ಗದಗ ನಗರದಲ್ಲೂ ಭೂ ಕುಸಿತ: ಆತಂಕದಲ್ಲಿ ಜನತೆ..!

ಗದಗ ನಗರದ ವೀರನಾರಾಯಣ ಗುಡಿ ಬಳಿ ಶಾಲೆ ಕಾಂಪೌಂಡ್‌ನಲ್ಲಿ ಕುಸಿತ ಭೂಮಿ| ಶಾಲೆಗೆ ರಜೆ ಇದ್ದುದರಿಂದ ತಪ್ಪಿದ ಅನಾಹುತ| ನರಗುಂದದ ಬಳಿಕ ಈಗ ಗದಗಿನಲ್ಲೂ ಆತಂಕ| 

Landslide in Gadag City

ಗದಗ(ಆ.30): ಕಳೆದ ಒಂದು ವರ್ಷದಿಂದ ಜಿಲ್ಲೆಯ ನರಗುಂದದಲ್ಲಿ ಸತತವಾಗಿ ಆತಂಕ ಸೃಷ್ಟಿಸಿದ್ದ ‘ನಿಗೂಢ ಭೂಕುಸಿತ’ ಇದೀಗ ಜಿಲ್ಲಾ ಕೇಂದ್ರ ಗದಗ ನಗರಕ್ಕೂ ಕಾಲಿಟ್ಟಿದ್ದು, ಇಲ್ಲಿಯ ಪ್ರಸಿದ್ಧ ವೀರನಾರಾಯಣ ದೇವಸ್ಥಾನದ ಸಮೀಪದಲ್ಲಿರುವ ಹೆಣ್ಣುಮಕ್ಕಳ ಸರ್ಕಾರಿ ಶಾಲೆ ನಂ. 2ರ ಕಾಂಪೌಂಡ್‌ ಆವರಣದಲ್ಲಿ ಭೂಮಿ ಕುಸಿದಿದ್ದು ಶಾಲೆಗಳಿಗೆ ರಜೆ ಇರುವುದರಿಂದ ಯಾವುದೇ ಅನಾಹುತ ಸಂಭವಿಸಲಿಲ್ಲ.

ಶಾಲೆಯ ಆವರಣದಲ್ಲಿ ಪೇವ​ರ್ಸ್ ಜೋಡಿಸಿದ್ದು ಅದರ ಕೆಳಗಡೆಯೇ 8ರಿಂದ 10 ಅಡಿ ಆಳಕ್ಕೆ ಭೂಮಿ ಕುಸಿದಿದ್ದು ದೊಡ್ಡ ಆತಂಕಕ್ಕೆ ಕಾರಣವಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಶಾಲಾ ತರಗತಿಗಳು ಪ್ರಾರಂಭವಾಗಿಲ್ಲ. ಹೀಗಾಗಿ ಯಾವುದೇ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಶಾಲಾ ಶಿಕ್ಷಕರು ಮತ್ತು ಸಾರ್ವಜನಿಕರು ಗಮನಿಸಿ ನಗರಸಭೆಗೆ ಮಾಹಿತಿ ನೀಡಿದ್ದಾರೆ.

ನರಗುಂದದಲ್ಲಿ ಮತ್ತೆ ಭೂ ಕುಸಿತ: ಭಯಭೀತರಾದ ಜನ

Landslide in Gadag City

ಅಂತರ್ಜಲ ಹೆಚ್ಚಳ ಕಾರಣವಾಯ್ತೆ?

