ಮದುವೆ ಆಗದೆ ಪ್ರೇಮಿಯಿಂದ ಮಗು ಪಡೆದ ಪದವೀಧರೆ : ಮೊಮ್ಮಗು ಮಾರಿದ ಅಜ್ಜಿ!
ಮದುವೆ ಆಗದೇ ಪ್ರೇಮಿಯಿಂದ ಮಗುವನ್ನು ಪಡೆದಿದ್ದ ಸ್ನಾತಕೋತ್ತರ ಪದವೀಧರೆಯೋರ್ವಳ ಮಗುವನ್ನು ಆಕೆಯ ತಾಯಿ ಮಾರಿದ್ದು ಆದರೆ ಆಕೆ ಮತ್ತೆ ತನ್ನ ಮಗುವನ್ನು ವಾಪಸ್ ಪಡೆಯಲು ಸಫಲಳಾಗಿದ್ದಾಳೆ
ಬೆಂಗಳೂರು[ಡಿ.10]: ಮದುವೆಯಾಗದೆ ಮಗಳು ಮಗುವಿಗೆ ಜನ್ಮ ನೀಡಿದ್ದಕ್ಕೆ ಕೋಪಗೊಂಡ ಅಜ್ಜಿ ಆ ನವಜಾತ ಶಿಶುವನ್ನು ಬೇರೊಬ್ಬರಿಗೆ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಆದರೆ ಮಗು ಕಳೆದುಕೊಂಡು ಆತಂಕ್ಕೀಡಾಗಿದ್ದ ತಾಯಿ ಮಡಿಲಿಗೆ ಮಗು ಸೇರಿಸುವಲ್ಲಿ ಮಹಿಳಾ ಸಹಾಯವಾಣಿ ಕೇಂದ್ರದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನವಜಾತ ಶಿಶುವಿನ ಅಜ್ಜಿ, ಖಾಸಗಿ ಆಸ್ಪತ್ರೆ ವೈದ್ಯೆ ಮತ್ತು ಮಗು ಪಡೆದಿದ್ದ ದಂಪತಿ ಸೇರಿ ಏಳು ಮಂದಿ ವಿರುದ್ಧ ಹಲಸೂರು ಠಾಣೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬೆಳ್ಳಂದೂರು ನಿವಾಸಿ 23 ವರ್ಷದ ಸಂತ್ರಸ್ತೆ ಸ್ನಾತಕೋತ್ತರ ಪದವೀಧರೆಯಾಗಿದ್ದು, ತಾಯಿ ಜತೆ ನೆಲೆಸಿದ್ದರು. ತಾನು ವಾಸವಿದ್ದ ಏರಿಯಾದಲ್ಲಿ ಯುವಕನೊಬ್ಬನನ್ನು ಯುವತಿ ಪ್ರೀತಿಸುತ್ತಿದ್ದು, ಆತನಿಂದ ಗರ್ಭಧರಿಸಿದ್ದಳು. ಈ ವಿಚಾರಕ್ಕೆ ತಾಯಿ ಮತ್ತು ಮಗಳ ನಡುವೆ ಹಲವು ಬಾರಿ ಜಗಳ ನಡೆದಿದ್ದು, ಮಗು ತೆಗೆಸಲು ಯುವತಿ ಒಪ್ಪಿರಲಿಲ್ಲ. ನ.13ರಂದು ಯುವತಿಗೆ ಹಲಸೂರು ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ಮಗುವಿಗೆ ಪುತ್ರಿ ಜನ್ಮ ನೀಡಿದರಿಂದ ಸ್ವಲ್ಪ ಕೂಡ ಇಷ್ಟವಿಲ್ಲದ ಯುವತಿ ತಾಯಿ, ವೈದ್ಯರಿಂದ .32 ಸಾವಿರ ಹಣ ಪಡೆದು ನವಜಾತ ಶಿಶುವನ್ನು