ಬೆಳಗಾವಿ(ಡಿ.15): ಎಲೆಕ್ಷನ್ ಮುಗಿದರೂ ರಮೇಶ್ ಜಾರಕಿಹೊಳಿ ವಿರುದ್ಧ ಸತೀಶ್ ಜಾರಕಿಹೊಳಿ ಹಾಗೂ ಗೋಕಾಕ್ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರು ಸಮರವನ್ನ ಮುಂದುವರೆಸಿದ್ದಾರೆ. 

ಹೌದು, ಇಂದು(ಭಾನುವಾರ) ಜಿಲ್ಲೆಯ ಗೋಕಾಕ್‌ ನಗರದ ಲಖನ್ ಜಾರಕಿಹೊಳಿ‌ ಕಚೇರಿ ಎದುರು ಕಾಂಗ್ರೆಸ್ ಸಮಾವೇಶ ನಡೆಯುತ್ತಿದೆ. ಉಪಚುನಾವಣೆಯಲ್ಲಿ ಬೆಂಬಲಿಸಿದ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದಲ್ಲಿ ಗೋಕಾಕ ಕ್ಷೇತ್ರದ ಪ್ರಮುಖ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದಾರೆ. 

ಸಭೆಯಲ್ಲಿ ಭಾಷಣ ಮಾತನಾಡಿದ ಪರಾಜಿತ ಅಭ್ಯರ್ಥಿ ಲಖನ್ ಜಾರಕಿಹೊಳಿ, ನನಗೆ ಆಶೀರ್ವಾದ ಮಾಡಿ 59 ಸಾವಿರ ಮತಹಾಕಿದ ನಿಮಗೆ ಧನ್ಯವಾದಗಳನ್ನು ಹೇಳುತ್ತೇನೆ. ಮಾವ, ಅಳಿಯಂದಿರ ವಿರುದ್ಧ ನಾವು ಸೋತಿಲ್ಲ. ಯಡಿಯೂರಪ್ಪ ವಿರುದ್ಧ ಸೋತಿದ್ದೇವೆ. ಯಡಿಯೂರಪ್ಪ ನೋಡಿ ಮತಹಾಕಿ ಅಂತ ಯಡಿಯೂರಪ್ಪ ಮತಯಾಚನೆ ಮಾಡಿದ್ದರು. ಹೀಗಾಗಿ ರಮೇಶ್ ಜಾರಕಿಹೊಳಿ‌ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಮೇಶ್ ಜಾರಕಿಹೊಳಿ‌ ವಾಮಮಾರ್ಗದಲ್ಲಿ‌ ದುಡ್ಡಿನ ಹೊಳೆ ಹರಿಸಿ ಮೋಸ ಮಾಡಿದ್ದಾರೆ. ಮುಗ್ಧ ಜನರಿಗೆ ಮೋಸ ಮಾಡಿ ಮತ ಹಾಕಿಸಿಕೊಂಡಿದ್ದಾರೆ. ಜಲಸಂಪನ್ಮೂಲ ಸಚಿವ ಆಗ್ತಾರು, ಡಿಸಿಎಂ ಆಗ್ತಾರು ಅಂತಾ ಏನೇನೋ ಹೇಳಿದ್ರು, ಈ ಮನುಷ್ಯನ ನೀರಾವರಿ ಮಂತ್ರಿ ಮಾಡಿದ್ರೆ ನಿಮ್ಮನ್ನು ನೀರಲ್ಲೇ ಬಿಟ್ಟು ಬಿಡ್ತಾನ್ರಿ ಎಂದು ರಮೇಶ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಬಿಜೆಪಿಯವರಿಗೆ ಬ್ಲ್ಯಾಕ್ ಮೇಲ್ ಮಾಡಲು ಸಿದ್ದರಾಮಯ್ಯ ಭೇಟಿಗೆ ಆಸ್ಪತ್ರೆಗೆ ರಮೇಶ್ ಜಾರಕಿಹೊಳಿ ಹೋಗಿದ್ರು, ಡಿಸಿಎಂ ಹುದ್ದೆ ತಪ್ಪಿದ್ದಕ್ಕೆ ಬ್ಲ್ಯಾಕ್ ಮೇಲ್ ಮಾಡಲು ಸಿದ್ದರಾಮಯ್ಯ ಅವನನ್ನ ಭೇಟಿ ಮಾಡಿದ್ದಾರೆ. ಪೌರಾಡಳಿತ ಮಂತ್ರಿ ಕೊಟ್ರೆ ಮಾತ್ರ ಗಪ್ಪ ಇರೋ ಮನುಷ್ಯ ಇವನು ಎಂದು ಹೇಳಿದ್ದಾರೆ. 

