ಕೋವ್ಯಾಕ್ಸಿನ್‌ಗೆ ತಪ್ಪದ ಪರದಾಟ..!
* ಮೊದಲ ಡೋಸ್ ಲಸಿಕೆ ಪಡೆದವರಿಗೆ 2ನೇ ಡೋಸ್ ಸಿಗದೇ ಪರದಾಟ
* ಕೋವ್ಯಾಕ್ಸಿನ್ ಲಸಿಕೆಗಾಗಿ ಲಸಿಕಾ ಕೇಂದ್ರಗಳಿಗೆ ಅಲೆದಾಡಿ ಬೇಸತ್ತ ಜನತೆ
* ಧಾರವಾಡ ಜಿಲ್ಲೆಯಲ್ಲಿ ಕೋವ್ಯಾಕ್ಸಿನ್ ಕೊರತೆ
ಬಸವರಾಜ ಹಿರೇಮಠ
ಧಾರವಾಡ(ಜು.29): ಕೋವ್ಯಾಕ್ಸಿನ್ ಲಸಿಕೆಗಾಗಿ ವ್ಯಾಕ್ಸಿನ್ ಸೆಂಟರ್‌ಗಳಿಗೆ ಅಲೆದಾಡಿ ಸಾಕಾಗಿ ಹೋಗಿದೆ. ಯಾವ ಲಸಿಕಾ ಕೇಂದ್ರಕ್ಕೆ ಹೋದರೂ ಕೋವ್ಯಾಕ್ಸಿನ್ ಸ್ಟಾಕ್ ಇಲ್ಲ ಎನ್ನುತ್ತಿದ್ದಾರೆ. ಮೊದಲ ಡೋಸ್ ಪಡೆದು ತಿಂಗಳಾಗಿ ಹೋಗಿದೆ. ಅವಧಿ ಮುಗಿಯುವ ಒಳಗೆ ಹೇಗಾದರೂ ಮಾಡಿ ನಮಗೊಂದು ವ್ಯಾಕ್ಸಿನ್ ಕೊಡಿಸಿ ಸರ್..! ಕೋವ್ಯಾಕ್ಸಿನ್ 2ನೇ ಡೋಸ್‌ಗಾಗಿ ಶಾಸಕರ ವರೆಗೂ ಹೋಗಿ ಈ ರೀತಿ ಮೊರೆ ಇಡುತ್ತಿದ್ದಾರೆ ಧಾರವಾಡ ಜನ.
ಆರೋಗ್ಯ ಇಲಾಖೆ ಅಧಿಕಾರಿಗಳ ಮುಂದಾಲೋಚನೆ, ಪೂರ್ವ ಸಿದ್ಧತೆ ಇಲ್ಲದ ಲಸಿಕಾ ಕೇಂದ್ರಗಳಿಗೆ ಅಲೆದಾಡುವ ಸ್ಥಿತಿ ಬಂದೊಂದಗಿದೆ. ಕಳೆದ ಜೂನ್ ತಿಂಗಳ 22ರಂದು ಒಂದೇ ದಿನ ದೊಡ್ಡ ಮಟ್ಟದ ಲಸಿಕಾ ಅಭಿಯಾನ ಮಾಡಲಾಯಿತು. ಅಭಿಯಾನದ ದಿನ ಸೇರಿದಂತೆ ಒಟ್ಟಾರೆ ಜೂನ್ ತಿಂಗಳಲ್ಲಿ 26420 ಜನರಿಗೆ ಕೋವ್ಯಾಕ್ಸಿನ್ ಲಸಿಕೆ ಹಾಕಲಾಗಿದೆ. ಇಷ್ಟುಪ್ರಮಾಣದ ಜನರಿಗೆ ಆರೋಗ್ಯ ಇಲಾಖೆ 2ನೇ ಡೋಸ್ ಸಹ ಇದೇ ಪ್ರಮಾಣದಲ್ಲಿ ನೀಡಲು ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಅಗತ್ಯ ಪ್ರಮಾಣದಲ್ಲಿ ತರಿಸಿಕೊಳ್ಳದ ಹಿನ್ನೆಲೆಯಲ್ಲಿ ಇದೀಗ ತೀವ್ರ ಪರದಾಟ ಶುರುವಾಗಿದೆ.
ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಕಳೆದ ಮಾಚ್‌ರ್‍ನಲ್ಲಿ 11200, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತಲಾ 6500, ಜೂನ್ ತಿಂಗಳಲ್ಲಿ 26420 ಹಾಗೂ ಜುಲೈ ತಿಂಗಳಲ್ಲಿ 12380 ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿದೆ. ಈ ಅಂಕಿ ಅಂಶ ನೋಡಿದಾಗ, ಜೂನ್ ತಿಂಗಳಲ್ಲಿ 26420 ಮೊದಲ ಡೋಸ ನೀಡಿದ್ದು, ಜುಲೈ ಅಂತ್ಯ ಬಂದರೂ ಬರೀ 12380 ಲಸಿಕೆ ಮಾತ್ರ ನೀಡಲಾಗಿದೆ. ಹೀಗಾಗಿ ಶೇ. 50ಕ್ಕಿಂತ ಹೆಚ್ಚಿನ ಜನರಿಗೆ 2ನೇ ಡೋಸ್ ಸಿಗದೇ ಪರದಾಡುವಂತಾಗಿದೆ ಎಂಬುದು ಖಚಿತವಾಗುತ್ತದೆ.
ಕೋವಿಶೀಲ್ಡ್, ಕೋವ್ಯಾಕ್ಸಿನ್ ದರ ಏರಿಕೆ!
ಭಯದಲ್ಲಿದ್ದಾರೆ ಜನ
ಕೋವ್ಯಾಕ್ಸಿನ್ ಲಸಿಕೆ ಪಡೆದು 28 ದಿನಗಳ ನಂತರದ 15 ದಿನಗಳ ಅವಧಿಯೊಳಗೆ 2ನೇ ಡೋಸ್ ಪಡೆಯಬೇಕು. ಇಲ್ಲದೇ ಹೋದಲ್ಲಿ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಲಸಿಕೆ ಹಾಕಿ ಪ್ರಯೋಜನವಿಲ್ಲ ಎಂದು ವೈದ್ಯರೇ ಹೇಳುತ್ತಾರೆ. ಆದ್ದರಿಂದ ಇದೀಗ 2ನೇ ಡೋಸ್ ಸಿಗದೇ ಜನತೆ ಭಯದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಲಾದರೂ ಆರೋಗ್ಯ ಇಲಾಖೆಯು ಎಚ್ಚೆತ್ತುಕೊಂಡು ಕೊರತೆಯಾದ ಲಸಿಕೆಯನ್ನು ಅಗತ್ಯ ಪ್ರಮಾಣದಲ್ಲಿ ತರಿಸಬೇಕೆಂಬುದು ಜನರ ಆಗ್ರಹ.
ಅವಧಿ ಮುಗಿಯುತ್ತಿದೆ..
