ಕೊಪ್ಪಳ (ಡಿ.12): ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಸಾರಿಗೆ ಬಸ್‌ಗಳು ಸಿಗದಿದ್ದಕ್ಕೆ ಕಾರ್ಮಿಕರೊಬ್ಬರು ಪತ್ನಿ, ಮೂವರು ಮಕ್ಕಳೊಂದಿಗೆ ಬೈಕ್‌ನಲ್ಲಿ ಬೆಂಗಳೂರಿನಿಂದ ಕೊಪ್ಪಳಕ್ಕೆ(ಅಂದಾಜು 400 ಕಿ.ಮೀ. ಪ್ರಯಾಣ) ಭಾನುವಾರ ಆಗಮಿಸಿದ್ದಾರೆ. 

ಕೊಪ್ಪಳ ತಾಲೂಕಿನ ಹಳೆ ಕುಮಟಾ ನಿವಾಸಿ ರಾಮಪ್ಪ ಅವರು ಕೂಲಿ ಕೆಲಸಕ್ಕೆಂದು ಬೆಂಗಳೂರಿಗೆ ಹೋಗಿದ್ದರು. ಆದರೆ, ಮನೆಯಲ್ಲಿ ಕಾರ್ಯಕ್ರಮ ಇರುವ ಕಾರಣ ಮರಳಿ ಸ್ವಗ್ರಾಮಕ್ಕೆ ಬರಲು ಸಾರಿಗೆ ಬಸ್‌ಗಳು ಇಲ್ಲದೇ ಪರದಾಡಿದ್ದಾರೆ.

ಬೆಂಗಳೂರಿನಿಂದ ಕೊಪ್ಪಳಕ್ಕೆ ಬರಲು ಖಾಸಗಿ ವಾಹನದವರು ತಲಾ .1 ಸಾವಿರ ಹಣ ಕೇಳಿದ್ದಾರೆ. ಇಷ್ಟೊಂದು ದುಡ್ಡನ್ನು ಎಲ್ಲಿಂದ ತರುವುದು ಎಂದು ಕೊನೆಗೆ ತಮ್ಮದೇ ಬೈಕ್‌ ಮೂಲಕ ಪತ್ನಿ, ಮೂವರು ಮಕ್ಕಳೊಂದಿಗೆ ಕೊಪ್ಪಳಕ್ಕೆ ಆಗಮಿಸಿದ್ದಾರೆ.