Asianet Suvarna News Asianet Suvarna News

ಕೊರೋನಾ ಇಲ್ಲದಿದ್ದರೂ ಕೋವಿಡ್ ಹೆಸರಿನಲ್ಲಿ ಲಕ್ಷ ಲಕ್ಷ ಲೂಟಿ..!

ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕು ಆಸ್ಪತ್ರೆಯಲ್ಲಿ ಹೀಗೆ ಲಕ್ಷ ಲಕ್ಷ ಹಣವನ್ನು ಕೋವಿಡ್ ಹೆಸರಿನಲ್ಲಿ ಲೂಟಿ ಮಾಡಲಾಗಿದೆ ಎಂದು ಹೊರಗುತ್ತಿಗೆ ನೌಕರರ ಸಂಘದ ಮುಖಂಡ ಪಿ.ಆರ್. ಭರತ್ ಆರೋಪಿಸಿದ್ದಾರೆ. 

Lakhs of Loot in the Name of Coronavirus in Kodagu grg
Author
First Published Jan 6, 2024, 9:26 PM IST

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು(ಜ.06):  ಬಿಜೆಪಿ ಸರ್ಕಾರದ ಸಂದರ್ಭದಲ್ಲಿ ಕೋವಿಡ್ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಮಾಡಲಾಗಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿತ್ತು. ಬಿಜೆಪಿ ಲೂಟಿ ಮಾಡಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರೇ ಕೋವಿಡ್ ಇಲ್ಲದ ಸಂದರ್ಭದಲ್ಲಿ ಕೋವಿಡ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಯನ್ನು ಲೂಟಿ ಮಾಡಿದ್ದಾರೆ. ಅದೂ ಕೂಡ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಸಿಬ್ಬಂದಿಗೆ ಕೊಡಬೇಕಾಗಿರುವ ವೇತನದ ಸಂಬಳವನ್ನು ಹೀಗೆ ಮಿಸ್ ಯೂಸ್ ಮಾಡಿದ್ದಾರೆ ಎನ್ನುವುದು ಬಟಾಬಯಲಾಗಿದೆ.

ಹೌದು, ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕು ಆಸ್ಪತ್ರೆಯಲ್ಲಿ ಹೀಗೆ ಲಕ್ಷ ಲಕ್ಷ ಹಣವನ್ನು ಕೋವಿಡ್ ಹೆಸರಿನಲ್ಲಿ ಲೂಟಿ ಮಾಡಲಾಗಿದೆ ಎಂದು ಹೊರಗುತ್ತಿಗೆ ನೌಕರರ ಸಂಘದ ಮುಖಂಡ ಪಿ.ಆರ್. ಭರತ್ ಆರೋಪಿಸಿದ್ದಾರೆ. 
ವಿರಾಜಪೇಟೆ ತಾಲ್ಲೂಕು ಆಸ್ಪತ್ರೆಯಲ್ಲಿ ಹತ್ತು ಲಕ್ಷ ಹಣ ದುರುಪಯೋಗ ಮಾಡಲಾಗಿರುವ ಆರೋಪವಿದೆ. 2022 ಆಗಸ್ಟ್  ತಿಂಗಳಿನಲ್ಲಿ ಕೋವಿಡ್ ಸೋಂಕೇ ಇರಲಿಲ್ಲ. ಆದರೂ ಕೋವಿಡ್ ರೋಗಿಗಳಿಗಾಗಿ ಬೆಡ್, ರೆಕ್ಸಿನ್ ಕಾಯಿಲ್ ಹಾಗೂ ಲಿನನ್ ಸಾಮಾಗ್ರಿ ಖರೀದಿಸಲಾಗಿದೆ. ಅದು ಕೂಡ ಹೊರಗುತ್ತಿಗೆಯಲ್ಲಿ ಸ್ವಚ್ಛತೆ ಸೇರಿದಂತೆ ನಾನ್ ಕ್ಲಿನಿಕಲ್ ಸಿಬ್ಬಂದಿಗೆ ವೇತನ ಕೊಡಲು ಮೀಸಲಿರಿಸಲಾಗಿದ್ದ ಹತ್ತು ಲಕ್ಷ ಹಣದಲ್ಲಿ ಇವೆಲ್ಲವನ್ನು ಖರೀದಿಸಲಾಗಿದೆ. ಈ ಹಣವನ್ನು ವೇತನಕ್ಕೆ ಅಲ್ಲದೆ ಬೇರೆ ಉದ್ದೇಶಗಳಿಗೆ ಬಳಸುವಂತೆ ಇಲ್ಲ. ಈ ಹಣವನ್ನು ವಿವಿಧ ಸಾಮಗ್ರಿಗಳ ಖರೀದಿ ಹೆಸರಿನಲ್ಲಿ 4,99,590 ಒಂದು ಬಿಲ್ಲನ್ನು, 4,81,140 ರೂಪಾಯಿಯ ಮತ್ತೊಂದು ಬಿಲ್ಲನ್ನು ಪಾವತಿ ಮಾಡಲಾಗಿದೆ. ಕುಶಾಲನಗರದ ರಾಧಕೃಷ್ಣ ಮೆಡಿಕಲ್ ಹೆಸರಿನಲ್ಲಿ ಟ್ಯಾಕ್ಸ್ ಇನ್ವಾಯ್ಸ್ ಪಡೆಯಲಾಗಿದೆ. 

