ಮಂಡ್ಯ(ಆ.29): ನಾಗಮಂಗಲ ಪಟ್ಟಣಕ್ಕೆ ಅಭಿವೃದ್ಧಿ ಎಂಬುದು ಮರಿಚಿಕೆ. 150 ಕೋಟಿ ರು. ಬಿಡುಗಡೆ ಮಾಡಿಸಿದ್ದೇನೆ ಎಂದು ಹೇಳಿಕೊಳ್ಳುವ ಶಾಸಕರಿಗೆ ಪಟ್ಟಣದ ಅವ್ಯವಸ್ಥೆ, ಮೂಲಭೂತ ಕೊರತೆಗಳ ಬಗ್ಗೆ ಗಮನವಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಸಮ್ಮಿಶ್ರ ಸರ್ಕಾರವಿದ್ದಾಗಲೇ ಏನೂ ಮಾಡದೇ ಕೇವಲ ಪ್ರಚಾರ ಗಿಟ್ಟಿಸಿಕೊಂಡವರು ಈ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವ ಸಾಧನೆ ಮಾಡುತ್ತಾರೆ ಎನ್ನುವುದು ಜನರನ್ನು ಕಾಡುತ್ತಿರುವ ಪ್ರಶ್ನೆ.

ಜನರ ಗೋಳು:

ಜನಸಂಖ್ಯೆ ಹೆಚ್ಚಾದಂತೆ ವಾಹನಗಳ ದಟ್ಟಣೆ ದಿನೇ ದಿನೇ ಹೆಚ್ಚುತ್ತಿದೆ. ಪಟ್ಟಣದಲ್ಲಿ ಆಟೋರಿಕ್ಷಾ ಹಾಗೂ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಸೂಕ್ತ ಸ್ಥಳವಿಲ್ಲದೆ ಚಾಲಕರು ಹಾಗೂ ವಾಹನ ಸವಾರರ ಪರದಾಟ ಒಂದೆಡೆಯಾದರೆ, ಮೂಲಭೂತ ಸೌಕರ್ಯವಿಲ್ಲದೆ, ವಾರದ ಸಂತೆಗೂ ಸೂಕ್ತ ಸ್ಥಳವಿಲ್ಲದೆ ಹಳ್ಳಿಯಿಂದ ಬರುವ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಗೋಳಾಡುವ ಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದಲ್ಲಿನ ನಾಗರೀಕರಿಗೆ ವ್ಯವಸ್ಥಿತ ಸಂತೆಗೆ ಅನುವು ಮಾಡಿಕೊಡಲು ಪುರಸಭೆಗೆ ಒಂದು ಸ್ವಂತ ಜಾಗವೂ ಇಲ್ಲ. ಹಿರಿಕೆರೆ ಏರಿಯ ಪಕ್ಕದಲ್ಲಿರುವ ಕಿರಿದಾದ ಸ್ಥಳವನ್ನು ಕೆಲ ಖಾಸಗಿ ವ್ಯಕ್ತಿ ಹಾಗೂ ಖಾಸಗಿ ಸಂಸ್ಥೆಗಳ ತಮಗೆ ಸೇರಿದ್ದು ಎಂದು ಹೇಳಿಕೊಳ್ಳುತ್ತಾರೆ. ಇಂತಹ ಅನಧಿಕೃತ ಜಾಗದಲ್ಲೇ ಪ್ರತಿ ಶುಕ್ರವಾರ ಸಂತೆ ನಡೆಯುತ್ತದೆ..