ಕಳೆದೆರಡು ವರ್ಷಗಳಿಂದ ಉತ್ತಮ ಮಳೆ ಸುರಿಯುತ್ತಿದೆ. ಗದಗ ನಗರದ ಹೃದಯ ಭಾಗದಲ್ಲಿರುವ ಭೀಷ್ಮ ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಅಂತರ್ಜಲ ಹೆಚ್ಚಳದಿಂದಾಗಿ ಗದಗ ಬೆಟಗೇರಿ ಅವಳಿ ನಗರದ ಸಾವಿರಾರು ಕೊಳವೆ ಬಾವಿಗಳು ರಿಚಾರ್ಜ್‌ ಆಗಿವೆ. ಮಳೆ ಬಂದಲ್ಲಿ ಅವಳಿ ನಗರದ ಕಟ್ಟಡಗಳ ಗ್ರೌಂಡ್‌ ಫೆಲೕರ್‌, ಬೇಸ್‌ಮೆಂಟ್‌ಗಳಲ್ಲಿ ನೀರು ತುಂಬುತ್ತಿದ್ದು, ಮೋಟರ್‌ ಅಳವಡಿಸಿ, ನೀರನ್ನು ಹೊರ ಹಾಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ಭೂ ಕುಸಿತವಾಗಿರುವ ಸ್ಥಳದ ಸುತ್ತಮುತ್ತಲ ಕೂಡಾ ಈಗಾಗಲೇ ಅಂತರ್ಜಲ ಹೆಚ್ಚಳದ ಪ್ರಕರಣಗಳು ವರದಿಯಾಗಿದ್ದು, ಈಗ ಭೂ ಕುಸಿತವಾಗಿದ್ದು ಗದಗ ನಗರದಲ್ಲಿಯೂ ಅಂತರ್ಜಲ ಹೆಚ್ಚಳ ಸಮಸ್ಯೆಗೆ ಕಾರಣವಾಗುತ್ತಿದೆ ಎನ್ನುವ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ನರಗುಂದದಲ್ಲೂ ಆತಂಕ

ನರಗುಂದ ತಾಲೂಕು ಕಳೆದೆರಡು ವರ್ಷಗಳಿಂದ ಪ್ರವಾಹ ಎದುರಿಸುತ್ತಿವೆ. ಮಲಪ್ರಭಾ, ಬೆಣ್ಣಿಹಳ್ಳದ ನೀರು ನರಗುಂದ ಹಾಗೂ ರೋಣ ತಾಲೂಕನ 32 ಗ್ರಾಮಗಳಲ್ಲಿ ಸದಾ ಪ್ರವಾಹದ ಆತಂಕ ತಂದಿಡುತ್ತಿದೆ. ಕಳೆದ ಒಂದು ವರ್ಷದಿಂದಲೇ ಇಲ್ಲಿ ಭೂಕುಸಿತದ ಸರಣಿ ಪ್ರಕರಣಗಳು ವರದಿಯಾಗಿವೆ. ಪಟ್ಟಣದಲ್ಲಿ 70ಕ್ಕೂ ಹೆಚ್ಚು ಮನೆಗಳು ಕುಸಿತವಾಗಿದ್ದು, ಇನ್ನೂ ಮನೆಗಳು ಕುಸಿಯುತ್ತಲೇ ಇವೆ. ಇದಕ್ಕೆ ಮುಖ್ಯ ಕಾರಣ, ಅತಿಯಾದ ಮಳೆಯಿಂದಾಗಿ ಅಂತರ್ಜಲ ಹೆಚ್ಚಳವಾಗಿರುವುದು. ಜನರ ಆಹಾರ ಧಾನ್ಯಗಳನ್ನು ಸಂಗ್ರಹಿಸಲು ಈ ಹಿಂದೆ ಹಗೇವುಗಳನ್ನು ಬಳಸುತ್ತಿದ್ದರು. ಈಗ ಅದೇ ಹಗೇವು ಇರುವ ಸ್ಥಳಗಳಲ್ಲಿ ಅಂತರ್ಜಲ ಹೆಚ್ಚಳವಾಗಿ ಕುಸಿಯುತ್ತಿರುವುದು ದೊಡ್ಡ ಆತಂಕಕ್ಕೆ ಕಾರಣವಾಗಿದೆ.
ಶಾಲಾ ಆವರಣದಲ್ಲಿಯೇ ಭೂಕುಸಿತವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಬಗ್ಗೆ ನಗರಸಭೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು ಎಂದು ಮುತ್ತಣ್ಣ ಭರಡಿ ಎಂಬುವರು ಹೇಳಿದ್ದಾರೆ.
 

Latest Videos
Follow Us:
Download App:
  • android
  • ios