ಬಾಲಚಂದ್ರ ಜಾರಕಿಹೊಳಿ‌ ಬಹಳ ಆಶ್ವಾಸನೆ ಕೊಟ್ಟಿದ್ದಾರೆ. ಸಂತೋಷ್ ಜಾರಕಿಹೊಳಿ‌ ನಾವೆಲ್ಲಾ ಒಂದೇ ಅಂತಾ ಪೋಸ್ಟ್ ಮಾಡಿದ್ದನು. ರಾಜಕೀಯವಾಗಿ ನಾವು ಅವರ ಜೊತೆ ಎಂದಿಗೂ ಕೂಡುವುದಿಲ್ಲ. ಮುಂದಿನ ಚುನಾವಣೆ ವೇಳೆಯೂ ನಾನು ರಮೇಶ್ ಜಾರಕಿಹೊಳಿ‌ ವಿರುದ್ಧ ಸ್ಪರ್ಧಿಸುವೆ. ಸತೀಶ್ ಅಣ್ಣಾ ಟಿಕೆಟ್ ಕೊಡಿಸ್ತಾರೆ, ನಾನು ರಮೇಶ್ ವಿರುದ್ಧ ಸ್ಪರ್ಧಿಸುವೆ ಎಂದು ಹೇಳುವ ಮುಂದಿನ ಸಾರ್ವತ್ರಿಕ ಚುನಾವಣೆಗೆ ಈಗಲೇ ತಯಾರಿ ಆರಂಭಿಸಿದ್ದಾರೆ.

ನಾವೆಲ್ಲಾ ಒಂದೇ ಅಂತಾ ಅಪಪ್ರಚಾರ ಮಾಡಿ ನಮಗೆ 20 ಸಾವಿರ ಮತ ಕಡಿಮೆ ಬರುವ ಹಾಗೇ ಮಾಡಿದ್ದರು. ಯಡಿಯೂರಪ್ಪ, ಸುರೇಶ್ ಅಂಗಡಿ, ಉಮೇಶ್ ಕತ್ತಿ ಎಲ್ಲರೂ ಸೇರಿ ರಮೇಶ್ ನನ್ನ ಗೆಲ್ಲಿಸಿದ್ದಾರೆ. ರಮೇಶ್ ಜಾರಕಿಹೊಳಿಗೆ ಇರೋದು ನಲವತ್ತು ಸಾವಿರ ಮತಗಳು ಮಾತ್ರ, ಬಿಎಸ್‌ವೈ, ಬಿಜೆಪಿ ನಾಯಕರು ಪ್ರಚಾರ ಮಾಡಿದ್ದರಿಂದ ರಮೇಶ್ ಗೆದ್ದಿದ್ದಾರೆ ಎಂದು ಹೇಳಿದ್ದಾರೆ. 

ನೀವೇನೂ ಹೆದರಬೇಡಿ ನಾನು, ಸತೀಶ್ ಅಣ್ಣಾ ನಿಮ್ಮ ಜೊತೆಯಲ್ಲಿದ್ದೇವೆ, ಭ್ರಷ್ಟಾಚಾರ ವಿರುದ್ಧ ನಮ್ಮ ಹೋರಾಟ ಇದೆ. ಪರೋಕ್ಷ, ಅಪರೋಕ್ಷ ಸಹಕಾರ ಮಾಡಿದ ಎಲ್ಲರಿಗೂ ಧನ್ಯವಾದ ಎಂದು ತಿಳಿಸಿದ್ದಾರೆ. 