ಮಕ್ಕಳಿಲ್ಲದ ದಂಪತಿಗೆ ಮಾರಾಟ ಮಾಡಿದ್ದರು. ತನ್ನ ಪುತ್ರಿಗೆ ನವಜಾತ ಶಿಶು ಮೃತಪಟ್ಟಿದೆ ಎಂದು ಸುಳ್ಳು ಹೇಳಿದ್ದಳು. ಇದನ್ನು ನಂಬಿ ಯುವತಿ ಕೂಡ ಸುಮ್ಮನಾಗಿದ್ದಳು. ಹೆರಿಗೆಯಾದ ಹತ್ತು ದಿನದ ಬಳಿಕ ಆಸ್ಪತ್ರೆ ಸಿಬ್ಬಂದಿಯೊಬ್ಬರು ಸತ್ಯಾಂಶ ಬಾಯ್ಬಿಟ್ಟಿದ್ದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಯುವತಿ ತನ್ನ ಮಗುವನ್ನು ಕೊಡಿಸುವಂತೆ ಕೇಳಿಕೊಂಡಿದ್ದಳು. ಇದಕ್ಕೆ ಪ್ರತಿಕ್ರಿಯಿಸಿದ್ದ ಯುವತಿ ತಾಯಿ, ವಿವಾಹವಾಗದೆ, ಮಗುವಿಗೆ ಜನ್ಮ ನೀಡಿದ್ದೀಯಾ. ಇದರಿಂದ ಸಮಾಜದಲ್ಲಿ ತಲೆ ಎತ್ತಲು ಸಾಧ್ಯವಿಲ್ಲ. ಹೀಗಾಗಿ ಆ ಮಗು ನಮಗೆ ಬೇಡ ಎಂದಿದ್ದಳು. ಎಷ್ಟುಗೋಗರೆದರೂ ತಾಯಿ ಮಗುವನ್ನು ವಾಪಸ್ ಕೊಡಿಸಿರಲಿಲ್ಲ. ನೊಂದ ಯುವತಿ ಪರಿಹಾರ ಕೋರಿ ಆಯುಕ್ತರ ಕಚೇರಿಯಲ್ಲಿರುವ ವನಿತಾ ಸಹಾಯವಾಣಿಯನ್ನು ಸಂಪರ್ಕ ಮಾಡಿದ್ದರು.
ಕೂಡಲೇ ವನಿತಾ ಸಹಾಯವಾಣಿ ಸಿಬ್ಬಂದಿ ಪೂರ್ವ ವಿಭಾಗದ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ಅವರ ಗಮನಕ್ಕೆ ವಿಚಾರ ತಂದು ಹಲಸೂರು ಠಾಣೆಯಲ್ಲಿ ದೂರು ದಾಖಲು ಮಾಡಿಸಿದ್ದರು. ನಂತರ ಆಸ್ಪತ್ರೆಯ ವೈದ್ಯೆ ಮತ್ತು ನವಜಾತ ಶಿಶುವಿನ ಅಜ್ಜಿಯನ್ನು ವಿಚಾರಣೆ ನಡೆಸಿದಾಗ ಮಾರಾಟ ಮಾಡಿದ್ದ ವಿಚಾರ ಬಾಯ್ಬಿಟ್ಟಿದ್ದರು. ನಂತರ ನವಜಾತ ಶಿಶುವನ್ನು ಪತ್ತೆ ಹಚ್ಚಿ, ತಾಯಿಯ ಸುಪರ್ದಿಗೆ ಒಪ್ಪಿಸಿದ್ದಾರೆ.
ಇನ್ನು ಯುವತಿ ಮಗುವಿಗೆ ಜನ್ಮ ನೀಡಲು ಕಾರಣವಾಗಿದ್ದ ಯುವಕ, ತಾಯಿ ಮತ್ತು ಮಗುವನ್ನು ಒಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ವನಿತಾ ಸಹಾಯವಾಣಿ ಸಿಬ್ಬಂದಿ ಕೌನ್ಸೆಲಿಂಗ್ ನಡೆಸಿದ ಬಳಿಕ ಮದುವೆಯಾಗಲು ಒಪ್ಪಿಕೊಂಡಿದ್ದಾನೆ.