ಬೆಂಗಳೂರಿನ ನಗರ್ತಪೇಟೆಯ ಅಂಬಿಕಾ ರಿಫೈನರಿ ಶಾಪ್‌ನಲ್ಲಿ ಘಟನೆ ನಡೆದಿದೆ. ಕಾರ್ಮಿಕ ನರೇಂದ್ರ ಸೋನಿ ಎಂಬಾತ ನೀಡಿದ ದೂರಿನ ಮೇರೆಗೆ ಅಂಗಡಿ ಮಾಲೀಕರಾದ ರಮೇಶ್‌ ಕೊಠಾರಿ, ಮಹೇಶ್‌ ಕೊಠಾರಿ, ಕಟ್ಟಡ ಮಾಲೀಕ ಸೇರಿದಂತೆ ಆರು ಮಂದಿ ವಿರುದ್ಧ ಪ್ರಕರಣ ದಾಖಲು. 

ಬೆಂಗಳೂರು(ಜು.01): ಆಭರಣ ಅಂಗಡಿಯಲ್ಲಿ ಆಕ್ಸಿಜನ್‌ ಸಿಲಿಂಡರ್‌ ಸ್ಫೋಟಗೊಂಡು ಕಾರ್ಮಿಕ ಮೃತಪಟ್ಟು ಆತನ ಪತ್ನಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಲಸೂರುಗೇಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಹಾರಾಷ್ಟ್ರ ಮೂಲದ ವಿಷ್ಣು ಅರ್ಜುನ್‌ ಸಾವಂತ್‌(35) ಮೃತ ಕಾರ್ಮಿಕ. ಈತನ ಪತ್ನಿ ವೈಜಯಂತಿಗೆ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ ಸಂಜೆ 4.30ರ ಸುಮಾರಿಗೆ ನಗರ್ತಪೇಟೆಯ ಅಂಬಿಕಾ ರಿಫೈನರಿ ಶಾಪ್‌ನಲ್ಲಿ ಈ ಘಟನೆ ನಡೆದಿದೆ. ಕಾರ್ಮಿಕ ನರೇಂದ್ರ ಸೋನಿ ಎಂಬಾತ ನೀಡಿದ ದೂರಿನ ಮೇರೆಗೆ ಅಂಗಡಿ ಮಾಲೀಕರಾದ ರಮೇಶ್‌ ಕೊಠಾರಿ, ಮಹೇಶ್‌ ಕೊಠಾರಿ, ಕಟ್ಟಡ ಮಾಲೀಕ ಸೇರಿದಂತೆ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bengaluru: ಮರಿಯಪ್ಪನ ಪಾಳ್ಯದಲ್ಲಿ ಸಿಲಿಂಡರ್ ಬ್ಲಾಸ್ಟ್: 13 ಜನರಿಗೆ ಗಾಯ

ಮೃತ ವಿಷ್ಣು ದಂಪತಿ ಅಂಬಿಕಾ ರೀಫೈನರಿ ಅಂಗಡಿಯಲ್ಲಿ ಚಿನ್ನಾಭರಣ ಕರಗಿಸುವ ಕೆಲಸ ಮಾಡುತ್ತಿದ್ದರು. ಅಂಗಡಿ ಸಮೀಪದಲ್ಲೇ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಗುರುವಾರ ಮಧ್ಯಾಹ್ನ ಕೆಲಸ ಮಾಡುವಾಗ ಸಿಲಿಂಡರ್‌ ಆನ್‌ ಮಾಡಿ ಊಟಕ್ಕೆ ತೆರಳಿದ್ದರು. ಊಟ ಮುಗಿಸಿ ಕೆಲಸ ಮಾಡಲು ದಂಪತಿ ಅಂಗಡಿಗೆ ಬಂದಾಗ ಆಕ್ಸಿಜನ್‌ ಸಿಲಿಂಡರ್‌ ಏಕಾಏಕಿ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ವಿಷ್ಣು ದಂಪತಿ ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಸ್ಥಳೀಯರು ಕೂಡಲೇ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸಂಜೆ 7.30ರ ಸುಮಾರಿಗೆ ವಿಷ್ಣು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಈತನ ಪತ್ನಿ ವೈಜಯಂತಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಭರಣದ ಅಂಗಡಿಗಳಲ್ಲಿ ಸಾಮಾನ್ಯವಾಗಿ ಚಿನ್ನ ಕರಗಿಸಲು ಎಲ್‌ಪಿಜಿ ಸಿಲಿಂಡರ್‌ ಜೊತೆ ಆಕ್ಸಿಜನ್‌ ಸಿಲಿಂಡರ್‌ ಬಳಸಲಾಗುತ್ತದೆ. ಅಂಬಿಕಾ ರೀಫೈನರಿ ಅಂಗಡಿಯಲ್ಲಿ ಆಕ್ಸಿಜನ್‌ ಸಿಲಿಂಡರ್‌ ಬಳಸಲು ಸಂಬಂಧಪಟ್ಟ ಲಾಖೆಯಿಂದ ಅನುಮತಿ ಪಡೆಯಲಾಗಿದೆಯೇ ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತಿದೆ. ಈ ಸಂಬಂಧ ಹಲಸೂರು ಗೇಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.