Asianet Suvarna News Asianet Suvarna News

ಲಕ್ಷ್ಮೀ ಹೆಬ್ಬಾಳ್ಕರ್ ಸೋದರನಿಂದ ರಮೇಶ್ ಜಾರಕಿಹೊಳಿ ಭೇಟಿ

 ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಸಹೋದರ ಚನ್ನರಾಜ ಹಟ್ಟಿಹೊಳಿ ಶನಿವಾರ ಗೋಕಾಕ ಕ್ಷೇತ್ರದ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಭೇಟಿಯಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ರಹಸ್ಯ ಮಾತುಕತೆ ನಡೆಸಿದ್ದಾರೆ. 

Lakshmi Hebbalkar Brother Meets Ramesh Jarkiholi
Author
Bengaluru, First Published Oct 6, 2019, 8:56 AM IST

ಬೆಳಗಾವಿ [ಅ.06]:  ಮಹತ್ವದ ಬೆಳವಣಿಗೆಯೊಂದರಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಸಹೋದರ ಚನ್ನರಾಜ ಹಟ್ಟಿಹೊಳಿ ಶನಿವಾರ ಗೋಕಾಕ ಕ್ಷೇತ್ರದ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಭೇಟಿಯಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ರಹಸ್ಯ ಮಾತುಕತೆ ನಡೆಸಿದ್ದಾರೆ. ಬೆಳಗಾವಿ ಪ್ರವಾಸಿ ಮಂದಿರದಲ್ಲಿ ನಡೆದ ಈ ಭೇಟಿ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಮಾಜಿ ಸಚಿವ, ಶಾಸಕ ಡಿ.ಕೆ.ಶಿವಕುಮಾರ್‌ ಅವರನ್ನು ಬಂಧಿಸಿರುವ ಜಾರಿ ನಿರ್ದೇಶನಾಲಯ(ಇ.ಡಿ), ಇದೇ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಡಿ.ಕೆ.ಶಿವಕುಮಾರ್‌ ಅವರ ಆಪ್ತೆಯೂ ಆಗಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ರನ್ನೂ ದೆಹಲಿಗೆ ಕರೆಸಿಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿತ್ತು. ಈ ವೇಳೆ ಶಾಸಕಿ ಹೆಬ್ಬಾಳ್ಕರ್‌ ಅವರ ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿ ಕೆಲ ಮಾಹಿತಿಗಳನ್ನು ಕೇಳಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಲಕ್ಷ್ಮೀ ಹೆಬ್ಬಾಳ್ಕರ್‌ ತಮ್ಮ ಸಹೋದರನನ್ನು ರಮೇಶ್‌ ಜಾರಕಿಹೊಳಿ ಬಳಿ ಕಳುಹಿಸಿದ್ದಾರೆ. ಹೆಬ್ಬಾಳ್ಕರ್‌ ಸಹೋದರನ ಜತೆಗಿನ ಭೇಟಿಯನ್ನು ಖಚಿತಪಡಿಸಿರುವ ರಮೇಶ್‌ ಜಾರಕಿಹೊಳಿ, ಕೆಲ ವ್ಯವಹಾರಕ್ಕೆ ಸಂಬಂಧಿಸಿ ಮಾತುಕತೆ ನಡೆದಿದೆ ಅಷ್ಟೆಎಂದು ತಿಳಿಸಿದ್ದಾರೆ. ಆದರೆ, ಜಾರಕಿಹೊಳಿ ಜತೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಮುಂದಾಗಿದ್ದಾರೆ ಎಂದು ಅನರ್ಹ ಶಾಸಕರ ಆಪ್ತ ಮೂಲಗಳು ಖಚಿತಪಡಿಸಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಲಕ್ಷ್ಮೀ ಹೆಬ್ಬಾಳ್ಕರ್‌ರನ್ನು ಮುಂದಿನ ದಿನಗಳಲ್ಲಿ ಇ.ಡಿ. ಮತ್ತೊಮ್ಮೆ ವಿಚಾರಣೆಗೆ ಒಳಪಡಿಸಿದರೂ ಅಚ್ಚರಿ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಹೆಬ್ಬಾಳ್ಕರ್‌ ಮತ್ತೆ ರಮೇಶ್‌ ಜಾರಕಿಹೊಳಿ ಬಳಿ ಸ್ನೇಹಹಸ್ತ ಚಾಚಲು ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ, ರಮೇಶ ಜಾರಕಿಹೊಳಿ ಅವರು ಶಾಸಕಿಯ ಸ್ನೇಹಹಸ್ತವನ್ನು ನಯವಾಗಿಯೇ ತಿರಸ್ಕರಿಸಿದ್ದಾರೆ ಎಂದು ಆಪ್ತ ವಲಯಗಳು ತಿಳಿಸಿವೆ.

2018ರ ಡಿಸೆಂಬರ್‌ನಲ್ಲಿ ಬೆಳಗಾವಿ ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ವಿಚಾರಕ್ಕೆ ಸಂಬಂಧಿಸಿ ರಮೇಶ್‌ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್‌ ನಡುವೆ ರಾಜಕೀಯ ಮನಸ್ತಾಪ ಶುರುವಾಗಿತ್ತು. ಇದೇ ತಿಕ್ಕಾಟ ಕೊನೆಗೆ ಸಮ್ಮಿಶ್ರ ಸರ್ಕಾರದ ಪತನದ ಕಾರಣಗಳಲ್ಲೊಂದಾಗಿ ಪರಿವರ್ತನೆಯಾಗಿತ್ತು.

Follow Us:
Download App:
  • android
  • ios