Asianet Suvarna News Asianet Suvarna News

ಫೇಸ್‌ಬುಕ್‌ನಲ್ಲಿ ನಕಲಿ ಖಾತೆ : ನಂಬಿಸಿ ಲಕ್ಷಾಂತರ ಹಣ ಪಡೆದು ಹಲವರ ವಂಚಿಸುತ್ತಿದ್ದ ಯುವತಿ ಬಂಧನ

ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಹಲವರನ್ನು ವಂಚಿಸಿ ತನ್ನ ಬಲೆಗೆ ಹಾಕಿಕೊಂಡು ಲಕ್ಷಾಂತರ ರು. ವಂಚಿಸಿದ್ದ ಖತರ್ನಾಕ್ ಲೇಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ

Lady Arrested For Cheating through Facebook Fake Account snr
Author
Bengaluru, First Published Mar 18, 2021, 6:59 AM IST

ಮೈಸೂರು (ಮಾ.18):  ಫೇಸ್‌ಬುಕ್‌ ನಕಲಿ ಖಾತೆ ಮೂಲಕ ಎಲ್ಲರನ್ನೂ ವಂಚಿಸುತ್ತಿದ್ದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಾಮನಗರ ಜಿಲ್ಲೆ ಮಾಗಡಿಯ ಮೇಘ ಅಲಿಯಾಸ್‌ ಹರಿಣಿ (25), ಹಾಲಿ ಬೆಂಗಳೂರಿನ ಅಂದರಹಳ್ಳಿ 3ನೇ ಕ್ರಾಸ್‌ ನಿವಾಸಿಯಾಗಿದ್ದು, ಫೇಸ್‌ಬುಕ್‌ನಲ್ಲಿ ಚಿನ್ನುಗೌಡ ಚಿನ್ನುಗೌಡ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿಕೊಂಡಿದ್ದ ಈ ಯುವತಿಯು ರವಿ ಎಂಬಾತನನ್ನು ಪರಿಚಯಿಸಿಕೊಂಡಿದ್ದಾಳೆ.

ಮೈಸೂರಿನ ವಿಜಯನಗರ ವಾಟರ್‌ ಟ್ಯಾಂಕ್‌ ಬಳಿ ತಮ್ಮನ್ನು ನೋಡಿರುವುದಾಗಿ ಪರಿಚಯಿಸಿಕೊಂಡ ಮೇಘ, ತಾನು ಶ್ರೀಮಂತಳ ಮಗಳಾಗಿದ್ದು, ಎರಡು ಪೆಟ್ರೋಲ್‌ ಬಂಕ್‌ ಇದೆ ಎಂದು ನಂಬಿಸಿದ್ದಳು. ಅಲ್ಲದೆ ತನಗೆ 45 ಲಕ್ಷ ರು. ಬೆಲೆ ಬಾಳುವ ಫಾರ್ಚೂನರ್‌ ಕಾರು ಕೊಡಿಸುವುದಾಗಿ ನಂಬಿಸಿ, ಅದಕ್ಕೆ ಒಂದೂವರೆ ಲಕ್ಷ ಹಣ ಕಡಿಮೆಯಾಗಿದೆ. ಅದನ್ನು ಶಿವು ಎಂಬಾತನ ಮೂಲಕ ಕಳುಹಿಸಿಕೊಡುವಂತೆ ಹೇಳಿದ್ದಾಳೆ. ರವಿಯ ತಾಯಿ ಕುತ್ತಿಗೆಯಲ್ಲಿ ಹಾಕಿದ್ದ ಸರ ಮತ್ತು ಕಿವಿಯ ಓಲೆಯ ಡಿಸೈನ್‌ ಚೆನ್ನಾಗಿದ್ದು, ಅದರಂತೆಯೇ ಒಂದು ಜೊತೆ ಮಾಡಿಸಿಕೊಳ್ಳುತ್ತೇನೆ. ಆದ್ದರಿಂದ ಡಿಸೈನ್‌ ತೋರಿಸಲು ಆ ಒಡವೆಯನ್ನೂ ಕಳುಹಿಸಿಕೊಡುವಂತೆ ಕೋರಿದ್ದಳು.

ಇತ್ತ ಪೋಷಕರ ದೂರು..ಅತ್ತ ಪೊಲೀಸರು ಆಕ್ಟೀವ್... ಸ್ಪೆಷಲ್ ಟೀಂ ರೆಡಿ! ...

