ಶಿರಾ (ಅ.08): ಕಳೆದ ಭಾನುವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್‌ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ವಕೀಲರಾದ ನಾವು ಸ್ವಯಂ ಇಚ್ಚೆಯಿಂದ ಟಿ.ಬಿ.ಜಯಚಂದ್ರ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಪಕ್ಷ ಸೇರ್ಪಡೆಯಾಗಿದ್ದೇವೆ. ಇದರಲ್ಲಿ ಯಾರ ಒತ್ತಡವೂ ಇಲ್ಲ. ನಾವೂ ಬಲವಂತವಾಗಿ ಯಾರನ್ನೂ ಪಕ್ಷಕ್ಕೆ ಸೇರ್ಪಡೆ ಮಾಡಿಸಲು ಕರೆದುಕೊಂಡು ಹೋಗಿಲ್ಲ ಎಂದು ಹಿರಿಯ ವಕೀಲ ಆರ್‌.ಸರ್ವೇಶ್‌ ತಿಳಿಸಿದ್ದಾರೆ.

ಅವರು ನಗರದ ಗವಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿ, ನಾವು ಶಿರಾದಿಂದ ವಕೀಲರನ್ನು ಅವರ ಒಪ್ಪಿಗೆ ಪಡೆದೇ ಬೆಂಗಳೂರಿಗೆ ಹೋಗುವುದಾಗಿ ಹೇಳಿಯೇ ಕರೆದುಕೊಂಡು ಹೋಗಿದ್ದೇವೆ. ವಕೀಲರು ವಿದ್ಯಾವಂತರು ಅವರಿಗೆ ನಾವು ಮೋಸ ಮಾಡಲು ಸಾಧ್ಯವೆ? ಹಾಗೇನಾದರೂ ಅವರಿಗೆ ಇಷ್ಟಇಲ್ಲದಿದ್ದರೆ ತುಮಕೂರಿನಲ್ಲೇ ಇಳಿಯಬೇಕಿತ್ತು. ಅದೆಲ್ಲವನ್ನು ಬಿಟ್ಟು ಶಿರಾಕ್ಕೆ ಬಂದ ನಂತರ ಯಾವುದೋ ಒತ್ತಡಕ್ಕೆ ಹೀಗೆ ಹೇಳಿಕೆ ನೀಡಿದ್ದಾರೆ ಎಂದರು.

ಡಿ.ಕೆ ರವಿ ತಾಯಿ ಹೇಳಿಕೆಗೆ ಕುಸುಮಾ ಮೊದಲ ರಿಯಾಕ್ಷನ್

ಟಿ.ಬಿ.ಜಯಚಂದ್ರ ಅವರ ಅಭಿವೃದ್ಧಿ ಕೆಲಸ ನೋಡಿ ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗಿದ್ದೇವೆ. ಟಿ.ಬಿ.ಜಯಚಂದ್ರ ಅವರು ವಕೀಲರ ಭವನಕ್ಕೆ ಸುಮಾರು 3 ಕೋಟಿ ರು. ಅನುದಾನ ನೀಡಿದ್ದ ಪರಿಣಾಮ ವಕೀಲರ ಭವನ ಕಟ್ಟಡ ನಿರ್ಮಾಣವಾಗಿ ಇನ್ನೆರಡು ತಿಂಗಳಲ್ಲಿ ಉದ್ಘಾಟನೆಯಾಗಲಿದೆ. ಇದರ ಜೊತೆಗೆ ಶಿರಾಕ್ಕೆ ಅತ್ಯವಶ್ಯಕವಾಗಿದ್ದ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಮಿನಿ ವಿಧಾನಸೌಧ ಹೀಗೆ ಸಾಕಷ್ಟುಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರ ಕೆಲಸ ಮೆಚ್ಚಿ ಮನಸ್ಪೂರ್ವಕವಾಗಿ ನಾವು ಪಕ್ಷ ಸೇರ್ಪಡೆ ಆಗಿದ್ದೇವೆ ಎಂದರು.

ಕಾಂಗ್ರೆಸ್‌ ಕಾನೂನು ಮತ್ತು ಮಾನವ ಹಕ್ಕುಗಳ ಘಟಕದ ಅಧ್ಯಕ್ಷ ಎಚ್‌.ಗುರುಮೂರ್ತಿ ಮಾತನಾಡಿ, ತಾಲೂಕು ವಕೀಲರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ನೀಡಿರುವ ಪತ್ರಿಕಾ ಹೇಳಿಕೆ ಸಂಘವನ್ನು ದುರುಪಯೋಗ ಮಾಡಿಕೊಂಡು ಹೇಳಿದೆ. ವಕೀಲರು ಯಾರ ಸ್ವತ್ತು ಅಲ್ಲ ಅವರಿಗೆ ಯಾವ ಪಕ್ಷಕ್ಕಾದರೂ ಸೇರ್ಪಡೆಯಾಗುವ ಹಕ್ಕು ಇದೆ. ನಾವು ಕಳೆದ ಭಾನುವಾರ ಯಾರನ್ನೂ ಬಲವಂತವಾಗಿ ಕರೆದುಕೊಂಡು ಹೋಗಿಲ್ಲ ಎಲ್ಲರನ್ನು ಒಪ್ಪಿಸಿ ಅವರ ಸಹಿಗಳನ್ನು ಪಡೆದೇ ಬೆಂಗಳೂರಿಗೆ ಹೋಗಲಾಗಿತ್ತು. ನಿನ್ನೆ ಪತ್ರಿಕಾ ಹೇಳಿಕೆ ನೀಡಿರುವ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಅಧಿಕಾರ ಸೆ. 30 ಕ್ಕೆ ಮುಗಿದಿದ್ದು, ಸಂಘದ ಹೆಸರನ್ನು ಅವರು ಹೇಳುವಂತಿಲ್ಲ. ಆದರೂ ಹೇಳಿದ್ದಾರೆ. ಪತ್ರಿಕಾ ಹೇಳಿಕೆ ನೀಡಿದ್ದ ಕೆಲವರು ಬೆಳಗ್ಗೆ ಪತ್ರಿಕಾ ಹೇಳಿಕೆ ನೀಡಿ ಸಂಜೆ ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ನಾಗರಾಜು, ರಾಮಕೃಷ್ಣಪ್ಪ, ಪುರುಷೋತ್ತಮ್‌, ಎಚ್‌.ಸಿ.ಈರಣ್ಣ, ಸಿದ್ದರಾಜು, ರಾಘವೇಂದ್ರ, ರಾಜ್‌ಕುಮಾರ್‌, ಹೊನ್ನೇಶ್‌ ಗೌಡ, ಧರಣೇಶ್‌ ಗೌಡ, ಎಸ್‌.ಜಿ.ಜಗದೀಶ್‌, ರವೀಶ್‌, ವೆಂಕಟೇಶ್‌ ಇದ್ದರು.