ಬಸ್‌ ನಿಲ್ದಾಣಕ್ಕೂ ಜಾಗವಿಲ್ಲ:

ಪಟ್ಟಣದ ಮೂಲಕ ನಿತ್ಯ ಸಂಚರಿಸುವ ಹಲವಾರು ಖಾಸಗಿ ಬಸ್‌ಗಳಿಗೆ ನಿಲ್ದಾಣದ ವ್ಯವಸ್ಥೆಯಿಲ್ಲ. ಟಿ.ಮರಿಯಪ್ಪ ವೃತ್ತದಲ್ಲಿರುವ ಒಂದೇ ನಿಲ್ದಾಣದಲ್ಲಿ ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಲುಗಡೆ ಮಾಡಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಾರೆ. ದೂರದೂರುಗಳಿಂದ ಬರುವ ಪ್ರಯಾಣಿಕರು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪುರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಪಟ್ಟಣದ ಟಿ.ಮರಿಯಪ್ಪ ವೃತ್ತ ಸೇರಿದಂತೆ, ಟಿ.ಬಿ.ಬಡಾವಣೆಯಲ್ಲಿ ಒಂದೊಂದು ಆಟೋ ರಿಕ್ಷಾ ನಿಲ್ದಾಣವಿದೆ. ಇದರ ಆಸುಪಾಸಿನಲ್ಲಿಯೇ ಬಿಂಡಿಗನವಿಲೆ, ಬೆಳ್ಳೂರು ಮಾರ್ಗದಲ್ಲಿ ಸಂಚರಿಸುವ ಆಟೋರಿಕ್ಷಾ ಚಾಲಕರು ನಿಲ್ದಾಣ ಮಾಡಿಕೊಂಡಿದ್ದಾರೆ. ಮಂಡ್ಯ ರಸ್ತೆಯಲ್ಲಿ ಎರಡು, ಮೈಸೂರು ರಸ್ತೆಯಲ್ಲಿ ಎರಡು, ಟಿ.ಬಿ.ಬಡಾವಣೆಯ ಬಿಜಿಎಸ್‌ ವೃತ್ತದ ಆಸುಪಾಸಿನಲ್ಲಿ ನಾಲ್ಕು ಹಾಗೂ ಪಡುವಲಪಟ್ಟಣ ರಸ್ತೆಯಲ್ಲಿ ಒಂದು ಆಟೋ ರಿಕ್ಷಾ ನಿಲ್ದಾಣ ಎಂಬ ಹೆಸರಿದೆಯಾದರೂ ಯಾವೊಂದು ನಿಲ್ದಾಣದಲ್ಲಿಯೂ ಆಟೋ ನಿಲ್ಲಿಸಲು ಸೂಕ್ತ ಸ್ಥಳವಿಲ್ಲ.

ವಾಹನ ದಟ್ಟಣೆ:

ಪಟ್ಟಣದ ಮೂಲಕ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿ ಮತ್ತು ಬೆಂಗಳೂರು - ಜಲಸೂರು ರಾಜ್ಯ ಹೆದ್ದಾರಿ ಹಾಯ್ದು ಹೋಗಿರುವುದರಿಂದ ದಿನಕಳೆದಂತೆ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ. ಆದರೆ ಅಧಿಕ ಸಂಖ್ಯೆಯ ಆಟೋರಿಕ್ಷಾಗಳಿಂದಾಗಿ ಪಟ್ಟಣದಲ್ಲಿ ಹೆದ್ದಾರಿಯ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ. ರಸ್ತೆ ಸುರಕ್ಷತೆಯ ಅರಿವೇ ಇಲ್ಲದ ಕೆಲ ಆಟೋ ಚಾಲಕರು ತಮಗಿಷ್ಟಬಂದ ಸ್ಥಳದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಪರಿಪಾಠ ಬೆಳೆಸಿಕೊಂಡಿದ್ದಾರೆ.

