ಹಗರಿಬೊಮ್ಮನಹಳ್ಳಿ(ನ.20): ತಾಲೂಕಿನ ಬನ್ನಿಕಲ್ಲು ಗ್ರಾಮದ ಬೃಹತ್‌ ಕೆರೆಯಲ್ಲಿ ಸಂಗ್ರಹವಾಗಿರುವ ನೀರು ಕೋಡಿಹಳ್ಳಿ ಕೆರೆಯತ್ತ ಬಸಿದು ಹೋಗುತಿದ್ದು, ಕೆರೆ ವ್ಯಾಪ್ತಿಯ 5 ಗ್ರಾಮಗಳ ರೈತರು ಆತಂಕಗೊಂಡಿದ್ದಾರೆ.

ಈ ಕೆರೆ 1963ರ ಸುಮಾರಿನಲ್ಲಿ ನಿರ್ಮಾಣಗೊಂಡಿದೆ, ಸುಮಾರು 412 ಎಕರೆಗೂ ಹೆಚ್ಚು ವ್ಯಾಪ್ತಿ ಹೊಂದಿದ್ದು, ಕೆರೆಯಿಂದ ಅಂದಾಜು 728 ಎಕರೆಯಷ್ಟು ಕೃಷಿ ಭೂಮಿಗೆ ನೀರುಣಿಸಲು ಬನ್ನಿಕಲ್ಲು-ಕೊಂಡೇನಹಳ್ಳಿ ಎರಡು ಗ್ರಾಮಗಳ ನಡುವೆ ಕಾಲುವೆಗಳ ನಿರ್ಮಾಣ ಕೂಡ ಆಗಿದೆ. ನೀರು ಸಂಗ್ರಹದಿಂದ 5 ಗ್ರಾಮಗಳಾದ ಬನ್ನಿಕಲ್ಲು, ಗದ್ದಿಕೆರೆ, ಕೊಂಡೇನಹಳ್ಳಿ, ಸಾಲುಮೂರಳ್ಳಿ ಹಾಗೂ ಜಿ. ಕೋಡಿಹಳ್ಳಿ ಗ್ರಾಮಗಳಲ್ಲಿ ಅಂತರ್ಜಲ ಹೆಚ್ಚಾಗುತ್ತಿದ್ದು ಕೆರೆ ನಿರ್ಮಾಣ ಸಾರ್ಥಕತೆ ಮೆರೆದಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇತ್ತೀಚಿನ ಹತ್ತಾರು ವರ್ಷಗಳಲ್ಲಿ ಬರಗಾಲ ಆವರಿಸಿದ ಹಿನ್ನೆಲೆಯಲ್ಲಿ ಈ ಹಿಂದಿನ ಸರ್ಕಾರ ಕುಡಿಯುವ ನೀರಿನ ಯೋಜನೆಗೆಂದು ತುಂಗಭದ್ರಾ ನದಿಯಿಂದ ಹಡಗಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 10 ಕೆರೆಗಳ ತುಂಬಿಸುವ ಯೋಜನೆಯಲ್ಲಿ ಈ ಕೆರೆ ಕೂಡ ಸೇರ್ಪಡೆಗೊಂಡಿತ್ತು. ಇದರಿಂದ ಮೊದಲಿದ್ದ ಕೆರೆ ಉದ್ದೇಶಕ್ಕೆ ಈಗ ಕಂಟಕವಾಗಿದೆ. ನೈಸರ್ಗಿಕವಾಗಿಯೇ ಆಗಲಿ ಅಥವಾ ಯೋಜನೆಯಿಂದಾಗಲಿ ಕೆರೆ ತುಂಬಿದ್ದರೂ ರೈತರು ಕೃಷಿಭೂಮಿಗೆ ನೀರುಣಿಸಲು ಅಡ್ಡಿಯಾಗಿ, ನಿರ್ಬಂಧ ಹೇರಲಾಗಿದೆ. ಪರಿಣಾಮ ರೈತರು ಕೆರೆಯ ನೀರನ್ನು ಕೃಷಿಗೆ ಬಳಸುವಂತಿಲ್ಲ. ಕುಡಿಯುವ ನೀರಿಗಾಗಿ ಬೇರೆಂದು ಕೆರೆ ನಿರ್ಮಾಣಮಾಡಬೇಕಿತ್ತು ಎನ್ನುವುದು ಯುವ ರೈತರ ವಾದವಾಗಿದೆ.

