ಮ ಕಾರ್ಯಕರ್ತರರು ಇದ್ದಾರೆ. ಒಬ್ಬೊಬ್ಬ ಮುಖಂಡನೂ ಎರಡೆರಡು ಸಾವಿರ ಮತ ಗಿಟ್ಟಿಸಲು ಹೋರಾಡೋಣ ಎಂದರು.

ಈ ವೇಳೆ ನೆಲಮನೆ ಸಿದ್ದಲಿಂಗಣ್ಣ, ಮರಳಾಗಾಲ ವಿಜಯ್‌ ಕುಮಾರ್‌, ದರಸಗುಪ್ಪೆ ಗೋಪಾಲ…, ಮೋಹನ್‌ ಸೇರಿದಂತೆ ಇತರರು ಮುಂದಿನ ನಡೆಯ ಬಗ್ಗೆ ಮೂಲ ಕಾಂಗ್ರೆಸ್ಸಿಗರ ಕೈಗೊಳ್ಳಬೇಕಾದ ತೀರ್ಮಾನದ ಬಗ್ಗೆ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸುಮಾರು 100ಕ್ಕೂ ಹೆಚ್ಚು ಕಾ¿ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.