ಬೆಂಗಳೂರು(ಸೆ.27): ಬಿಡಿಎ ವ್ಯಾಪ್ತಿಯಲ್ಲಿರುವ ಆದರೆ ಬಿಡಿಎ ಮಂಜೂರಾತಿ ನೀಡದ ಕಟ್ಟಡ, ಮನೆಗಳನ್ನು ಸಕ್ರಮಗೊಳಿಸುವ ಉದ್ದೇಶದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕಕ್ಕೆ ವಿಧಾನ ಪರಿಷತ್‌ ಒಪ್ಪಿಗೆ ಸೂಚಿಸಿದೆ. ಈ ಮೂಲಕ ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ ಸುಮಾರು 70,000 ಕ್ಕೂ ಹೆಚ್ಚು ಕಟ್ಟಡ, ಮನೆಗಳಿಗೆ ಸಕ್ರಮಗೊಳ್ಳುವ ಅವಕಾಶ ಲಭಿಸಿದೆ.

ಮೂಲ ಕಾಯ್ದೆಗೆ 38 ಡಿಯನ್ನು ಸೇರ್ಪಡೆ ಮಾಡಿರುವ ಸರ್ಕಾರವು ಮೂಲ ಮಾಲಿಕ ಅಥವಾ ಖರೀದಿದಾರ ಅಥವಾ ಅನಧಿಕೃತ ಅಧಿಭೋಗದಾರನಿಗೆ ಬಿಡಿಎಯು ದಂಡ ವಿಧಿಸಿ ತನ್ನ ಭೂಮಿಯನ್ನು ಹಂಚಲಿದೆ. 2020ರ ಹೊತ್ತಿಗೆ ಕನಿಷ್ಠ ಪಕ್ಷ 12 ವರ್ಷಗಳಾಗಿರುವ ಮನೆ, ಕಟ್ಟಡಗಳಿಗೆ ಈ ಯೋಜನೆ ಅನ್ವಯಿಸಲಿದೆ. ಖಾಲಿ ನಿವೇಶನಗಳಿಗೆ ಯೋಜನೆ ಅನ್ವಯಿಸದು.

12 ವರ್ಷಗಳಿಂದ ಕಟ್ಟಡ ಅಸ್ತಿತ್ವದಲ್ಲಿದ್ದು ಅದರ ಸ್ವಾಧೀನತೆಯ ಬಗ್ಗೆ ಯಾವುದೇ ಗೊಂದಲಗಳಿರಬಾರದು. ಕಟ್ಟಡ ಇದ್ದಿದ್ದಕ್ಕೆ ಅಗತ್ಯವಾದ ಸೂಕ್ತ ದಾಖಲೆ (ಕ್ರಯ ಪತ್ರ, ಅನುಮೋದಿತ ನಕ್ಷೆ, ಕಟ್ಟಡ ಕಟ್ಟಲು ನೀಡಲಾಗಿದ್ದ ಅನುಮತಿ, ವಿದ್ಯುತ್‌ ಬಿಲ್‌, ಆಸ್ತಿ ತೆರಿಗೆ ರಸೀತಿ) ಗಳನ್ನು ಸಲ್ಲಿಸಿದರೆ ಅಕ್ರಮ ಸಕ್ರಮಗೊಳ್ಳಲಿದೆ.

