ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮುಖಂಡರಿಂದ ಗಂಭೀರ ಆರೋಪ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಆಪ್ತನ ಮೂಲಕ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ (ಮುಡ) ಸ್ವತ್ತನ್ನು ಡಿನೋಟಿಫಿಕೇಷನ್ ಮಾಡಿದ್ದಾರೆ ಎಂದು ಬಿಜೆಪಿಯ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಗಂಭೀರ ಆರೋಪಿಸಿದ್ದಾರೆ.
ಬೆಂಗಳೂರು (ಡಿ. 08): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಆಪ್ತನ ಮೂಲಕ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ (ಮುಡ) ಸ್ವತ್ತನ್ನು ಡಿನೋಟಿಫಿಕೇಷನ್ ಮಾಡಿದ್ದಾರೆ ಎಂದು ಬಿಜೆಪಿಯ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಗಂಭೀರ ಆರೋಪಿಸಿದ್ದಾರೆ.
ಈ ಸಂಬಂಧ ಅವರು ಸಿದ್ದರಾಮಯ್ಯ (Siddaramaiah) ಮತ್ತವರ ಆಪ್ತ ಬಿ.ಬಸವೇಗೌಡ ಸೇರಿದಂತೆ ಇತರರ ವಿರುದ್ಧ ಲೋಕಾಯುಕ್ತ (Lokayukta) ಸಂಸ್ಥೆಯಲ್ಲಿ ‘ಅಧಿಕಾರ ದುರುಪಯೋಗ, ವಂಚನೆ, ಭ್ರಷ್ಟಾಚಾರ, ಸರ್ಕಾರಿ ಭೂ ಕಬಳಿಕೆ’ ಪ್ರಕರಣ ದಾಖಲಿಸಿದ್ದಾರೆ.
ಅಕ್ರಮ ಕುರಿತು ಬೆಂಗಳೂರಿನಲ್ಲಿ ಬುಧವಾರ ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ರಮೇಶ್, ಹಗರಣವನ್ನು ಸಿಬಿಐ ಅಥವಾ ಸಿಐಡಿ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಸ್ವತಃ ಕಾನೂನು ಪದವೀಧರಾಗಿರುವ ಸಿದ್ದರಾಮಯ್ಯ ಅವರು ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಕಾನೂನು ರೀತಿ ಭೂಸ್ವಾಧೀನಪಡಿಸಿಕೊಂಡ ಮೂಡ ನಿರ್ಮಿಸಿದ್ದ ಬಡಾವಣೆಗೆ ಸಂಬಂಧಿಸಿದ ಜಾಗವನ್ನು ತಮ್ಮ ಅತ್ಯಂತ ಆಪ್ತ ಮತ್ತು ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಸಿ.ಬಸವೇಗೌಡ ಮೂಲಕ ಡಿ-ನೊಟೀಫೀಕೇಷನ್ ಮಾಡಲಾಗಿದೆ. ನಂತರ ಪರಿಹಾರ ಧನವನ್ನು ಪಡೆದುಕೊಂಡಿದ್ದ ಜಮೀನಿನ ಹಿಂದಿನ ಮಾಲಿಕರಾಗಿದ್ದ ಸಾಕಮ್ಮ ಅವರಿಂದ ಸ್ವತ್ತನ್ನು ಖರೀದಿ ಮಾಡುವ ಮೂಲಕ ಗುರುತರ ಅಪರಾಧವನ್ನು ಎಸಗಿದ್ದರು ಎಂದು ಆರೋಪಿಸಿದರು.
ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರವು 1985ರಲ್ಲಿ ಮೈಸೂರಿನ ಹಿನಕಲ್ ಗ್ರಾಮದ ಹಲವು ಜಮೀನುಗಳನ್ನು ವಿಜಯನಗರ 2ನೇ ಬಡಾವಣೆ ನಿರ್ಮಾಣಕ್ಕಾಗಿ ಕಾನೂನು ರೀತಿ ಭೂಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಹಿನಕಲ್ ಗ್ರಾಮದ ಸಾಕಮ್ಮ ಎಂಬುವವರ ಮಾಲಿಕತ್ವದ ಸರ್ವೇ ನಂಬರ್ 70/4ಎ ಜಮೀನನ್ನೂ ಸಹ ಬಡಾವಣೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಪಡಿಸಿಕೊಂಡಿತ್ತು. ಅಲ್ಲದೇ, ಜಮೀನಿನ ಮಾಲಿಕರಾದ ಸಾಕಮ್ಮ ಅವರಿಗೆ ಪರಿಹಾರ ಬಿಡುಗಡೆ ಮಾಡಲಾಗಿತ್ತು. ಕಾನೂನಿನ ರೀತಿ ಭೂಸ್ವಾಧೀನಪಡಿಸಿಕೊಂಡು ಬಡಾವಣೆ ನಿರ್ಮಿಸಿ ಎಲ್ಲಾ ಅರ್ಜಿದಾರರಿಗೆ ನಿವೇಶನಗಳನ್ನು ಹಂಚಿಕೆ ಮಾಡಿ ಕ್ರಮಪತ್ರಗಳನ್ನು ಮಾಡಿಕೊಟ್ಟಬಳಿಕ ಡಿನೊಟೀಫಿಕೇಷನ್‌ಗೆ ಅವಕಾಶ ಇರುವುದಿಲ್ಲ ಎಂದು ಅಂದಿನ ಆಯುಕ್ತರಾಗಿದ್ದ ಎ.ಎಂ.ಕುಂಜಪ್ಪ ಆದೇಶಿಸಿದ್ದರು. ಆದರೂ ಅಕ್ರಮ ಎಸಗಿದ್ದಾರೆ ಎಂದು ದೂರಿದರು.
ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ದೇವೇಗೌಡ ಮತ್ತು ಜೆ.ಎಚ್.ಪಟೇಲ್ ಸಚಿವ ಸಂಪುಟದಲ್ಲಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿಗಳಾಗಿದ್ದು, ಹಣಕಾಸು ಸಚಿವರು ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಅಗ ಮುಡ ಅಧ್ಯಕ್ಷರಾಗಿ ಅವರ ಆತ್ಮೀಯರಾದ ಸಿ.ಬಸವೇಗೌಡರನ್ನು ನೇಮಕ ಮಾಡಿದ್ದರು. ಮುಡ ಆಯುಕ್ತರ ಆದೇಶಕ್ಕೆ ವ್ಯತಿರಿಕ್ತವಾಗಿ ಮತ್ತು ಆಯುಕ್ತರ ಆದೇಶವನ್ನು ಉಲ್ಲಂಘಿಸಿ ಸಂವಿಧಾನಾತ್ಮಕವಾಗಿ ಯಾವುದೇ ಅಧಿಕಾರವಿಲ್ಲದೆ ಅಧ್ಯಕ್ಷರಾಗಿದ್ದ ಸಿ.ಬಸವೇಗೌಡ ಅವರು ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಡಿ-ನೊಟೀಫಿಕೇಷನ್ ಮಾಡಿದ್ದರು. ಆಯುಕ್ತರು ಡಿ-ನೊಟೀಫಿಕೇಷನ್ ಪ್ರಸ್ತಾವನೆಯನ್ನು ತಿರಿಸ್ಕರಿಸಿದರೂ ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಆಕ್ರಮ ಎಸಲಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ, ಬಸವೇಗೌಡ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಂದೆಗಾಗಿ ಕ್ಷೇತ್ರ ತ್ಯಾಗಕ್ಕೆ ಮುಂದಾದ ಪುತ್ರ
ಮೈಸೂರು: ‘ಅಪ್ಪನಿಗಾಗಿ ವರುಣ ಕ್ಷೇತ್ರ ಬಿಟ್ಟುಕೊಡಲು ಸಿದ್ಧ’ ಎಂದು ವರುಣ ಕ್ಷೇತ್ರದ ಹಾಲಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿ ಮತ್ತೆ ಮುಖ್ಯಮಂತ್ರಿಯಾಗುವ ಅವಕಾಶ ಇರುವುದರಿಂದ ನನ್ನ ತಂದೆ ಸಿದ್ದರಾಮಯ್ಯ ಅವರಿಗೆ ವರುಣ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕೇಳಿಕೊಂಡಿದ್ದೇನೆ. ವರುಣ ಕ್ಷೇತ್ರ ಸಿದ್ದರಾಮಯ್ಯನವರ ಪಾಲಿಗೆ ಅದೃಷ್ಟದ ಕ್ಷೇತ್ರ. ಇಲ್ಲಿಂದ ಸ್ಪರ್ಧಿಸಿದಾಗ ಮೊದಲು ವಿರೋಧ ಪಕ್ಷದ ನಾಯಕರಾದರು, ಎರಡನೇ ಬಾರಿ ಮುಖ್ಯಮಂತ್ರಿಯಾದರು. ಈ ಬಾರಿಯೂ ಅವರಿಗೆ ಸಿಎಂ ಆಗುವ ಅವಕಾಶವಿದೆ ಅಂತ ಹೇಳಿದ್ದಾರೆ.
ವರುಣ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ಫಿಕ್ಸ್, ಪುತ್ರ ಬಿಟ್ಟು ಕೊಟ್ಟ ಸುಳಿವು
ಕೋಲಾರ ಸೇರಿದಂತೆ ಹಲವು ಕ್ಷೇತ್ರಗಳು ಅಪ್ಪನಿಗೆ ಸೇಫ್ ಇವೆ. ಆದರೆ, ವರುಣಕ್ಕೆ ಬರಲಿ ಅನ್ನೋದು ನನ್ನ ಮತ್ತು ಪಕ್ಷದ ಕಾರ್ಯಕರ್ತರ ಬಯಕೆ. ನನ್ನ ಆಸೆಯನ್ನು ಅಪ್ಪನ ಮುಂದೆ ಹೇಳಿದ್ದೇನೆ. ಆದರೆ, ಅಪ್ಪ ಈವರೆಗೂ ಯಾವ ತೀರ್ಮಾನವನ್ನೂ ಮಾಡಿಲ್ಲ. ಅವರು ವರುಣ ಕ್ಷೇತ್ರದಿಂದ ಸ್ಪರ್ಧಿಸಿದರೆ ನಾನು ಬೇರೆ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ. ಅಪ್ಪನ ಪರವಾಗಿ ನಿಂತು ಕೆಲಸ ಮಾಡುತ್ತೇನೆ ಎಂದರು.