ವಿಜಯಪುರ: ಮಣ್ಣಲ್ಲಿ ಮಣ್ಣಾದ ಸಿಂದಗಿ ಶಾಸಕ ಮನಗೂಳಿ
ವೀರಶೈವ ಲಿಂಗಾಯತ ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ| ಅನೇಕ ಗಣ್ಯರು ಭಾಗಿ| ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಅಂತಿಮ ವಿಧಾನ|
ಸಿಂದಗಿ(ಜ.30): ಅನಾರೋಗ್ಯದಿಂದ ಗುರುವಾರ ನಿಧನರಾದ ಹಿರಿಯ ಸಮಾಜವಾದಿ ಮುಖಂಡ, ಮಾಜಿ ಸಚಿವ, ಸಿಂದಗಿ ಶಾಸಕ ಎಂ.ಸಿ.ಮನಗೂಳಿ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವ, ವೀರಶೈವ ಲಿಂಗಾಯತ ವಿಧಿ ವಿಧಾನಗಳೊಂದಿಗೆ ಪಟ್ಟಣದ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ 3.30ರ ಸುಮಾರಿಗೆ ನೆರವೇರಿತು. ಪೊಲೀಸರು ಮೂರು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ವಂದನೆ ಸಲ್ಲಿಸಿದ್ದಾರೆ.
ಬೆಂಗಳೂರಿನಿಂದ ಪಟ್ಟಣಕ್ಕೆ ಬಂದ ಶಾಸಕ ಎಂ.ಸಿ.ಮನಗೂಳಿ ಅವರ ಪಾರ್ಥಿವ ಶರೀರದ ಮೆರವಣಿಗೆ ಮಾಡಿ ಎಚ್.ಜಿ.ಪದವಿ ಕಾಲೇಜು ಮೈದಾನಕ್ಕೆ ತರಲಾಯಿತು. ಅಲ್ಲಿಯೇ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಸಿಂದಗಿ ಕ್ಷೇತ್ರದ ಹಿರಿಯ ಶಾಸಕ ಎಂ. ಸಿ. ಮನಗೂಳಿ ಇನ್ನಿಲ್ಲ!
ಭಾರೀ ಮೆರವಣಿಗೆ:
ಶಾಸಕರ ನಿಧನದ ಹಿನ್ನೆಲೆಯಲ್ಲಿ ಇಡೀ ಸಿಂದಗಿಯೇ ಮೌನವಾಗಿತ್ತು. ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳು ಬಂದಾಗಿದ್ದವು. ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. 50 ಸಾವಿರಕ್ಕೂ ಅಧಿಕ ಜನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಎಚ್.ಜಿ.ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿರುವ ನುಡಿನಮನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಜನಪ್ರತಿನಿಧಿಗಳು ಶಾಸಕ ಎಂ.ಸಿ.ಮನಗೂಳಿ ಅವರಿಗೆ ಅಂತಿಮ ನಮನ ಸಲ್ಲಿಸಿ ಭಾವುಕರಾದರು.
ಗಣ್ಯರು ಭಾಗಿ:
ಈ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಾಜಿ ಸಚಿವ, ಶಾಸಕ ಎಚ್.ಕೆ.ಪಾಟೀಲ, ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಎಚ್.ಡಿ. ರೇವಣ್ಣ, ಎಂ.ಬಿ.ಪಾಟೀಲ, ಈಶ್ವರ ಖಂಡ್ರೆ, ಯಶವಂತರಾಯಗೌಡ ಪಾಟೀಲ, ಶಿವಾನಂದ ಪಾಟೀಲ, ಎ.ಎಸ್.ಪಾಟೀಲ ನಡಹಳ್ಳಿ, ಬಸನಗೌಡ ಪಾಟೀಲ ಯತ್ನಾಳ, ಎಂ.ವೈ.ಪಾಟೀಲ, ಡಾ.ಅಜಯಸಿಂಗ್ ಅಂತಿಮ ದರ್ಶನ ಪಡೆದರು. ಹರಿಹರ ಪೀಠದ ಪಂಚಮಸಾಲಿ ಜಗದ್ಗುರು ವಚನಾನಂದ ಶ್ರೀಗಳು, ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಮನಗೂಳಿ ಶ್ರೀ, ಬೋರಗಿಯ ತಪೋರತ್ನಂ ಮಹಾಲಿಂಗೇಶ್ವರ ಶ್ರೀ, ಯರನಾಳ, ಕಡಕೋಳ, ನಾಲವಾರ, ಯಂಕಂಚಿ, ಕನ್ನೊಳ್ಳಿ, ರಾಂಪೂರ, ಆಲಮೇಲ, ಸೋಮಜಾಳ, ಕುಂಟೋಜಿ, ಗೋಲಗೇರಿ ಶ್ರೀ ಸೇರಿದಂತೆ ನಾಡಿನ ಅನೇಕ ಹರಗುರು ಚರಮೂರ್ತಿಗಳು ಮಾತನಾಡಿದರು.