Tumakur : ಸೇಂದಿ ವನ ಉಳುಮೆ ಮಾಡುವ ರೈತರಿಗೆ ಜಮೀನು
ಸೇಂದಿ ವನದಲ್ಲಿ ಉಳುಮೆ ಮಾಡುತ್ತಿರುವ ರೈತರು ಅರ್ಜಿ ಸಲ್ಲಿಸಿದ್ದಲ್ಲಿ ಅವರಿಗೆ ಜಮೀನು ಮಂಜೂರು ಮಾಡುವ ಯೋಜನೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ತುಮಕೂರು : ಸೇಂದಿ ವನದಲ್ಲಿ ಉಳುಮೆ ಮಾಡುತ್ತಿರುವ ರೈತರು ಅರ್ಜಿ ಸಲ್ಲಿಸಿದ್ದಲ್ಲಿ ಅವರಿಗೆ ಜಮೀನು ಮಂಜೂರು ಮಾಡುವ ಯೋಜನೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ನಗರದ ಗಾಜಿನ ಮನೆ ಆವರಣದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಹಾಗೂ 2023ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾಫಿ ಬೆಳೆಗಾರರಿಗೆ 1 ಲಕ್ಷ ಎಕರೆ ಜಮೀನನ್ನು ಮೂವತ್ತು ವರ್ಷಗಳಿಗೆ ಗುತ್ತಿಗೆ ನೀಡುವ ಸಂಬಂಧ ಕಾಯ್ದೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದ್ದು, ಈ ಸಂಬಂಧ ಬೆಳಗಾವಿ ಅಧಿವೇಶನದಲ್ಲಿ ಕಾಯ್ದೆ ಮಂಡಿಸಲಾಗುವುದು. ಸರ್ಕಾರ ರೂಪಿಸುವ ಯೋಜನೆಗಳನ್ನು ಪಾರದರ್ಶಕವಾಗಿ ಜನರ ಮನೆ ಬಾಗಿಲಿದೆ ಕೊಂಡೊಯ್ಯುವ ಕೆಲಸವನ್ನು ಗ್ರಾಮ ಆಡಳಿತ ಅಧಿಕಾರಿಗಳು ಮಾಡಬೇಕು. ಗ್ರಾಮಲೆಕ್ಕಾಧಿಕಾರಿಯ ಬದಲಾಗಿ ಗ್ರಾಮ ಆಡಳಿತ ಅಧಿಕಾರಿ ಪದನಾಮ ಬದಲಾವಣೆಗೆ ಅಂಕಿತ ಹಾಕಲಾಗಿದೆ ಎಂದರು.
ರೈತರ ಮಕ್ಕಳೂ ಸಹ ಡಾಕ್ಟರ್, ಎಂಜಿನಿಯರ್,ಲಾಯರ್ ಆಗಬೇಕು ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ರೈತ ವಿದ್ಯಾನಿಧಿ ಎಂಬ ರೈತರ ಮಕ್ಕಳಿಗೆ ಸಹಾಯಧನ ನೀಡುವ ಯೋಜನೆ ಜಾರಿಗೆ ತಂದಿದೆ. ನಮ್ಮ ಸರ್ಕಾರ ಜಾರಿಗೆ ತಂದಿರುವ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ‍್ಯಕ್ರಮ ಬಹಳ ಜನಪ್ರಿಯವಾಗಿದ್ದು, ಲಕ್ಷಾಂತರ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳ ಸವಲತ್ತುಗಳನ್ನು ಒದಗಿಸುವ ಈ ಕಾರ‍್ಯಕ್ರಮದಿಂದಾಗಿ ಜನರು ಸರ್ಕಾರಿ ಅಧಿಕಾರಿಗಳನ್ನು ಪ್ರೀತಿಯಿಂದ ಕಾಣುವಂತೆ ಮಾಡಿದೆ ಎಂದರು.
