ನಗರದ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಅವರು ಶನಿವಾರ ತಡರಾತ್ರಿ ಪ್ರಮುಖ ಜಂಕ್ಷನ್‌ಗಳು, ಚೆಕ್‌ ಪೋಸ್ಟ್‌ಗಳು ಸೇರಿದಂತೆ ನಗರದ ವಿವಿಧೆಡೆ ದಿಢೀರ್‌ ಗಸ್ತು ನಡೆಸಿ ಪರಿಶೀಲನೆ ನಡೆಸಿದರು.

ಬೆಂಗಳೂರು : ನಗರದ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಅವರು ಶನಿವಾರ ತಡರಾತ್ರಿ ಪ್ರಮುಖ ಜಂಕ್ಷನ್‌ಗಳು, ಚೆಕ್‌ ಪೋಸ್ಟ್‌ಗಳು ಸೇರಿದಂತೆ ನಗರದ ವಿವಿಧೆಡೆ ದಿಢೀರ್‌ ಗಸ್ತು ನಡೆಸಿ ಪರಿಶೀಲನೆ ನಡೆಸಿದರು.

ಮೆಜೆಸ್ಟಿಕ್‌ನ ಶಾಂತಲಾ ಜಂಕ್ಷನ್‌, ಚಾಮರಾಜಪೇಟೆಯ ಸಿಸಿಬಿ ಕಚೇರಿ ಜಂಕ್ಷನ್‌, ರಾಜಾಜಿನಗರ, ಯಶವಂತಪುರ ಎಚ್‌ಎಂಟಿ ರಸ್ತೆ ಸೇರಿದಂತೆ ನಗರದ ಕೆಲ ಜಂಕ್ಷನ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್‌ ಮಚೀಂದ್ರ ಅವರು ನಾಕಾಬಂಧಿ ಕಾರ್ಯದ ಬಗ್ಗೆ ಆಯುಕ್ತರಿಗೆ ಮಾಹಿತಿ ನೀಡಿದರು.

ಇದೇ ವೇಳೆ ರಾತ್ರಿ ಗಸ್ತು ಪೊಲೀಸರು, ಚೆಕ್‌ ಪೋಸ್ಟ್‌ಗಳಲ್ಲಿ ಸಿಬ್ಬಂದಿ ಹೇಗೆ ಕಾರ್ಯ ನಿರ್ವಹಿಸುತ್ತಾರೆ ಎಂಬುದರ ಬಗ್ಗೆ ಮಾಹಿತಿ ಪಡೆದರು. ರಾತ್ರಿ ವೇಳೆ ಭದ್ರತೆಗೆ ನಿಯೋಜನೆಯಾಗುವ ಸಿಬ್ಬಂದಿಗೆ ಮಳೆ-ಚಳಿಯಿಂದ ರಕ್ಷಣೆ ಪಡೆಯಲು ಜಾಕೆಟ್‌ ಹಾಗೂ ಛತ್ರಿ ಒದಗಿಸುವಂತೆ ಇನ್ಸ್‌ಪೆಕ್ಟರ್‌ಗಳಿಗೆ ಸೂಚಿಸಿದರು.

ಹೊಯ್ಸಳ ಸಿಬ್ಬಂದಿ ಕೇವಲ ಗಸ್ತು ಕರ್ತವ್ಯ ಮಾತ್ರವಲ್ಲದೇ ಚೆಕ್‌ ಪೋಸ್ಟ್‌ಗಳಲ್ಲಿ ಕಡ್ಡಾಯವಾಗಿ ತಪಾಸಣೆ ನಡೆಸಬೇಕು. 112 ಸಹಾಯವಾಣಿಗೆ ಬರುವ ಕರೆಗಳ ಬಗ್ಗೆ ಕಂಟ್ರೋಲ್ ರೂಮ್‌ನಿಂದ ಬರುವ ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡಬೇಕು. ಬಳಿಕ ಚೆಕ್‌ ಪೋಸ್ಟ್‌ ಪಾಯಿಂಟ್‌ಗೆ ವಾಪಸ್‌ ಆಗಬೇಕು ಎಂದು ಕಳೆದ ವಾರ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ತಡರಾತ್ರಿ ನಗರದ ವಿವಿಧೆಡೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು.

ಸಿಬ್ಬಂದಿ ಕಷ್ಟಪಟ್ಟು ಕೆಲಸ:

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸೀಮಂತ್‌ ಕುಮಾರ್‌ ಸಿಂಗ್‌, ಡಿಸಿಪಿಗಳೊಂದಿಗೆ ಪ್ರತಿ ವಿಭಾಗಕ್ಕೂ ಭೇಟಿ ನೀಡಿ ಪರಿಶೀಲಿಸುತ್ತಿದ್ದೇನೆ. ನಾಕಾಬಂಧಿ ಹೇಗಿದೆ? ಇನ್ನೂ ಹೆಚ್ಚಿನ ಭದ್ರತೆ ಹೇಗೆ ಒದಗಿಸಬಹುದು ಎಂಬುದರ ಬಗ್ಗೆ ಪರಿಶೀಲಿಸಿದ್ದೇನೆ. ನಮ್ಮ ಪೊಲೀಸ್ ಸಿಬ್ಬಂದಿ ಕೂಡ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಮಳೆ ಇದ್ದರೂ ನಿಂತು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಹೊಯ್ಸಳ ಗಸ್ತು ಪರಿಣಾಮಕಾರಿ:

ಯಾವುದೇ ಅಹಿತಕರ ಘಟನೆ ಆಗಬಾರದು. ಇದೇ ಕಾರಣಕ್ಕೆ ಬೇರೆ ಬೇರೆ ಕಡೆ ನಾಕಾಬಂಧಿ ಹಾಕಿ ತಪಾಸಣೆ ಮಾಡಲಾಗುತ್ತಿದೆ. ಹೊಯ್ಸಳ ವಾಹನಗಳನ್ನು ರಾತ್ರಿ ರೌಂಡ್ಸ್‌ಗೂ ಬಳಕೆ ಮಾಡುತ್ತಿದ್ದೇವೆ. ನಗರದಲ್ಲಿ 243ಕ್ಕೂ ಹೆಚ್ಚು ಹೊಯ್ಸಳ ಗಸ್ತು ವಾಹನಗಳಿವೆ. ಕಳೆದ ವಾರದಿಂದ ಹೊಯ್ಸಳ ಗಸ್ತು ವಾಹನ ಸಿಬ್ಬಂದಿ ಪೋಸ್ಟ್‌ಗಳಲ್ಲಿ ಕೂಡ ನಾಕಾಬಂಧಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲಿದ್ದೇವೆ ಎಂದು ಸೀಮಂತ್‌ ಕುಮಾರ್‌ ಸಿಂಗ್‌ ತಿಳಿಸಿದರು.