ಸಂಕಷ್ಟಕ್ಕೆ ಸಿಲುಕಿದ್ದ ಶಬರಿಮಲೆ ಭಕ್ತರಿಗೆ ಆಶ್ರಯ; ಕೋಮು ಸೌಹಾರ್ದತೆಗೆ ಸಾಕ್ಷಿಯಾದ ತಿತಿಮತಿ ಜಾಮಾ ಮಸೀದಿ!

ಒಟ್ಟಿನಲ್ಲಿ 10 ಲಕ್ಷ ರೂಪಾಯಿ ಹಣವನ್ನು ದುರ್ಬಳಕೆ ಮಾಡಿರುವುದು ಮೇಲ್ನೋಟಕ್ಕೆ ಸತ್ಯ ಎನ್ನುವುದು ಗೊತ್ತಾಗುತ್ತಿದೆ. ಇದು ಒಂದೆಡೆಯಾದರೆ ಆಸ್ಪತ್ರೆಗೆ ಬೆಡ್ ಮತ್ತಿತರ ವಸ್ತುಗಳ ಖರೀದಿಸಿ ಇನ್ನೂ ಆರು ತಿಂಗಳ ಪೂರ್ಣವಾಗಿಲ್ಲ. ಆಗಲೇ ಆಸ್ಪತ್ರೆಯಲ್ಲಿ ಕೊರತೆ ಇರುವುದರಿಂದ ಅವುಗಳನ್ನು ಖರೀದಿಸಲಾಗುತ್ತಿದೆ ಎಂದು ಮತ್ತೆ ಇಂಡೆಂಟ್ ಬರೆಯಲಾಗಿದೆ. ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕ್ಲಿನಿಲ್ ಯೇತರ ಸಿಬ್ಬಂದಿ ವೇತನವನ್ನು ಹೀಗೆ ಬಳಕೆ ಮಾಡಿರುವುದರಿಂದ ಕಳೆದ ಎರಡು ತಿಂಗಳಿನಿಂದ ಹೊರಗುತ್ತಿಗೆ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಸಂಬಳವಿಲ್ಲದೆ ಪರದಾಡುತ್ತಿದ್ದಾರೆ. 

ಇದನ್ನೇ ನಂಬಿ ನಾವು ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದೆವು. ಆದರೀಗ ಹೊರಗುತ್ತಿಗೆ ಸಿಬ್ಬಂದಿ ಪೂರೈಸಲು ಟೆಂಡರ್ ಪಡೆದಿರುವವರು ನಮಗೆ ಬಿಲ್ಲು ಆಗುತ್ತಿಲ್ಲ. ಹೀಗಾಗಿ ನಾವು ಹೇಗೆ ಸಂಬಳ ಕೊಡುವುದು ಎನ್ನುತ್ತಿದ್ದಾರೆ. ಏಕೆ ಬಿಲ್ಲು ಆಗುತ್ತಿಲ್ಲ ಎನ್ನುವುದನ್ನು ಆಸ್ಪತ್ರೆಯಲ್ಲಿ ವಿಚಾರಿಸಿದಾಗ ಸಂಬಳಕ್ಕಾಗಿ ಮೀಸಲಿರಿದ್ದ ಹಣವನ್ನು ಕೋವಿಡ್ ನಿರ್ವಹಣೆಯ ಬೆಡ್ ಸೇರಿದಂತೆ ವಿವಿಧ ವಸ್ತುಗಳ ಖರೀದಿಗೆ ಬಳಕೆ ಮಾಡಲಾಗಿದೆ. ಹೀಗಾಗಿ ಸಂಬಳ ಮಾಡುವುದಕ್ಕೆ ಹಣ ಇಲ್ಲ ಎನ್ನುವುದು ಗೊತ್ತಾಗಿದೆ. ನಿಜವಾಗಿಯೂ ಯಾರು ದುರಪಯೋಗ ಮಾಡಿದರು ಎನ್ನುವುದನ್ನು ತನಿಖೆ ಮಾಡಬೇಕು ಎಂದು ಆಗ್ರಹಿಸಿದರು. 

ಸಂಬಳವಿಲ್ಲದೆ ತಮ್ಮ ಬದುಕು ನಡೆಸುವುದು ಹೇಗೆ ಎಂದು ಸಿಬ್ಬಂದಿ ಭಾಗೀರಥಿ, ಸಬಿಯಾ ರೋಜ್ ಮುಂತಾದವರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಕೋವಿಡ್ ಹೆಸರಿನಲ್ಲಿ ಸರ್ಕಾರಗಳು ಲೂಟಿ ಮಾಡಿದರೋ ಇಲ್ಲವೋ, ಆದರೆ ಆಸ್ಪತ್ರೆಗಳಲ್ಲಿ ಕೋವಿಡ್ ಹೆಸರಿನಲ್ಲಿ ಲೂಟಿ ನಡೆದಿರುವುದಂತು ಸತ್ಯ.

Follow Us:
Download App:
  • android
  • ios