ಬೆಂಗಳೂರು (ಸೆ.10):  ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಸಚಿವ ಆರ್‌.ರೋಷನ್‌ ಬೇಗ್‌ ಪುತ್ರನ ಭಾವಚಿತ್ರಗಳನ್ನು ತಿರುಚಿ ಅಶ್ಲೀಲವಾಗಿ ಪೋಸ್ಟ್‌ ಮಾಡುತ್ತಿದ್ದ ಆರೋಪದ ಮೇರೆಗೆ ಯುವತಿಯೊಬ್ಬಳನ್ನು ಪೂರ್ವ ವಿಭಾಗದ ಸಿಇಎನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಲವು ದಿನಗಳಿಂದ ರೋಷನ್‌ ಬೇಗ್‌ ಪುತ್ರ ರುಮಾನ್‌ ಬೇಗ್‌ ಅವರಿಗೆ ಆರೋಪಿಯ ಪರಿಚಯವಿತ್ತು. ಆದರೆ ಇತ್ತೀಚಿಗೆ ಆಕೆಯ ವರ್ತನೆಯಿಂದ ಬೇಸರಗೊಂಡು ರುಮಾನ್‌ ದೂರವಾಗಿದ್ದರು. ಇದರಿಂದ ಕೆರಳಿದ ಆಕೆ, ರುಮಾನ್‌ ಮಾನ ಕಳೆಯಲು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಾಕಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಈ ಸಂಬಂಧ ಆ.7ರಂದು ರುಮಾನ್‌ ಬೇಗ್‌ ದೂರು ನೀಡಿದ್ದರು. ನನ್ನ ಮತ್ತು ನನ್ನ ಕುಟುಂಬ ಸದಸ್ಯರ ನಕಲಿ ಫೋಟೋ ಹಾಗೂ ಸಂದೇಶಗಳನ್ನು ಫೇಸ್‌ಬುಕ್‌ನಲ್ಲಿ ಕಿಡಿಗೇಡಿಗಳು ಫೋಸ್ಟ್‌ ಮಾಡುತ್ತಿದ್ದಾರೆ. ಇಂಟರ್‌ನೆಟ್‌ ಕರೆ ಮತ್ತು ವಾಟ್ಸ್‌ಆ್ಯಪ್‌ ಮೂಲಕ ನನ್ನ ಅತ್ತೆ ಮತ್ತು ನಮ್ಮ ಕಂಪನಿಯ ನೌಕರರು, ಸಾರ್ವಜನಿಕರಿಗೂ ಸುಳ್ಳು ಸಂದೇಶ ಕಳುಹಿಸಿ ಗೌರವಕ್ಕೆ ಧಕ್ಕೆ ಉಂಟು ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು. 

ಅದರನ್ವಯ ತನಿಖೆ ನಡೆಸಿದ ಪೊಲೀಸರು, ಮೊಬೈಲ್‌ ಕರೆಗಳು ಹಾಗೂ ಐಪಿ ಅಡ್ರೆಸ್‌ ಆಧರಿಸಿ ಆರೋಪಿಯನ್ನು ಪತ್ತೆಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.