ಮದ್ದೂರು[ಫೆ.27]: ತಾಯಿಯನ್ನು ಹುಡುಕಿಕೊಂಡು 29 ವರ್ಷಗಳ ಬಳಿಕ ಸ್ವೀಡನ್‌ ದೇಶದಿಂದ ಬಂದ ಮಗಳಿಗೆ ನಿರಾಸೆ ಉಂಟಾಗಿದ್ದು, ಆಕೆಯ ತಾಯಿ ಕ್ಯಾನ್ಸರ್‌ನಿಂದ ಮೃತಪಟ್ಟಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಸ್ವೀಡನ್‌ ದೇಶದಿಂದ ಜೋಲಿ ಎಂಬುವರು ತನ್ನ ಪತಿ ಎರಿಕ್‌ ಜೊತೆ ತಮ್ಮ ಹುಟ್ಟೂರಾದ ಮದ್ದೂರು ತಾಲೂಕಿನ ದೇಶಹಳ್ಳಿಗೆ ಬಂದಿದ್ದರು. ಗ್ರಾಮಕ್ಕೆ ಆಗಮಿಸಿದ್ದ ಜೋಲಿ ಎಲ್ಲೆಡೆ ತನ್ನ ತಾಯಿ ಹಾಗೂ ಸಂಬಂಧಿಕರಿಗಾಗಿ ಹುಡುಕಾಟ ನಡೆಸಿದ್ದರು.

ಜೋಲಿ ದೇಶಹಳ್ಳಿ ಗ್ರಾಮದ ಜಯಮ್ಮ ಹಾಗೂ ಬೋರೇಗೌಡ ದಂಪತಿಯ ಪುತ್ರಿಯಾಗಿದ್ದು, 1993ರಲ್ಲಿ ಜಯಮ್ಮಗೆ ಕ್ಯಾನ್ಸರ್‌ ಕಾಣಿಸಿಕೊಂಡಿತ್ತು. ಈ ವೇಳೆಗೆ ಚಿಕಿತ್ಸೆಗೆಂದು ಜಯಮ್ಮರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾಗ, ಬಡತನದ ಕಾರಣ ಮಗಳನ್ನು ಸಾಕಲಾಗದ ಜಯಮ್ಮ ಇಂದಿರಾನಗರದಲ್ಲಿರುವ ಆಶ್ರಯ ದತ್ತು ಕೇಂದ್ರದಲ್ಲಿ 6 ವರ್ಷದ ತಮ್ಮ ಮಗಳನ್ನು ಬಿಟ್ಟು ಹೋಗಿದ್ದರು. ಈ ವೇಳೆ ಸ್ವೀಡನ್‌ ದೇಶದ ದಂಪತಿ ಜೋಲಿಯನ್ನು ದತ್ತು ಪಡೆದು ತಮ್ಮ ದೇಶಕ್ಕೆ ಕರೆದುಕೊಂಡು ಹೋಗಿದ್ದರು.

ಇತ್ತೀಚೆಗೆ ಜೋಲಿಗೆ ತನ್ನ ಆತ್ಮಹತ್ಯೆ ಮಾಡಿಕೊಂಡಂತೆ ಕನಸು ಬಿದ್ದಿದ್ದು, ಈ ಸಂಬಂದ ತನ್ನ ಸಾಕು ತಂದೆ-ತಾಯಿಯ ಬಳಿ ವಿಚಾರಿಸಿದ್ದಾಳೆ. ಆಗ ಆಕೆಯನ್ನು ದತ್ತು ಪಡೆದ ವಿಚಾರವನ್ನು ಅವರು ತಿಳಿಸಿದ್ದು, ಜೋಲಿ ತನ್ನ ಪೋಷಕರ ಹುಡುಕಿಕೊಂಡು ಮದ್ದೂರಿಗೆ ಆಗಮಿಸಿದ್ದಾಳೆ. ಆದರೆ, ದೂರದ ದೇಶದಿಂದ ಬಂದ ಆಕೆಗೆ ನಿರಾಸೆ ಎದುರಾಗಿದ್ದು, ತಾಯಿ ಮೃತಪಟ್ಟಿರುವ ಸಂಗತಿ ತಿಳಿದಿದೆ. ಅಲ್ಲದೇ ಯಾವುದೇ ಸಂಬಂಧಿಕರು ಸಿಗದ ಕಾರಣ ಆಕೆ ತನ್ನ ಪತಿಯೊಂದಿಗೆ ಮಂಗಳವಾರ ಸ್ವೀಡನ್‌ಗೆ ಹಿಂದಿರುಗಿದ್ದಾರೆ ಎಂದು ತಿಳಿದುಬಂದಿದೆ.