ಮುರುಘಾಮಠದ ನೀಲವೇಣಿ ಎಂಬ ಕುಟುಂಬದ 8 ಜನರು ಕಳೆದ ಜೂನ್ 22ರಂದು ನಡೆದ ಲಸಿಕೆ ಅಭಿಯಾನದಲ್ಲಿ ಕೋವ್ಯಾಕ್ಸಿನ್ ಪಡೆದಿದ್ದಾರೆ. ಇದೀಗ ಜುಲೈ 20ಕ್ಕೆ 28 ದಿನಗಳು ಕಳೆದು ಆ. 3ರೊಳಗೆ ಕಡ್ಡಾಯವಾಗಿ 2ನೇ ಡೋಸ್ ಪಡೆಯಬೇಕು. ನೀಲವೇಣಿ ಕುಟುಂಬದ ಸದಸ್ಯದಲ್ಲಿ ಒಬ್ಬರಾದ ಪ್ರಕಾಶ ಎಂಬುವರೇ ಹೇಳುವಂತೆ, ಧಾರವಾಡದ ಸಿವಿಲ್ ಆಸ್ಪತ್ರೆ ಸೇರಿದಂತೆ ದೂರದ ಗರಗ, ಉಪ್ಪಿನ ಬೆಟಗೇರಿ, ಪೊಲೀಸ್ ಹೆಡ್ ಕ್ವಾರ್ಟರ್ಸ್ ಪ್ರಾಥಮಿಕ ಕೇಂದ್ರಗಳಿಗೆ ಹಲವು ಬಾರಿ ಹೋಗಿ ಬಂದರೂ ಕೋವ್ಯಾಕ್ಸಿನ್ ಇಲ್ಲ ಎಂಬ ಉತ್ತರವೇ ಇದೆ. ಇನ್ನು ನಾಲ್ಕೈದು ದಿನಗಳ ಒಳಗೆ ನಮಗೆ ಲಸಿಕೆ ಸಿಗದೆ ಹೋದಲ್ಲಿ ಏನು ಮಾಡಬೇಕು ಎಂಬ ಭಯ ಹುಟ್ಟಿಕೊಂಡಿದೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹೊರಗಡೆ ಲಸಿಕೆ ಪಟ್ಟಿಹಚ್ಚಿರುತ್ತಾರೆ. ಆದರೆ, ಒಳಗಡೆ ಮಾತ್ರ ಲಸಿಕೆ ಇರೋದಿಲ್ಲ. ಲಸಿಕೆ ವಿಷಯದಲ್ಲಿ ಏನಾಗುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಪ್ರಕಾಶ ಅವರು ಲಸಿಕಾಕರಣ ವ್ಯವಸ್ಥೆ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು.
ಕೊರತೆ ನೀಗಿಸುತ್ತೇವೆ.
ಜಿಲ್ಲೆಗೆ ಬಂದಿರುವ ಕೋವ್ಯಾಕ್ಸಿನ್ ಲಸಿಕೆಯನ್ನು ಆಯಾ ಲಸಿಕಾ ಕೇಂದ್ರಗಳಿಗೆ ಕಳುಹಿಸಲಾಗುತ್ತಿದ್ದು ಎರಡು ದಿನಗಳ ಹಿಂದಷ್ಟೇ 2880 ಲಸಿಕೆ ಬಂದಿದ್ದು ಹಂಚಿಕೆಯಾಗಿವೆ. ಯಾರೂ ಭಯ ಪಡುವ ಅಗತ್ಯವಿಲ್ಲ. ಲಸಿಕೆ ಬಂದ ತಕ್ಷಣವೇ ಕೇಂದ್ರಗಳಿಗೆ ಕಳುಹಿಸಿ ಕೊರತೆ ನೀಗಿಸಲಾಗುವುದು ಎಂದು ಲಸಿಕಾಕರಣದ ನೋಡಲ್ ಅಧಿಕಾರಿ ಡಾ. ಎಸ್.ಎಂ. ಹೊನಕೇರಿ ತಿಳಿಸಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಒಟ್ಟಾರೆ 63000 ಕೋವ್ಯಾಕ್ಸಿನ್, 674530 ಕೋವಿಶೀಲ್ಡ್ ಲಸಿಕೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ 42095 ಖಾಸಗಿ ಆಸ್ಪತ್ರೆಗಳಿಗೆ ನೀಡಲಾಗಿದೆ. ಒಟ್ಟಾರೆ ಇಲ್ಲಿ ವರೆಗೆ 18.5 ಲಕ್ಷ ಅರ್ಹರ ಪೈಕಿ 7.7 ಲಕ್ಷ ಜನರಿಗೆ ಮೊದಲ ಮತ್ತು 2ನೇ ಡೋಸ್ ನೀಡಲಾಗಿದೆ. ಇನ್ನೂ 10.8 ಲಕ್ಷ ಜನರು ಲಸಿಕೆ ಪಡೆಯಬೇಕಿದೆ. ಜಿಲ್ಲೆಯ 60 ಕೇಂದ್ರಗಳಲ್ಲಿ ಸದ್ಯ ಲಸಿಕೆ ನೀಡಲಾಗುತ್ತಿದೆ.