2 ಕಿ. ಮೀ ನದಿ ನೀರಲ್ಲಿ ಕೊಚ್ಚಿ ಹೋದರೂ ಬದುಕಿದ ಮಹಿಳೆ!
ಭೋರ್ಗರೆಯುತ್ತಿದ್ದ ಭೀಮಾ ಪಾಲಾದ್ರೂ ಪಾರಾದ ಮಹಿಳೆ!| 2 ಕಿ.ಮೀ. ಕೊಚ್ಚಿಹೋಗಿ ಪೊದೆ ಹಿಡಿದು ಬದುಕಿದಳು
ಕಲಬುರಗಿ[ಸೆ.11]: ಭೋರ್ಗರೆಯುತ್ತಿರುವ ಭೀಮಾ ನದಿಗೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದ ಮಹಿಳೆ 2.ಕಿ.ಮೀ. ಕೊಚ್ಚಿಕೊಂಡು ಹೋದರೂ ಪೊದೆಗಳ ಆಸರೆಯಿಂದ ಪವಾಡಸದೃಶ್ಯವಾಗಿ ಪಾರಾಗಿ ಬಂದಿರುವ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನಿಂದ ವರದಿಯಾಗಿದೆ. ನೇಲೂಗಿ ಗ್ರಾಮದ ನಿವಾಸಿ ವಿಜಯಲಕ್ಷ್ಮೀ ಎಂಬಾಕೆಯೇ ಇಂತಹ ಸಾಹಸ ಮೆರೆದಿರುವ ಗಟ್ಟಿಗಿತ್ತಿ ಮಹಿಳೆ.
ವಿಜಯಲಕ್ಷ್ಮೇ ಮಂಗಳವಾರ ಎಂದಿನಂತೆ ನದಿತೀರದಿಂದ ಕೊಡದಲ್ಲಿ ನೀರು ತುಂಬಿಕೊಂಡು ಮನೆಗೆ ಮರಳಬೇಕು ಎನ್ನುವಷ್ಟರಲ್ಲಿ ಕಾಲು ಜಾರಿ ಕೊಡ ಸಮೇತ ನದಿಗೆ ಉರುಳಿದ್ದಾರೆ. ಈ ಘಟನೆ ಸಂಭವಿಸಿದಾಗ ನದಿ ತೀರದಲ್ಲಿ ಯಾರೂ ಇಲ್ಲದ್ದರಿಂದ ವಿಜಯಲಕ್ಷ್ಮೇ ನೀರಲ್ಲಿ ಕೊಚ್ಚಿಕೊಂಡು 2 ಕಿ.ಮೀ. ದೂರದ ಮೈನಾಳದವರೆಗೆ ಸಾಗಿದ್ದಾರೆ. ಈ ವೇಳೆ ಕೈಗೆ ಸಿಕ್ಕ ಪೊದೆಗಳನ್ನೇ ಗಟ್ಟಿಯಾಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಅದಾಗಲೇ ನದಿ ದಡದಲ್ಲೇ ಕುರಿಗಾಹಿಗಳಾಗಿದ್ದ ಬಾಲಕರ ಗುಂಪು ನದಿಯಲ್ಲಿ ಮಾನವಾಕೃತಿ ತೇಲುತ್ತ ಬಂದು ಪೊದೆಗಳಲ್ಲಿ ಆಸರೆ ಪಡೆದದ್ದನ್ನು ಕಂಡು ಊರಲ್ಲಿರುವ ಈಜುರಾರರು, ಮೀನುಗಾರರಿಗೆ ಸುದ್ದಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿ ನದಿಗೆ ಧುಮುಕಿದ ಈಜುಗಾರರು- ಮೀನುಗಾರರು ಮಹಿಳೆಯನ್ನು ಕಾಪಾಡಿ ಸುರಕ್ಷಿತವಾಗಿ ನದಿ ಪ್ರವಾಹದಿಂದ ಮೇಲಕ್ಕೆ ತಂದಿದ್ದಾರೆ. ಈ ಸಂಗತಿಯನ್ನು ನೆಲೋಗಿ ಠಾಣೆಯ ಪೊಲೀಸರು ಧೃಢಪಡಿಸಿದ್ದಾರೆ.