ದೊಡ್ಡಕೆರೆ, ಮಾರೇಹಳ್ಳಿ ಕೆರೆಗೆ ಶಾಸಕ ಡಾ.ಕೆ.ಅನ್ನದಾನಿ ಬಾಗಿನ

ಪರವಾನಗಿಇಲ್ಲದ ಆಟೋರಿಕ್ಷಾಗಳ ಅಡ್ಡಾದಿಡ್ಡಿ ಓಡಾಟದ ಹಾವಳಿಯಿಂದ ಪಟ್ಟಣದಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡರೂ ಸಂಬಂಧಿಸಿದ ಸಾರಿಗೆ, ಪೊಲೀಸ್‌ ಹಾಗೂ ಸ್ಥಳೀಯ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಈ ಅವ್ಯವಸ್ಥೆ ಸರಿಪಡಿಸಲಾಗದೆ ಅಸಹಾಯಕತೆಯಿಂದ ಕೈಚೆಲ್ಲಿ ಕುಳಿತಿದ್ದಾರೆ.

ರಸ್ತೆ ಮೇಲೆ ಹರಿಯುವ ಕೊಚ್ಚೆ ನೀರು:

ಪಟ್ಟಣದಲ್ಲಿ ವೈಜ್ಞಾನಿಕವಾಗಿ ಒಳಚರಂಡಿ ವ್ಯವಸ್ಥೆಯಿಲ್ಲದ ಕಾರಣದಿಂದಾಗಿ ಮಳೆಗಾಲದಲ್ಲಿ ಹರಿಯುವ ಕೊಚ್ಚೆ ನೀರು ಎಲ್ಲೆಂದರಲ್ಲಿ ಹರಿದು ಸಾರ್ವಜನಿಕರ ಆರೋಗ್ಯದ ಮೇಲೆ ಕೆಟ್ಟಪರಿಣಾಮ ಬೀರುತ್ತಿದ್ದರೂ ಸಹ ಸ್ಥಳೀಯ ಪುರಸಭೆಯ ಅಧಿಕಾರಿಗಳು ಕಣ್ಣಿದ್ದೂ ಕುರುಡರಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾಗಮಂಗಲ ಪಟ್ಟಣದಲ್ಲಿ ಸರ್ಕಾರಿ ಕಟ್ಟಡಗಳು, ಮುಖ್ಯರಸ್ತೆಗಳು ಅಭಿವೃದ್ಧಿ ಕಂಡಿದ್ದರೂ ಸಹ ಅಗತ್ಯ ಮೂಲಸೌಕರ್ಯಗಳು ಮರೀಚಿಕೆಯಾಗಿವೆ.

2 ಲಕ್ಷ ಮೌಲ್ಯದ ಬೆಳೆ ಕಳೆದುಕೊಂಡರೂ ಪರಿಹಾರ ಚೆಕ್ ವಾಪಸ್ ಮಾಡಿದ ರೈತ..!

ಮಿನಿ ವಿಧಾನಸೌಧದ ಆವರಣವೇ ವಾಹನ ನಿಲ್ದಾಣ!

ತಾಲೂಕಿನ ಆಡಳಿತ ಶಕ್ತಿಕೇಂದ್ರ ಎನಿಸಿಕೊಂಡಿರುವ ಮಿನಿವಿಧಾನಸೌಧದ ಮುಂಭಾಗದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ವಿಶಾಲವಾದ ಆವರಣವಿದೆ. ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ಪಟ್ಟಣಕ್ಕೆ ಬರುವ ಸಾರ್ವಜನಿಕರು, ಕಾರ್ಯನಿಮಿತ್ತ ಮಂಡ್ಯ ಹಾಗೂ ಮೈಸೂರಿಗೆ ಹೋಗಿಬರುವವರು ತಮ್ಮ ದ್ವಿಚಕ್ರ ವಾಹನಗಳನ್ನು ಮಿನಿ ವಿಧಾನಸೌಧದ ಮುಂಭಾಗದಲ್ಲಿ ನಿಲ್ಲಿಸಿ ಹೋಗುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಇದರಿಂದಾಗಿ ಕಚೇರಿ ಕೆಲಸಕ್ಕೆ ಬರುವ ಜನರಿಗೆ ಕಿರಿ ಕಿರಿ ಉಂಟಾಗುತ್ತಿದೆ.