Hubballi-Dharwad| ಹೆದ್ದಾರಿ ಅಗಲೀಕರಣಕ್ಕೆ ಭೂಸ್ವಾಧೀನ ಶುರು

* ದ್ವಿಪಥವನ್ನು ಷಟ್ಪಥ ಮಾಡುವ ಯೋಜನೆಯಿದು
* 31 ಕಿಮೀ ಉದ್ದದ ಹೈವೇ ಕಾಮಗಾರಿ
* ಹೆದ್ದಾರಿ ಚಿಕ್ಕದಾಗಿದ್ದು, ಅಪಘಾತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಗಲೀಕರಣ
 

Land Acquisition Process Start for Hubballi Dharwad Highway Widening grg

ಶಿವಾನಂದ ಗೊಂಬಿ

ಹುಬ್ಬಳ್ಳಿ(ಅ.10):  ಬಹುವರ್ಷಗಳ ಬೇಡಿಕೆಯಾಗಿದ್ದ ಇಲ್ಲಿನ ಹುಬ್ಬಳ್ಳಿ-ಧಾರವಾಡ(Hubballi-Dharwad) ಬೈಪಾಸ್‌ (ರಾಷ್ಟ್ರೀಯ ಹೆದ್ದಾರಿ-4) ಅಗಲೀಕರಣಕ್ಕೆ ಕೊನೆಗೂ ಭೂಸ್ವಾಧೀನ(Land Acquisition) ಪ್ರಕ್ರಿಯೆ ಶುರುವಾಗಿದೆ. ಇದಾದ ಬಳಿಕ ಟೆಂಡರ್‌ ಪ್ರಕ್ರಿಯೆ ಮುಗಿಸಿ ಕೆಲಸ ಶುರುವಾಗಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಫೆಬ್ರವರಿ ಅಥವಾ ಮಾರ್ಚ್‌ ತಿಂಗಳಿಂದ ಕಾಮಗಾರಿ ಶುರುವಾಗುವ ಲಕ್ಷಣಗಳಿವೆ.

ಬೆಂಗಳೂರು(Bengaluru)-ಹುಬ್ಬಳ್ಳಿ, ಬೆಳಗಾವಿ(Belagavi), ಪುಣೆ(Pune) ಮೂಲಕ ಚೆನ್ನೈ(Chennai) ಮತ್ತು ಮುಂಬೈಗೆ(Mumbai) ಸಂಪರ್ಕಿಸುವ ಹೆದ್ದಾರಿ ಇದು. ಈ ಹೆದ್ದಾರಿಯಲ್ಲಿ ಹುಬ್ಬಳ್ಳಿ-ಧಾರವಾಡ ಮಧ್ಯೆ 31 ಕಿಲೋ ಮೀಟರ್‌ ಇದೆ. ಇದಿಷ್ಟೇ ರಸ್ತೆ ಬರೀ ದ್ವಿಪಥವಿದೆ. ಉಳಿದೆಡೆ ಷಟ್ಪಥ, ಎಂಟುಪಥ ಇದೆ. 31 ಕಿಮೀ ರಸ್ತೆ ದ್ವಿಪಥ ಇರುವ ಕಾರಣ ಪ್ರತಿವರ್ಷ ನೂರಾರು ಅಪಘಾತಗಳು(Accident) ಸಂಭವಿಸುತ್ತವೆ. ಹತ್ತಾರು ಜನ ಸಾವನ್ನಪ್ಪಿದರೆ(Death), ಹಲವರು ಕೈ ಕಾಲು ಮುರಿದುಕೊಳ್ಳುವುದು ಮಾಮೂಲಿ ಎಂಬಂತಾಗಿದೆ.

ಈ ಹಿನ್ನೆಲೆಯಲ್ಲಿ ಈ 31 ಕಿಲೋ ಮೀಟರ್‌ ರಸ್ತೆಯನ್ನು ಷಟ್ಪಥವನ್ನಾಗಿ ಮಾಡಬೇಕೆಂಬುದು ಬಹುವರ್ಷದ ಬೇಡಿಕೆ. ಇದಕ್ಕಾಗಿ ಹತ್ತಾರು ಸಲ ಪ್ರತಿಭಟನೆ ನಡೆಸಿದ್ದುಂಟು. ಆದರೂ ಕೆಲ ತಾಂತ್ರಿಕ ಕಾರಣದಿಂದ ಹೆದ್ದಾರಿ ಅಗಲೀಕರಣ ಮಾತ್ರ ಆಗಿರಲಿಲ್ಲ. ಕೊನೆಗೆ ಕಳೆದ ಜನವರಿ 15ರಂದು ದಾವಣಗೆರೆಯ(Davanagere) 10 ಜನ ಮಹಿಳಾ ವೈದ್ಯರು ಸೇರಿದಂತೆ 12 ಜನ ಇಲ್ಲಿ ನಡೆದ ಅಪಘಾತದಿಂದ ಸಾವಿಗೀಡಾದ ಮೇಲೆ ಅಗಲೀಕರಣಕ್ಕೆ ಒತ್ತಡ ಹೆಚ್ಚಾಯಿತು. ಪ್ರತಿಭಟನೆಗಳು ಮತ್ತೆ ಜೋರಾದವು. ಒತ್ತಡ ಜೋರಾಯಿತು. ಕೊನೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್‌, ಶಾಸಕ ಅರವಿಂದ ಬೆಲ್ಲದ ಎಲ್ಲರೂ ಸೇರಿ ಕೇಂದ್ರ ಸಚಿವ ನಿತಿನ ಗಡ್ಕರಿ(Nitin Gadkari) ಸೇರಿದಂತೆ ಎಲ್ಲರೊಂದಿಗೆ ಚರ್ಚಿಸಿ ಎದುರಾಗಿದ್ದ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿದರು.