ನಕಲಿ ದಾಖಲೆ: ಬಿಡಿಎ ಅಧಿಕಾರಿಗಳು ಸೇರಿ 11 ಆರೋಪಿಗಳ ವಿರುದ್ಧ FIR

20/30 ಅಡಿ ವಿಸ್ತೀರ್ಣದ ಕಟ್ಟಡಗಳಿಗೆ ಪ್ರಸ್ತುತ ಮಾರ್ಗಸೂಚಿ ಮೌಲ್ಯದ ಶೇ.0, 30/40 ಅಡಿ ವಿಸ್ತೀರ್ಣದೊಳಗಿನ ಕಟ್ಟಡಗಳಿಗೆ ಮಾರ್ಗಸೂಚಿ ಮೌಲ್ಯದ ಶೇ.25, 40/60 ಅಡಿ ವಿಸ್ತೀರ್ಣದೊಳಗಿನ ಕಟ್ಟಡಗÜಳಿಗೆ ಮಾರ್ಗಸೂಚಿ ಮೌಲ್ಯದ ಶೇ.40, 50/80 ಅಡಿ ವಿಸ್ತೀರ್ಣದ ಕಟ್ಟಡಗಳಿಗೆ ಮಾರ್ಗಸೂಚಿ ದರದ ಶೇ.50ರಷ್ಟುದಂಡ ವಿಧಿಸಿ ಸಕ್ರಮ ಮಾಡುವ ಅವಕಾಶವನ್ನು ಈ ತಿದ್ದುಪಡಿ ಮಸೂದೆ ನೀಡುತ್ತದೆ. ಆದರೆ ಕಟ್ಟಡವು ಉದ್ಯಾನ, ಆಟದ ಮೈದಾನ, ಬಹಿರಂಗ ಸ್ಥಳ, ನಾಗರಿಕ ಸೌಲಭ್ಯಕ್ಕೆ ಮೀಸಲಾಗಿದ್ದ ಜಾಗದಲ್ಲಿದ್ದರೆ ಅಥವಾ ರೈಲು ಮಾರ್ಗ, ಹೆದ್ದಾರಿ, ವರ್ತುಲ ರಸ್ತೆಯ ವ್ಯಾಪ್ತಿಯಲ್ಲಿದ್ದರೆ, ಮಳೆ ನೀರು ಕಾಲುವೆ, ಕರೆ ದಂಡೆ ಪ್ರದೇಶ, ನದಿ ಪಾತ್ರ ಅಥವಾ ಹೈ ಟೆನ್ಷನ್‌ ಲೇನ್‌ ಕೆಳಗೆ ಇದ್ದರೆ ಸಕ್ರಮಗೊಳಿಸಲು ಈ ಕಾಯ್ದೆಯಡಿ ಅವಕಾಶವಿಲ್ಲ.

ಕಾಯ್ದೆ ಜಾರಿಗೆ ಬಂದ ಒಂದು ವರ್ಷದೊಳಗೆ ಮಾತ್ರ ಅಕ್ರಮ ಸಕ್ರಮ ಪ್ರಕ್ರಿಯೆಗೆ ಅವಕಾಶವಿದೆ. ಈ ಭೂಮಿ ಈಗಾಗಲೇ ಬಿಡಿಎಯ ಅಧೀನದಲ್ಲಿದೆ ಎಂದು ಮಸೂದೆ ಮಂಡಿಸಿದ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಚರ್ಚೆಯ ಸಂದರ್ಭದಲ್ಲಿ ತಿಳಿಸಿದರು.

ಪರಿಷತ್‌ ಸದಸ್ಯ ಕಾಂಗ್ರೆಸ್‌ನ ಪಿ.ಆರ್‌.ರಮೇಶ್‌, ಈ ಕಾಯ್ದೆಯು ನ್ಯಾಯಾಲಯದ ಮುಂದೆ ನಿಲ್ಲುವುದು ಕಷ್ಟ. ಅಕ್ರಮವನ್ನು ಸಕ್ರಮ ಮಾಡುವ ಅಧಿಕಾರ ಬಿಡಿಎಗೆ ಇಲ್ಲ ಎಂದು ಹೇಳಿದರು. ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಮಧ್ಯಪ್ರವೇಶಿಸಿ, ಮಾನವೀಯ ದೃಷ್ಟಿಯಿಂದ ಈ ಕಾಯ್ದೆ ರೂಪಿಸಿದ್ದೇವೆ. ಮನೆಗೆ ಮಾಲಿಕತ್ವವೂ ಸಿಗುವ ಹಾಗೆಯೇ ಬೊಕ್ಕಸಕ್ಕೆ ಆದಾಯವೂ ತರುವ ಮಸೂದೆ ಇದು ಎಂದು ಹೇಳಿದರು.

ಯಾವುದೇ ಸರ್ಕಾರವಿರಲಿ ಅಕ್ರಮಗಳನ್ನು ಸಕ್ರಮಗೊಳಿಸುವುದೇ ಈಗಿನ ಫ್ಯಾಷನ್‌ ಆಗಿದೆ. ಸಕ್ರಮಗೊಳಿಸಲು 12 ವರ್ಷಗಳಿಂದ ಕಟ್ಟಡ ಇರಬೇಕು ಎಂದು ಕಾಯ್ದೆ ಯಾವ ಮಾನದಂಡದ ಮೇಲೆ ಹೇಳುತ್ತದೆ. ಬೆಂಗಳೂರಿನಲ್ಲಿ ಎಲ್ಲ ರೀತಿಯ ಮಾಫಿಯಾಗಳಿದ್ದು ನಕಲಿ ದಾಖಲೆ ನೀಡುವ ಮೂಲಕ ಅಕ್ರಮವನ್ನು ಸಕ್ರಮಗೊಳಿಸಲು ಮುಂದಾಗುವುದಿಲ್ಲವೇ ಎಂದು ಪ್ರಶ್ನಿಸಿದರು.