ಬಳಿಕ ಭಾಷಣ ಮಾಡಿದ ಸತೀಶ್ ಜಾರಕಿಹೊಳಿ, ಬುದ್ಧ, ಬಸವಣ್ಣ, ಅಂಬೇಡ್ಕರ್ ಪರವಾಗಿದ್ದವರು ನಮಗೆ ವೋಟ್ ಹಾಕಿದ್ದಾರೆ. ಬುದ್ಧ, ಬಸವಣ್ಣ, ಅಂಬೇಡ್ಕರ್‌ರನ್ನು ದೇಶದಿಂದ ಓಡಿಸಿದವರಂತವರು ಬಿಜೆಪಿಗೆ ವೋಟ್ ಹಾಕಿದ್ದಾರೆ ಎಂದು ಹೇಳುವ ಮೂಲಕ ವಿವಾದಾತ್ಮಹ ಹೇಳಿಕೆಯನ್ನು ನೀಡಿದ್ದಾರೆ. 

ಯಡಿಯೂರಪ್ಪ ಬರದಿದ್ರೆ ರಮೇಶ್ ಜಾರಕಿಹೊಳಿ‌ ಮೂರನೇ ನಂಬರ್ ಬರ್ತಿದ್ದ, ಯಡಿಯೂರಪ್ಪ, ಬಾಲಚಂದ್ರ ಜಾರಕಿಹೊಳಿ‌ ಬಂದಿದ್ದರಿಂದ ರಮೇಶ್ ಗೆದ್ದಿದ್ದಾನೆ. ಕೊನೆಯ ಘಳಿಗೆಯಲ್ಲಿ ಬಾಲಚಂದ್ರ ಜಾರಕಿಹೊಳಿ‌ ಆಫೀಸ್ ಒತ್ತಡದಿಂದ ಮತಗಳು ಕಡಿಮೆ ಬಂದಿದ್ದಾವೆ. ಅಂಬಿರಾವ್‌ಗೆ ಸೋಲುತ್ತೇವೆಂದು ಗೊತ್ತಾಗುತ್ತಿದ್ದಂತೆ ಲಕ್ಷಗಟ್ಟಲೆ ಹಣ ಹಂಚಿದ್ದಾರೆ. ಇನ್ನೂ ಮೂರು ವರ್ಷ ಬಳಿಕವೇ ರಮೇಶ್ ಹಳ್ಳಿಗೆ ಬರುತ್ತಾನೆ. ಬೈಎಲೆಕ್ಷನ್‌ನಲ್ಲಿ ಸೊಸೆಗೆ ಬಹಳ ಸಿಂಗಾರ ಮಾಡಿದ್ರು, ಮುಂದಿನ ಚುನಾವಣೆಗೆ ಈ ಸೊಸೆ ಹಳೆದಾಗಿ ಹೋಗಿರುತ್ತಾಳೆ. ಇನ್ನೂ ಮೂರು ವರ್ಷಕ್ಕೆ ಹಳೆಯದಾಗಿ ಹೋಗಿರುತ್ತೆ ಈ ಗಿರಾಕಿ ಎಂದು ರಮೇಶ್ ಜಾರಕಿಹೊಳಿ ಕುರಿತು ಸತೀಶ್ ಜಾರಕಿಹೊಳಿ‌ ವ್ಯಂಗ್ಯವಾಡಿದ್ದಾರೆ. 