ಹುಬ್ಬಳ್ಳಿ-ಧಾರವಾಡ: ಕಿಲ್ಲರ್‌ ಹೆದ್ದಾರಿ ಷಟ್ಪಥಕ್ಕೆ ಹಸಿರು ನಿಶಾನೆ

ಕೇಂದ್ರ ಸರ್ಕಾರವೂ ಇಲ್ಲಿನ ಹೆದ್ದಾರಿಯನ್ನು ಅಗಲೀಕರಣ ಮಾಡಲು ಒಪ್ಪಿಗೆ ಸೂಚಿಸಿತು. ಇದೀಗ ಡಿಪಿಆರ್‌(DPR) ಸಿದ್ಧವಾಗಿದೆ. ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ. 35 ಎಕರೆ ಭೂಸ್ವಾಧೀನ ಮಾಡಲಾಗುತ್ತಿದೆ. ಇದರ ಪ್ರಕ್ರಿಯೆ ಶುರುವಾಗಿದ್ದು ಶೀಘ್ರದಲ್ಲೇ ಪೂರ್ಣವಾಗಲಿದೆ. ಅದು ಪೂರ್ಣವಾದ ಬಳಿಕ ಟೆಂಡರ್‌ ಕರೆದು ಕೆಲಸ ಶುರು ಮಾಡಲಾಗುವುದು. ಫೆಬ್ರವರಿ ಅಥವಾ ಮಾರ್ಚ್‌ನಿಂದ ಕೆಲಸ ಶುರುವಾಗುವ ಸಾಧ್ಯತೆ ಇದೆ. ಆರು ಪಥದ ಎಕ್ಸ್‌ಪ್ರೆಸ್‌ ಹೆದ್ದಾರಿ(Express Highway), ನಾಲ್ಕು ಪಥದ ಸರ್ವೀಸ್‌ ರಸ್ತೆ, ರೋಡ್‌ ಓವರ್‌ ಬ್ರಿಡ್ಜ್‌ ಮತ್ತು ಅಂಡರ್‌ ಬ್ರಿಡ್ಜ್‌ಗಳನ್ನು ನಿರ್ಮಿಸುವ 1200 ಕೋಟಿ ಯೋಜನೆ ಇದಾಗಿದೆ ಎಂದು ಮೂಲಗಳು ತಿಳಿಸುತ್ತವೆ.

ಆದಷ್ಟು ಬೇಗ ಪ್ರಾರಂಭಿಸಿ:

ಇಲ್ಲಿನ ಬೈಪಾಸ್‌ನಿಂದ(Bypass) ಪ್ರತಿನಿತ್ಯ ಒಂದಿಲ್ಲೊಂದು ಕಡೆಗಳಲ್ಲಿ ಅಪಘಾತ ಸಂಭವಿಸುತ್ತಲೇ ಇರುತ್ತವೆ. ಈಗಾಗಲೇ ಕೆಲಸ ಶುರುವಾಗಬೇಕಿತ್ತು, ವಿಳಂಬವಾಗಿದೆ. ಇನ್ನಾದರೂ ಭೂಸ್ವಾಧೀನವನ್ನು ಆದಷ್ಟುಶೀಘ್ರ ಮುಗಿಸಿ ಒಂದೆರಡು ತಿಂಗಳಲ್ಲಿ ಕೆಲಸ ಶುರು ಮಾಡಬೇಕು ಎಂಬುದು ಸಾರ್ವಜನಿಕರ ಒಕ್ಕೊರಲಿನ ಆಗ್ರಹ.

ಭೂಸ್ವಾಧೀನ ಪ್ರಕ್ರಿಯೆ ಶುರುವಾಗಿದೆ. ಒಟ್ಟು 35 ಎಕರೆ ಭೂಸ್ವಾಧೀನವಾಗಬೇಕಿದೆ. ಇದು ಪೂರ್ಣವಾದ ಬಳಿಕ ಟೆಂಡರ್‌ ಕರೆದು ಕೆಲಸ ಶುರುವಾಗಲಿದೆ. ಎಲ್ಲ ಪ್ರಕ್ರಿಯೆ ಪೂರ್ಣಗೊಂಡು ಕೆಲಸ ಶುರುವಾಗಬೇಕೆಂದರೆ ಇನ್ನಷ್ಟು ದಿನ ಬೇಕಾಗುತ್ತೆ ಎಂದು ಯೋಜನಾಧಿಕಾರಿ ಶ್ರೀಕಾಂತ ಪೋತ್ದಾರ್‌ ತಿಳಿಸಿದ್ದಾರೆ. 

ಬೈಪಾಸ್‌ ರಸ್ತೆ ಬರೀ ದ್ವಿಪಥವಾಗಿರುವುದರಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತವೆ. ಆದಷ್ಟು ಬೇಗನೆ ಈ ಹೆದ್ದಾರಿಯನ್ನು ಷಟ್ಪಥವನ್ನಾಗಿ ಮಾಡಲು ಕ್ರಮ ಕೈಗೊಳ್ಳಬೇಕು. ಆದಷ್ಟುಬೇಗನೆ ಕೆಲಸ ಶುರು ಮಾಡಬೇಕು ಎಂದು ಬಿ.ವಿ.ಕೋರಿಮಠ ಎಂಬುವರು ಹೇಳಿದ್ದಾರೆ.  

Latest Videos
Follow Us:
Download App:
  • android
  • ios