ಇದನ್ನು ನಂಬಿದ ರವಿಯು ತನ್ನ ತಾಯಿ ಬಳಿ ಇದ್ದ 85 ಗ್ರಾಂ. ಚಿನ್ನದ ಸರ ಮತ್ತು ಒಂದು ರೇಷ್ಮೆ ಸೀರೆ ಕೂಡ ಕಳುಹಿಸಿಕೊಟ್ಟಿದ್ದರು. ಹೀಗೆ ಒಟ್ಟಾರೆ 480 ಗ್ರಾಂ ಒಡವೆ ಪಡೆದ ಆಕೆಯು ಹಲವು ದಿನವಾದರೂ ಹಿಂದಿರುಗಿಸದೆ, ಆಕೆಯ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು.

ಈ ಸಂಬಂಧ ಮೇಟಗಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಆರೋಪಿ ಯುವತಿಯು ಸಿಕ್ಕಿ ಬಿದ್ದಿದ್ದಾಳೆ. ಆಕೆಗೆ ಹಣ ತಂದು ಕೊಟ್ಟಶಿವು ಕೂಡ ನೇರ ಪರಿಚಯವಿಲ್ಲ. ಶಿವು ಎಂಬಾತ ವಸಂತ ಎಂಬ ಆಟೋ ಚಾಲಕನಿಗೆ ಹಣ ಮತ್ತು ಒಡವೆ ನೀಡಿದ್ದಾನೆ. ವಸಂತ ಎಂಬಾತನ ಮೂಲಕ ಈಕೆ ಹಣ ಮತ್ತು ಒಡವೆ ಪಡೆದಿದ್ದಾಳೆ. ಜೊತೆಗೆ ವಸಂತ ಎಂಬಾತನ ಮೂಲಕವೇ ಒಡವೆ ಮಾರಾಟ ಮಾಡಿ ಹಣ ಪಡೆದಿದ್ದಳು.

ಇದಲ್ಲದೆ 2018ರಲ್ಲಿ ಸಾನ್ವಿ ಸಿರಿಗೌಡ ಹೆಸರಿನಲ್ಲಿ ಫೇಸ್‌ಬುಕ್‌ ಖಾತೆ ತೆರೆದು ಮಂಡ್ಯದ ಯೋಗಾನಂದ ಎಂಬವರನ್ನು ಪರಿಚಯ ಮಾಡಿಕೊಂಡು ತಾನು ಶ್ರೀಮಂತಳಾಗಿದ್ದು, ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 15 ಲಕ್ಷ ಪಡೆದು ವಂಚಿಸಿದ್ದಳು. ಜ್ಞಾನಭಾರತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸ್ವಾತಿಗೌಡ ಖುಷಿ ಎಂಬ ಹೆಸರಿನಲ್ಲಿ ಶ್ರೀನಿವಾಸ್‌ ಎಂಬವರನ್ನು ಪರಿಚಯ ಮಾಡಿಕೊಂಡು ತನಗೆ 8 ರಿಂದ 10 ಸಾವಿರ ಅಡಿ ಕಮರ್ಷಿಯಲ್‌ ಜಾಗ ಬೇಕು ಎಂದು ನಂಬಿಸಿ, 9.70 ಲಕ್ಷ ಪಡೆದು ವಂಚಿಸಿದ್ದಳು. ಮತ್ತೊಂದು ಪ್ರಕರಣದಲ್ಲಿ ರಾಜಿ ಮಾಡಿಕೊಂಡಿದ್ದಳು. ಪ್ರತಿಬಾರಿಯೂ ಹೊಸಬರನ್ನೇ ಪರಿಚಯಿಸಿಕೊಂಡು ಈಕೆ ಮೋಸ ಮಾಡುತ್ತಿದ್ದಳು.

ಪ್ರಕರಣ ತನಿಖೆಯಲ್ಲಿ ಡಿಸಿಪಿ ಡಾ.ಎ.ಎನ್‌. ಪ್ರಕಾಶ್‌ಗೌಡ, ಎಸಿಪಿ ಶಿವಶಂಕರ್‌ ಮಾರ್ಗದರ್ಶನದಲ್ಲಿ ಮೇಟಗಳ್ಳಿ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಮಲ್ಲೇಶ್‌, ಎಸ್‌ಐಗಳಾದ ಕೆ. ವಿಶ್ವನಾಥ್‌, ನಾಗರಾಜ್‌ ನಾಯ್‌್ಕ, ಎಎಸ್‌ಐ ಎಸ್‌. ಮಹದೇವ ಹಾಗೂ ಸಿಬ್ಬಂದಿ ರಾಜೇಶ್‌, ಮಧುಕುಮಾರ್‌, ಶಿವಕುಮಾರ್‌, ಲಿಖಿತ್‌, ಶ್ರೀಶೈಲ ಹುಗ್ಗಿ, ಮಹಿಳಾ ಸಿಬ್ಬಂದಿ ರೂಪಾ, ಆಶಾ, ಉಮಾ, ಮಣಿ ಪಾಲ್ಗೊಂಡಿದ್ದರು.

Follow Us:
Download App:
  • android
  • ios