ಕುದುರೆಮುಖ ಶ್ರಮಶಕ್ತಿ ಸಂಘಟನೆಯ ಕಾರ್ಮಿಕರ ನಿಯೋಗವು ಕೇಂದ್ರ ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ, ಕೆಐಒಸಿಎಲ್ ಅನ್ನು ಎನ್‌ಎಂಡಿಸಿ ಜೊತೆ ವಿಲೀನಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳ ಮನವಿ ಸಲ್ಲಿಸಿತು. ಕಾರ್ಮಿಕರ ಬೇಡಿಕೆಗಳನ್ನು ಆಲಿಸಿದ ಸಚಿವರು, ಕಂಪನಿಯ ಉಳಿವಿಗಾಗಿ ಅಗತ್ಯ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಮಂಗಳೂರು: ಕುದುರೆಮುಖ ಶ್ರಮಶಕ್ತಿ ಸಂಘಟನೆಯ 40ಕ್ಕೂ ಹೆಚ್ಚು ಕಾರ್ಮಿಕರ ನಿಯೋಗ ಕೇಂದ್ರ ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ಕೆಐಒಸಿಎಲ್(ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ) ಭವಿಷ್ಯದ ಹಿತದೃಷ್ಟಿಯಿಂದ ಹಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಮನವಿ ಸಲ್ಲಿಸಿತು.
ಕಾರ್ಮಿಕರ ಬೇಡಿಕೆಗಳನ್ನು ಆಲಿಸಿದ ಹೆಚ್‌ಡಿಕೆ
ಮುಖ್ಯವಾಗಿ ಕೆಐಒಸಿಎಲ್ ಅನ್ನು ಎನ್ಎಂಡಿಸಿ(ನ್ಯಾಷನಲ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್) ಜೊತೆ ವಿಲೀನಗೊಳಿಸಬೇಕು, ಕಾರ್ಮಿಕರ ವೇತನ ಪರಿಷ್ಕರಣೆ ಮಾಡಬೇಕು ಹಾಗೂ ವಿವಿಧ ಕಾರಣಗಳಿಂದ ಅನ್ಯ ರಾಜ್ಯಗಳಿಗೆ ವರ್ಗಾವಣೆಗೊಂಡಿರುವ ಕಾರ್ಮಿಕರನ್ನು ಮರಳಿ ಕರೆಸಿಕೊಳ್ಳಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಸಚಿವರ ಗಮನಕ್ಕೆ ತರಲಾಯಿತು. ಕಾರ್ಮಿಕರ ಬೇಡಿಕೆಗಳನ್ನು ಆಲಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ, ಕಂಪನಿಯ ಉಳಿವು ಹಾಗೂ ಅಭಿವೃದ್ಧಿಗಾಗಿ ಅಗತ್ಯವಾದ ಪ್ರಯತ್ನಗಳನ್ನು ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಕೆ. ರಾಜೇಂದ್ರನ್, ಸಂಘಟನೆಯ ಅಸಿಸ್ಟೆಂಟ್ ಜನರಲ್ ಸೆಕ್ರೆಟರಿ ರಾಜ್ ಗುರು, ಚನ್ನಕೇಶವ, ಬಾಲಕೃಷ್ಣ, ಸಂಜೀವ, ಪ್ರಶಾಂತ್, ಶಿವರಾಜ್, ಮೊಕಾ ಬಸವರಾಜ, ಮುನಿರಾಜು ಸೇರಿದಂತೆ ಸಂಘಟನೆಯ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು, ಗೌರವ ಸಲಹೆಗಾರರು ಹಾಗೂ ಸಕ್ರಿಯ ಸದಸ್ಯರು ಇದ್ದರು.
ಕಂಪನಿ ಉಳಿವು, ಕಾರ್ಮಿಕರ ಹಕ್ಕುಗಳ ರಕ್ಷಣೆ ಮತ್ತು ಕಂಪನಿಯ ಪುನಶ್ಚೇತನಕ್ಕಾಗಿ ಸಂಘಟನೆಯ ಹೋರಾಟ ಮುಂದುವರಿಯಲಿದೆ ಎಂದು ಸಂಘಟನೆ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