ಸುತ್ತಮುತ್ತಲಿನ ಗ್ರಾಮಗಳ ಪಂಪ್‌ಸೆಟ್‌ನ ಅಂತರ್ಜಲ ಹೆಚ್ಚಾಗುತಿದ್ದು, ಜೊತೆಗೆ ಕುಡಿಯುವ ನೀರಿಗೂ ಬರ ಬಾರದಿರಲಿ ಎನ್ನುವುದು ನೆಮ್ಮದಿಯನ್ನು ತಂದಿದೆ. ಕೆರೆ ತುಂಬಿಸುವ ಯೋಜನೆಯಲ್ಲಿ ಅಳವಡಿಸಲಾದ ಪೈಪ್‌ಲೈನ್‌ಗಳು ಅಲ್ಲಲ್ಲಿ ಕಿತ್ತಿದ್ದು, ನೀರು ಚಿಮ್ಮುತಿದೆ. ಗಮನಿಸಿದ ಅಧಿಕಾರಿಗಳು ಸರಿಪಡಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಗ್ರಾಮದ ಮುಖಂಡ ಬಳಿಗಾರ ಉಮೇಶಪ್ಪ ಅವರು ದೂರಿದ್ದಾರೆ. 

ಹತ್ತಿರದಲ್ಲಿರುವ ಜಿ. ಕೋಡಿಹಳ್ಳಿ ಕೆರೆ ತುಂಬಿಸುವ ಯೋಜನೆ ಹೆಚ್ಚುವರಿಯಾಗಿ ಸೇರ್ಪಡೆಗೊಂಡಿತು. ಯೋಜನೆ 3.25 ಕೋಟಿ ಅನುದಾನ ಬಿಡುಗಡೆಯಾಗಿ ಕಾಮಗಾರಿ ಕೂಡ ಮುಗಿದಿದೆ. ಯೋಜನೆಯಿಂದ ಯಾವುದೇ ಯಂತ್ರಗಳ ಸಹಾಯವಿಲ್ಲದೆ ಪೈಪ್‌ಲೈನ್‌ ಮೂಲಕ ಜಿ.ಕೋಡಿಹಳ್ಳಿ ಕೆರೆಗೆ ನೀರು ಹರಿದು ಹೋಗುತ್ತಿದೆ. ಇದು ಎಲ್ಲರಲ್ಲೂ ಸಂತಸ ತಂದಿದೆ.

ಕಾಮಗಾರಿ ಅವೈಜ್ಞಾನಿಕ:

ಯೋಜನೆಯಂತೆ ಬನ್ನಿಕಲ್ಲು ಕೆರೆ ತುಂಬಿ ಕೋಡಿಬೀಳುವ ಜಾಗದಲ್ಲಿ ಕಾಮಗಾರಿ ಕೈಗೊಳ್ಳಬೇಕಿತ್ತು. ಆದರೆ, ಕೆರೆಯ ಅಂಗಳದ ಒಳಗೆ ಕಾಮಗಾರಿ ಕೈಗೊಂಡಿರುವುದು ಅವೈಜ್ಞಾನಿಕ ಎಂದು ಗ್ರಾಮದವರು ದೂರುತ್ತಾರೆ. ಸುಮಾರು 10 ಅಡಿಗಳಿಗೂ ಹೆಚ್ಚು ಆಳದಲ್ಲಿ ಗುಂಡಿ ಮಾಡಿ, ಕೆರೆಯೊಳಗೆ ಸುಮಾರು 20 ಅಡಿಗೂ ಹೆಚ್ಚು ಉದ್ದ ಕಾಲುವೆ ನಿರ್ಮಾಣವಾಗಿದೆ. ಇದರಿಂದ ಕೆರೆ ಖಾಲಿಯಾಗುತ್ತಿದೆ ಎನ್ನುವ ಆತಂಕ ಮನೆ ಮಾಡಿದೆ. ಕಳಪೆ ಕಾಮಗಾರಿಯಿಂದ ಗೇಟ್‌ ಕೆಳಭಾಗದಿಂದಲೂ ನೀರು ಹರಿಯುತ್ತಿದೆ. ಗ್ರಾಮದ ರೈತರು ಅಧಿಕಾರಿಗಳ ಗಮನಕ್ಕೆ ತಂದರೂ ಇಂದಿಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಆಯಕಟ್ಟಿನ ರೈತರ ಕೋಪಕ್ಕೆ ಅಧಿಕಾರಿಗಳು ಗುರಿಯಾಗಿದ್ದಾರೆ. ಕೋಡಿಹಳ್ಳಿ ರೈತರಿಗೆ ನೀರು ಕೊಡುವುದಕ್ಕೆ ವಿರೋಧವಿಲ್ಲ. ಇಲ್ಲಿ ಅವೈಜ್ಞಾನಿಕ ಕಾಮಗಾರಿ ಬಗ್ಗೆ ರೈತರ ಆರೋಪವಾಗಿದೆ.

ಸಿಂಗಟಾಲೂರು ಯೋಜನೆಯಲ್ಲಿರುವ ಕೆರೆಗಳ ತುಂಬಿಸುವ ಯೋಜನೆ ಇದಾಗಿದೆ, ನಮಗೆ ಸಂಬಂಧವಿಲ್ಲ ಎಂದು ಸಣ್ಣ ನೀರಾವರಿ ಇಲಾಖೆಯ ಎಇಇ ಪ್ರಭಾಕರ ಹಾರಿಕೆ ಉತ್ತರ ನೀಡುತ್ತಿದ್ದಾರೆ. ನಮ್ಮಲ್ಲಿ ಅನುದಾನ ಸದ್ಯಕ್ಕೆ ಇಲ್ಲ. ಮುಂದೆ ನೋಡೋಣವೆಂದು ಸಿಂಗಟಾಲೂರು ಯೋಜನೆಯ ಎಇಇ ಪ್ರಕಾಶ್‌ ರೈತರ ದಾರಿತಪ್ಪಿಸುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಕೆರೆ ಖಾಲಿಯಾಗಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ಗದ್ದಿಕರೆ ಗ್ರಾಪಂ ಅಧ್ಯಕ್ಷ ಎಚ್‌. ದೊಡ್ಡಬಸಪ್ಪ ಅವರು ಆತಂಕ ವ್ಯಕ್ತಪಡಿಸಿದ್ದಾರೆ. 

ಬನ್ನಿಕಲ್ಲು ಕೆರೆಯಿಂದ ಹೆಚ್ಚುವರಿ ಕಾಮಗಾರಿ ಕೈಗೊಂಡಿರುವ ಕಾರಣ ಕೋಡಿಹಳ್ಳಿ ಕೆರೆಗೆ ನೀರು ಹರಿಯುತ್ತಿದೆ. ಈ ಯೋಜನೆ ಅವೈಜ್ಞಾನಿಕವಾಗಿದೆ. ಗೇಟ್‌ ಬಂದ್‌ ಮಾಡಿದ್ದರೂ ಕೆಳಭಾಗದಿಂದ ನೀರು ಹರಿಯುತ್ತಲೇ ಇದೆ. ಇದರಿಂದ ನಮ್ಮ ಕೆರೆಯಲ್ಲಿ ನೀರು ಖಾಲಿಯಾಗುತ್ತಿದೆ. ಅಧಿಕಾರಿಗಳು ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಬನ್ನಿಕಲ್ಲು ಸರ್ಕಾರಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶ್ರೀಪತಿ ಅವರು ಹೇಳಿದ್ದಾರೆ.