ನರಗುಂದ(ಜು.03): ಪಟ್ಟಣದ ಶಂಕರಲಿಂಗ ದೇವಸ್ಥಾನದ ಹತ್ತಿರದ ಪೇಟೆವರ ಓಣಿಯ ನಿವಾಸ ಜಂಬಣ್ಣ ಪೇಟೆ ಅವರ ಮನೆ ಮುಂದೆ ಗುರುವಾರ ಬೆಳಗ್ಗೆ ಭಾರಿ ಕುಸಿತ ಸಂಭವಿಸಿದೆ. ಸುಮಾರು 16 ಅಡಿ ಆಳದ ಗುಂಡಿ ಬಿದ್ದಿದೆ. ಆ ಸಂದರ್ಭದಲ್ಲಿ ಅಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಯಾವುದೇ ಅಪಾಯ ಸಂಭವಿಸಿಲ್ಲ.

ಕಳೆದ 11 ತಿಂಗಳುಗಳಿಂದ ನಗರದ ದಂಡಾಪುರ, ಲೋದಿ ಗಲ್ಲಿ, ಸಿದ್ದನಬಾವಿ ಓಣಿ, ಬಾಬಾಸಾಹೇಬರ ಅರಮನೆ ಸುತ್ತಮುತ್ತ ಹಿತ್ತಲು ಹಾಗೂ ಮನೆ ಸಮೀಪವೇ ಪದೇ ಪದೇ ಭೂ ಕುಸಿತವಾಗುತ್ತಿದೆ.ಈ ಭೂ ಕುಸಿತಕ್ಕೆ ನಿಖರ ಕಾರಣ ಕಂಡು ಹಿಡಿಯಲು ಇಂದಿಗೂ ಸಾಧ್ಯವಾಗಿಲ್ಲ. ಕಳೆದ ವರ್ಷ ಆಗಸ್ಟ್‌ ತಿಂಗಳಲ್ಲಿ ಈ ಭಾಗದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದ ಹಿನ್ನೆಲೆಯಲ್ಲಿ ಭೂ ಕುಸಿತವಾಗುತ್ತಿರಬಹುದು ಎಂದು ಅಂದಾಜಿಸಲಾಗಿದೆ.

ನರಗುಂದದಲ್ಲಿ ನಿಲ್ಲದ ಭೂಕುಸಿತ: ಗುಂಡಿಯಲ್ಲಿ ಸಿಲುಕಿದ್ದ ಎತ್ತು

ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ್‌ ಅವರು ಈಗಾಗಲೇ ಬೆಂಗಳೂರು, ಕೊಪ್ಪಳ, ಗದಗ ಜಿಲ್ಲೆಗಳಿಂದ ಜಲ ತಜ್ಞರನ್ನು ಕರೆಸಿ ಭೂ ಕುಸಿತಕ್ಕೆ ನಿಖರ ಕಾರಣ ಕಂಡುಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ.
ಭೂ ಕುಸಿತವಾಗಿರುವ ವಿಷಯ ತಿಳಿದು ಪುರಸಭೆ ಅಧಿಕಾರಿ ಸಂಗಮೇಶ ಬ್ಯಾಳಿ ಅವರು ಭೂ ಕುಸಿತವಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ, ಭೂ ಕುಸಿತವಾಗಿರುವ ತೆಗ್ಗುನ್ನು ಮುಚ್ಚಲು ಪುರಸಭೆ ಸಿಬ್ಬಂದಿಗೆ ಸೂಚನೆ ನೀಡಿದರು.