ಮಲೆನಾಡಿನಲ್ಲಿ ಮಳೆಯಬ್ಬರ, ಭೂಕುಸಿತ
ಮಲೆನಾಡಿನಲ್ಲಿ ಮಳೆಯಬ್ಬರ ಜೋರಾಗಿದೆ. ಶನಿವಾರ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ಬಿಡುವಿಲ್ಲದೆ ಮಳೆ ಸುರಿದಿದೆ. ಮೂಡಿಗೆರೆ ತಾಲೂಕಿನ ಆಲೆಖಾನ್ ರಸ್ತೆಯಲ್ಲಿ ಭೂ ಕುಸಿತ ಉಂಟಾಗಿತ್ತು. ಜೆಸಿಬಿ ಮೂಲಕ ರಸ್ತೆಗೆ ಬಿದ್ದ ಮಣ್ಣನ್ನು ತೆರವುಗೊಳಿಸಲಾಗಿದೆ.
ಚಿಕ್ಕಮಗಳೂರು(ಆ.04): ಜಿಲ್ಲೆಯ ಮಲೆನಾಡಿನ ಕೆಲವೆಡೆ ಶನಿವಾರ ಮಳೆ ಚುರುಕುಗೊಂಡಿದ್ದು, ಮೂಡಿಗೆರೆ ತಾಲೂಕಿನ ಆಲೆಖಾನ್ ರಸ್ತೆಯಲ್ಲಿ ಭೂ ಕುಸಿತ ಉಂಟಾಗಿತ್ತು. ಮೂಡಿಗೆರೆ ಹಾಗೂ ಶೃಂಗೇರಿ ತಾಲೂಕುಗಳಲ್ಲಿ ಶುಕ್ರವಾರ ರಾತ್ರಿಯಿಂದ ಬಿಡುವಿಲ್ಲದೆ ಮಳೆ ಸುರಿಯುತ್ತಿದ್ದು, ಶನಿವಾರವೂ ಮುಂದುವರಿದಿತ್ತು.
ಭೂಕುಸಿತ:
ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳ ಉಗಮ ಸ್ಥಾನವಾಗಿರುವ ಮೂಡಿಗೆರೆ ತಾಲೂಕಿನಲ್ಲಿ ಮಳೆ ಬರುತ್ತಿದ್ದು, ಕೊಟ್ಟಿಗೆಹಾರ ಸುತ್ತಮುತ್ತ ನಿರಂತರವಾಗಿ ಮಳೆ ಸುರಿಯುತ್ತಿದೆ. ಕೊಟ್ಟಿಗೆಹಾರದಿಂದ ಸುಮಾರು 3 ಕಿ.ಮೀ. ದೂರದಲ್ಲಿರುವ ಆಲೆಖಾನ್- ಹೊರಟ್ಟಿರಸ್ತೆಯಲ್ಲಿ ಶುಕ್ರವಾರ ರಾತ್ರಿ ಬಂಡೆ ಸಹಿತ ಮಣ್ಣು ಕುಸಿದಿತ್ತು. ಶನಿವಾರ ಬೆಳಗ್ಗೆ ಜೆಸಿಬಿ ಯಂತ್ರಗಳಿಂದ ಮಣ್ಣನ್ನು ತೆರವುಗೊಳಿಸಲಾಯಿತು. ಈ ಭಾಗದಲ್ಲಿ ಮಳೆ ಮುಂದುವರಿದಿತ್ತು.
ಕೆಲವು ತಾಲೂಕುಗಳಲ್ಲಿ ಮೋಡ ಕವಿದ ವಾತಾವರಣ:
ಮೂಡಿಗೆರೆ, ಶೃಂಗೇರಿ ತಾಲೂಕುಗಳಲ್ಲಿ ಮಳೆ ಹೀಗೆಯೇ ಮುಂದುವರಿದರೆ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ನೀರಿನ ಮಟ್ಟಏರಿಕೆಯಾಗಿ, ಜಲಾಶಯಗಳಲ್ಲಿ ಒಳ ಹರಿವು ಹೆಚ್ಚಳವಾಗಲಿದೆ. ಮಲೆನಾಡಿನಲ್ಲಿ ಕೆಲವು ದಿನಗಳಿಂದ ಮಳೆ ಪೂರ್ಣ ಪ್ರಮಾಣದಲ್ಲಿ ಇಳಿಮುಖವಾಗಿತ್ತು. ಆದರೆ, ಮೋಡ ಕವಿದ ವಾತಾವರಣ ಮುಂದುವರಿದಿತ್ತು. ಕಳೆದ ಮೂರು ದಿನಗಳಿಂದ ಹವಾಗುಣದಲ್ಲಿ ವ್ಯತ್ಯಯ ಉಂಟಾಗಿದೆ. ಬಲವಾಗಿ ಶೀತ ಗಾಳಿ ಬೀಸುತ್ತಿದೆ. ಇದರಿಂದ ಹಲವು ಮಂದಿಗಳ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.
ಅಪಾಯದ ಮಟ್ಟ ಮೀರಿದ್ದಾಳೆ ಕೃಷ್ಣೆ; ಎದುರಾಗಿದೆ ಪ್ರವಾಹದ ಭೀತಿ?
ಕೊಪ್ಪ, ಎನ್.ಆರ್.ಪುರ ಹಾಗೂ ಚಿಕ್ಕಮಗಳೂರು ತಾಲೂಕುಗಳಲ್ಲಿ ಆಗಾಗ ತುಂತುರು ಮಳೆ ಬಂದು ಹೋಗುತ್ತಿದೆ. ಇನ್ನುಳಿದಂತೆ ಮೋಡ ಕವಿದಿದೆ. ಕಡೂರು ಮತ್ತು ತರೀಕೆರೆ ತಾಲೂಕುಗಳಲ್ಲೂ ಇದೇ ವಾತಾವರಣ ಮುಂದುವರೆದಿದೆ.
ಎಲ್ಲೆಲ್ಲಿ ಎಷ್ಟೆಷ್ಟು ಮಳೆ:
ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದಿರುವ ಮಳೆಯ ವಿವರ ಇಂದಿದೆ. ಚಿಕ್ಕಮಗಳೂರು ನಗರ 2 ಮಿ.ಮೀ., ಆಲ್ದೂರು- 11, ಸಂಗಮೇಶ್ವರಪೇಟೆ- 2, ಕೊಪ್ಪ- 17, ಹರಿಹರಪುರ- 30, ಮೇಗರಮಕ್ಕಿ- 11, ಮೂಡಿಗೆರೆ ಹೋಬಳಿ- 62, ಬಣಕಲ್ ಹೋಬಳಿ- 90, ಗೋಣಿಬೀಡು- 64, ಕಳಸ- 18, ಜಾವಳಿ- 34, ಎನ್.ಆರ್.ಪುರ- 6, ಶೃಂಗೇರಿ- 18, ಕಿಗ್ಗಾದಲ್ಲಿ 22 ಮಿ.ಮೀ. ಮಳೆಯಾಗಿದೆ.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