ನೀರಾವರಿ ಮಂತ್ರಿ ಕೊಡಬೇಕು, ಡಿಸಿಎಂ ಕೊಡಬೇಕು ಅಂತಾ ಈಗ ಸಿದ್ದರಾಮಯ್ಯ ಬಳಿ ಹೋಗಿದ್ದಾನೆ. ಈಗ ರಮೇಶ್ ಜಾರಕಿಹೊಳಿಗೆ ಕುಮಾರಸ್ವಾಮಿಯೂ ಬೇಕಾಗುತ್ತಾನೆ. ಸಂತ್ಯಾಗ ಕುರಿ, ಆಡು ಖರೀದಿ ಮಾಡಿದಂತೆ ವ್ಯಾಪಾರ ಮಾಡುತ್ತಿದ್ದಾರೆ. ಮೋಸ ಮಾಡಲೆಂದು ಇವರು ರಾಜಕಾರಣ ಮಾಡೋಕೆ ಬಂದಿದ್ದಾರೆ ಎಂದು ಜರಿದಿದ್ದಾರೆ. 

ನಮ್ಮ ಗೋಕಾಕ್‌ನಲ್ಲಿ ಇಂದಿಗೂ ಒಂದು ಸರ್ಕಾರಿ ಡಿಗ್ರಿ ಕಾಲೇಜು ಇಲ್ಲ, ರಮೇಶ್ ಯಡಿಯೂರಪ್ಪರನ್ನ ರಮೇಶ್ ಬ್ಲ್ಯಾಕ್ ಮೇಲ್ ಮಾಡೋದು ಶತಸಿದ್ಧ. ರಮೇಶ್ ಏನೇ ಆದರೂ ನಮ್ಮ ತಾಲೂಕಿಗೆ ಉಪಯೋಗ ಆಗಲ್ಲ, ಮುಂದಿನ ಚುನಾವಣೆಯಲ್ಲಿ ರಮೇಶ್ ರಕ್ಷಣೆಗೆ ಯಾರೂ ಬರಲ್ಲ, ಆಗ ಯಡಿಯೂರಪ್ಪ, ಬಾಲಚಂದ್ರ ಫೋರ್ಸ್ ಬರುವುದಿಲ್ಲ. ಹೀಗಾಗಿ ಮುಂದಿನ ಚುನಾವಣೆಗೆ ನಾವು ಪಕ್ಷ ಬಲಪಡಿಸಬೇಕಾಗಿದೆ ಎಂದು ಹೇಳಿದ್ದಾರೆ. 

ನಮ್ಮ ಜನರನ್ನು ಹೆದರಿಸದೇ ಹೋಗಿದ್ರೆ ನಾವೇ ಗೆಲ್ತಿದ್ವಿ, ಗೊಡಚನಮಲ್ಕಿ ಒಂದೇ ಊರಲ್ಲಿ ಎಂಎಲ್‌ಎ ಆಫೀಸ್‌ನವರು 240 ಜನ ಬಳಿ ಹಣ ಪಡೆದಿದ್ದಾರೆ. ಮನೆ ಕಟ್ಟಿಸಿಕೊಡ್ತೇವೆ ಅಂತಾ 240 ಜನರಿಂದ ತಲಾ 30 ಸಾವಿರ ರೂಪಾಯಿ ಹಣ ವಸೂಲಿ ಮಾಡಿದ್ದಾರೆ. ವೋಟ್ ಹಾಕಲಿಲ್ಲ ಅಂದ್ರೆ ಆ ಹಣ ಕೊಡಲ್ಲ ಅಂತಾ ಬೆದರಿಕೆ ಒಡ್ಡಿದ್ರು ಅಂತಾ ಗೊತ್ತಾಯ್ತು, ಈ ರೀತಿ ಬ್ಲ್ಯಾಕ್ ಮೇಲ್ ಮಾಡಿ ರಮೇಶ್ ಜಾರಕಿಹೊಳಿ‌ ಚುನಾವಣೆ ಗೆದ್ದಿದ್ದಾರೆ ಎಂದುರಮೇಶ ಜಾರಕಿಹೊಳಿ‌ ವಿರುದ್ಧ ಸತೀಶ್ ಜಾರಕಿಹೊಳಿ‌ ಗಂಭೀರವಾಗಿ ಆರೋಪ ಮಾಡಿದ್ದಾರೆ.