ಮುಂದಿನ ದಿನಗಳಲ್ಲಿ ನೀವು ನೀಡಿರುವ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇವೆ ಎಂದು ಆರ್.ಅಶೋಕ್ ಗ್ರಾಮ ಆಡಳಿತ ಅಧಿಕಾರಿಗಳ ಸಂಘಕ್ಕೆ ಭರವಸೆ ನೀಡಿದ ಅವರು ಮುಂದಿನ 2023ರ ಬಜೆಟ್ ಮತ್ತಷ್ಟಜನಪರವಾಗಲಿದೆ ಎಂದು ಆರ್.ಅಶೋಕ್ ನುಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಸರ್ಕಾರಿ ನೌಕರರ ಮನವಿ ಸಲ್ಲಿಸಿದ ಒಂದು ತಿಂಗಳ ಒಳಗೆ 7ನೇ ವೇತನ ಪರಿಷ್ಕರಣೆ ಆಯೋಗ ನೇಮಕ ಮಾಡಿದ ಯಾವುದಾದರೂ ಸರ್ಕಾರವಿದ್ದರೆ ಅದು ಬಸವರಾಜ ಬೊಮ್ಮಾಯಿಯವರ ಸರ್ಕಾರ ಎಂದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಕರ್ನಾಟಕ ರಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ದೇವರಾಜು ಮಾತನಾಡಿದರು. ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಕೇಂದ್ರ ಸಂಘದ ಅಧ್ಯಕ್ಷ ಬಿ.ದೊಡ್ಡಬಸಪ್ಪರೆಡ್ಡಿ ವಹಿಸಿದ್ದರು. ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಡಾ.ಸಿ.ಎಂ.ರಾಜೇಶಗೌಡ, ಸಂಘದ ಗೌರವಾಧ್ಯಕ್ಷ ಎನ್.ರವಿಮಾರ್, ಉಪಾಧ್ಯಕ್ಷ ಯಮನೂರ, ಪ್ರಧಾನ ಕಾರ್ಯದರ್ಶಿ ಭಕ್ತವತ್ಸಲ, ಖಜಾಂಚಿ ಎಚ್.ಜೆ.ಮೋಹನ್‌ಕುಮಾರ್, ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಎಲ್, ಸಹ ಕಾರ್ಯದರ್ಶಿ ವಿ.ರಾಘವೇಂದ್ರಸ್ವಾಮಿ, ಸಂಘಟನಾ ಕಾರ್ಯದರ್ಶಿ ಭಾನುಪ್ರಕಾಶ್ ಸೇರಿದಂತೆ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮೊದಲು ಸಚಿವ ಆರ್.ಅಶೋಕ್ ಗೋಪೂಜೆ ನೆರವೇರಿಸಿ, ಗೋವಿಗೆ ಬೆಲ್ಲ, ಬಾಳೆಹಣ್ಣು ತಿನ್ನಿಸಿದರು.
ಬೆಳೆ ಹಾನಿ ಪರಿಹಾರವಾಗಿ 988 ಕೋಟಿ ಬಿಡುಗಡೆ
ತುಮಕೂರು ಜಿಲ್ಲೆಗೆ ಬೆಳೆ ಹಾನಿ ಪರಿಹಾರವಾಗಿ ಇನ್‌ಪುಟ್ ಸಬ್ಸಿಡಿಯನ್ನಾಗಿ 11,165 ರೈತರಿಗೆ 988 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ನೀವು ನೀಡುವ ಸೇವೆಯಿಂದ ಜನರ ಬಾಯಲ್ಲಿ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ ಎಂಬ ಹೆಸರು ಬರುವಂತಾಗಬೇಕು.ಆಗ ನಿಮ್ಮ ಪದನಾಮ ಬದಲಾಗಿದ್ದಕ್ಕೂ ಸಾರ್ಥಕವಾಗುತ್ತದೆ. ನಮ್ಮ ಸರ್ಕಾರ ಅನೇಕ ಜನರ ಪರ ಯೋಜನಗಳನ್ನು ರೂಪಿಸುತ್ತಾ ಬಂದಿದೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ, 72 ಗಂಟೆಗಳಲ್ಲಿ ಪಿಂಚಿಣಿ ಸೌಲಭ್ಯ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಸಚಿವ ಅಶೋಕ್ ಹೇಳಿದರು. ಇವುಗಳು ಸಮರ್ಪಕವಾಗಿ ಜನರ ಬಾಗಿಲಿಗೆ ಮುಟ್ಟಿದರೆ ಅದಕ್ಕಿಂತ ಉತ್ತಮ ಕಾರ್ಯ ಮತ್ತೊಂದಿಲ್ಲ. ಕೇವಲ ಯೋಜನೆಗಳಿಂದ ಉಪಯೋಗವಾಗುವುದಿಲ್ಲ. ಯೋಜನೆಗಳ ಜನರ ಮನೆ ಬಾಗಿಲಿಗೆ ಮುಟ್ಟಬೇಕು. ಈ ನಿಟ್ಟಿನಲ್ಲಿ ಜನರು ಮತ್ತು ಸರ್ಕಾರದ ನಡುವೆ ಕೊಂಡಿಯಾಗಿರುವ ಅಧಿಕಾರಿಗಳು ಮತ್ತಷ್ಟುಪಾರದರ್ಶಕವಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ. ಈಗಾಗಲೇ ವೃಂದ ನೇಮಕಾತಿಗೆ ತಿದ್ದುಪಡಿ ತರಲಾಗಿದೆ ಎಂದರು.