ಆರೋಗ್ಯ ಇಲಾಖೆಗೆ ಕರೆ ಮಾಡಿ ಸ್ವಯಂ ತಪಾಸಣೆಗೊಳಗಾದ ಯುವತಿ
ಕೊರೋನಾ ಪೀಡಿತ ವ್ಯಕ್ತಿ ಜೊತೆ ಬಸ್‌ನಲ್ಲಿ ಪ್ರಯಾಣ ಮಾಡಿದ್ದ ಯುವತಿಯೊಬ್ಬಳು ತಪಾಸಣೆಗೆ ದಾಖಲಾಗಿದ್ದಾರೆ. ಸ್ವಯಂಪ್ರೇರಿತವಾಗಿ ಯುವತಿ ಆರೋಗ್ಯ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಆಸ್ಪತ್ರೆಗೆ ದಾಖಲಾಗಿ ಜವಾಬ್ದಾರಿ ಮೆರೆದಿದ್ದಾರೆ.
ಮಡಿಕೇರಿ(ಮಾ.22): ಕೊರೋನಾ ಪೀಡಿತ ವ್ಯಕ್ತಿ ಜೊತೆ ಬಸ್‌ನಲ್ಲಿ ಪ್ರಯಾಣ ಮಾಡಿದ್ದ ಯುವತಿಯೊಬ್ಬಳು ತಪಾಸಣೆಗೆ ದಾಖಲಾಗಿದ್ದಾರೆ. ಸ್ವಯಂಪ್ರೇರಿತವಾಗಿ ಯುವತಿ ಆರೋಗ್ಯ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಯುವತಿಯನ್ನು ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ದು ತಪಾಸಣೆ ಮಾಡಲಾಯಿತು. ಯಾವುದೇ ಲಕ್ಷಣ ಕಾಣಿಸಿಕೊಳ್ಳದಿದ್ದರೂ ಮುಂಜಾಗ್ರತೆಯಾಗಿ ಆಸ್ಪತ್ರೆಗೆ ತಪಾಸಣೆಗೆ ತೆರಳಿದ್ದು, ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸುವಂತೆ ಡಿಎಚ್‌ಒ ಮೋಹನ್ ಸೂಚನೆ ನೀಡಿದ್ದಾರೆ.
ಕೊರೋನಾ ಸಂಬಂಧ ಜಿಲ್ಲೆಯಿಂದ ವಿದೇಶಗಳಿಗೆ ಹೋಗಿ ಹಿಂತಿರುಗಿ ಬಂದಿರುವವರನ್ನು ಪತ್ತೆ ಹಚ್ಟಿತಪಾಸಣೆ ಮಾಡುವ ಕಾರ್ಯವನ್ನು ಮುಂದುವರಿಸಲಾಗಿದೆ. ಜಿಲ್ಲೆಯಲ್ಲಿ ಸೋಂಕು ತಗುಲಿರುವ ವ್ಯಕ್ತಿಗೆ ಜಿಲ್ಲಾಸ್ಪತ್ರೆಯ ಪ್ರತ್ಯೇಕ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.
ಮಹಾರಾಷ್ಟ್ರದಲ್ಲಿ ಕೊರೋನಾಗೆ 2ನೇ ಬಲಿ, ದೇಶದಲ್ಲಿ 5ಕ್ಕೇರಿದ ಸಾವಿನ ಸಂಖ್ಯೆ!
ಶನಿವಾರ ಸಂಜೆಯವರೆಗೆ ಮಡಿಕೇರಿ ತಾಲೂಕಿನಲ್ಲಿ 109, ವಿರಾಜಪೇಟೆ ತಾಲೂಕಿನಲ್ಲಿ 88 ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ 91 ಜನರನ್ನು ಪತ್ತೆ ಹಚ್ಚಲಾಗಿದೆ. ಈ ಪೈಕಿ 278 ಜನರನ್ನು (ನೆಗೆಟಿವ್ ವರದಿ ಬಂದ ಕಾರಣ ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆಗೊಂಡ ಒಂದು ಪ್ರಕರಣ ಸೇರಿದಂತೆ) ಮುನ್ನೆಚ್ಚರಿಕಾ ಕ್ರಮವಾಗಿ ಅವರವರ ಮನೆಗಳಲ್ಲಿಯೇ ಸಂಪರ್ಕ ತಡೆಯನ್ನು ಮಾಡಲಾಗಿದೆ. ಅಲ್ಲದೆ 5 ಜನ ಪ್ರವಾಸಿಗರನ್ನು ರೆಸಾರ್ಟ್/ ಹೋಂ ಸ್ಟೇಗಳಲ್ಲಿ ಸಂಪರ್ಕ ತಡೆ ಮಾಡಲಾಗಿದೆ. ಶಂಕಿತ 4 ಈ ಪ್ರಕರಣಗಳಲ್ಲಿ ಪ್ರಯೋಗಾಲಯ ವರದಿ ನಿರೀಕ್ಷಿಸಲಾಗಿದೆ.
ದುಬೈನಿಂದ ಬಂದ ವ್ಯಕ್ತಿ ಓಡಾಟ
ದುಬೈನಿಂದ ಬಂದ ವ್ಯಕ್ತಿಯೊಬ್ಬರು ಸಾರ್ವಜನಿಕವಾಗಿ ಓಡುತ್ತಿರುವುದು ಪತ್ತೆಯಾಗಿದೆ. ವಿರಾಜಪೇಟೆ ತಾಲೂಕು ಬೇಗೂರು ಕೊಲ್ಲಿಯಲ್ಲಿ ಆ ವ್ಯಕ್ತಿ ಸಾರ್ವಜನಿಕವಾಗಿ ಸಂಚರಿಸುತಿದ್ದಾರೆ. ಏರ್‌ಪೋರ್ಟ್‌ನಲ್ಲಿ ಸ್ಕ್ರೀನಿಂಗ್ ಆಗಿ ಬಂದಿದ್ದರೂ ಈ ರೀತಿ ಓಡಾಡುತ್ತಿರುವು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದಿರುವ ಶಾಸಕ ಕೆ.ಜಿ. ಬೋಪಯ್ಯ, ಆ ವ್ಯಕ್ತಿಯನ್ನು ಗೃಹಬಂಧನದಲ್ಲಿಡುವಂತೆ ಸೂಚಿಸಿದ್ದಾರೆ.